ನಾವು ಶಾಲೆಗೆ ಹೋಗುವೆವು

. " ನಾವು ಶಾಲೆಗೆ ಹೋಗುವೆವು... " ಅಂಗನವಾಡಿ ಎಂದರೆ ಮೊದಲು ನೆನಪಾಗುವುದೇ ಸಜ್ಜಿಗೆ.ಅದಕ್ಕೆ ಬೇರೆ ಹೆಸರಿದ್ದರೂ,ಇಲ್ಲದಿದ್ದರೂ ಅಂಗನವಾಡಿ ಸಜ್ಜಿಗೆ ಎಂದೇ ಊರ ತುಂಬಾ ಅದರದ್ದೊಂದು ಖ್ಯಾತಿ,ವಿಖ್ಯಾತಿ.ಉಪ್ಪಿಟ್ಟಿನ ರವಾ ಇಲ್ಲದಿದ್ದರೂ ಅಂದಕಾಲತ್ತಿಲ್ ಮನೆ ಮನೆಯಲ್ಲಿ ಈ ಅಂಗನವಾಡಿ ಸಜ್ಜಿಗೆಯದ್ದೊಂದೇ ಒಟ್ರಾಶಿ ಹವಾ. ಎರಡು,ಮೂರು ಮಕ್ಕಳಿದ್ದು ಬಿಟ್ಟರೆ ಮನೆಯಲ್ಲಿ ಈ ಅಂಗನವಾಡಿ ಸಜ್ಜಿಗೆ ಪ್ಯಾಕೇಟುಗಳು ಹಾಗೇ ಬಂದು ಅಟ್ಟಿ ಬೀಳುತ್ತಿದ್ದವು;ಈಗ ಕುಚಲಕ್ಕಿ ಪ್ರಿಯರ ಮನೆಯಲ್ಲಿ,ರೇಷನಿನ್ನ ಬಿಳಿಕುಚಲಕ್ಕಿ ಗೋಣಿಗಳು ರಾಶಿ ಬೀಳುವಂತೆ.ಆ ಸಮಯದಲ್ಲಿ ಅಮ್ಮ ಈ ಸಜ್ಜಿಗೆ ಹಿಟ್ಟಿನಲ್ಲಿ ತನ್ನದೊಂದು ಪಾಕ ಪ್ರಾವೀಣ್ಯತೆಯನ್ನು ತೋರಿಸಲು ಒಂದಿಷ್ಟು ಮಂಡೆ ಓಡಿಸುತ್ತಿದ್ದಳು.ಅದರಿಂದ ಸಜ್ಜಿಗೆ ದೋಸೆಯಂತೆ,ಸಜ್ಜಿಗೆ ರೊಟ್ಟಿಯಂತೆ ಇನ್ನೂ ಏನೇನೋ ಪ್ರಯೋಗಗಳು ಅವಳದ್ದು.ಈಗಿನ ಪಾಕ ಪ್ರವೀಣೆಯರು ಹೊಸ ರುಚಿ,ನಳಿನಿ ಪಾಕ ಎಂದೆಲ್ಲಾ ಮಾಡುತ್ತಾರಲ್ಲಾ ಹಾಗೆಯೇ.ಆವಾಗ ಎಲ್ಲಾ ತಾಯಂದಿರಿಗೆ ಅಡುಗೆ ಮನೆಯಲ್ಲಿ ಪ್ರಯೋಗಕ್ಕೊಂದು ಅವಕಾಶ ಕಲ್ಪಿಸಿದ್ದೇ ಈ ಅಂಗನವಾಡಿ ಸಜ್ಜಿಗೆ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲವೆನೋ. ನಮ್ಮಲ್ಲಿನ ನೀರ್ದೋಸೆ, ಕಪರೊಟ್ಟಿ,ಕೊರ್ರೊಟ್ಟಿ ಎಲ್ಲಾ ತಿಂದುಂಡ ನಾಲಿಗೆಗೆ ಈ ಸಜ್ಜಿಗೆಯ ದೋಸೆ,ರೊಟ್ಟಿಗಳು ...