ಪಯ್ಯನ ಪರಾಕ್ರಮ

 


                                       #ನೀಲಮೇಘ

                                (  ಪಯ್ಯನ ಪರಾಕ್ರಮ )





ಒಂದು ಮದುವೆಗೆ ಹೋಗಿದ್ದೆ.ಕೇವಲ ಅಷ್ಟೇ ಹೇಳಿ ಬಿಟ್ಟರೆ ಅದು ನನಗೆ ನಾನೇ ಮಾಡಿಕೊಳ್ಳುವ ಮೋಸ,ವಂಚನೆ ಹಾಗೂ ಬಹುತ್ ಬಡಾ ದ್ರೋಹ.ಮದುವೆ ಊಟಕ್ಕೆಂದೇ ಹೋಗಿದ್ದೆ ಎಂದು ಮುಜುಗರವಿಲ್ಲದೆ ನೇರವಾಗಿ ಹೇಳಿ ಬಿಟ್ಟರೆ ಆಗ ನಾನು ಬಹಳಷ್ಟು ನಾನೇ ಎಂದು ಅನ್ನಿಸಿಕೊಳ್ಳುತ್ತೇನೆ.



ಊಟ ನಿಜಕ್ಕೂ ಚೆನ್ನಾಗಿರಲಿಲ್ಲ.ಎಷ್ಟೇ ಆಡಂಬರದಲ್ಲಿ ಮದುವೆ ಮಾಡಿದರೂ,ವರ ಕುದುರೆಯಲ್ಲಿಯೇ ಜಿಗಿದು ಕುಣಿದು ಕುಪ್ಪಳಿಸಿ ಮದುವೆಯ ಹಾಲಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟರೂ,ಕೆಜಿಗಟ್ಟಲೆ ಬಂಗಾರವನ್ನು ತೊಡಿಸಿ ವಧುವಿಗೆ ಒಂದು ರೀತಿಯ ದೈಹಿಕ ಹಲ್ಲೆ ಮಾಡಿಬಿಟ್ಟರೂ,'ಆಶೀರ್ವಾದವೇ ಉಡುಗೊರೆ' ಎಂದು ಲಗ್ನಪತ್ರಿಕೆಯ ಕೆಳಗೆ ದಪ್ಪ ಅಕ್ಷರಗಳಲ್ಲಿ ಎದ್ದುಕಾಣುವಂತೆ ಬರೆಸಿಕೊಂಡರೂ ಈ ಮದುವೆಯ ಊಟ ಒಂದು ಚೆನ್ನಾಗಿರದೆ ಹೋದರೆ,ಚೆನ್ನಾಗಿದ್ದರೂ ಮಾಡಿಟ್ಟ ಊಟವನ್ನು ಸರಿಯಾಗಿ ಸಮರ್ಪಕವಾಗಿ ಎಲ್ಲರಿಗೂ ಬಡಿಸದಿದ್ದರೆ ಆಗ ಆ ಅದ್ದೂರಿ ಸಂಭ್ರಮಕ್ಕೆನೇ ಅದೊಂದು ಕಪ್ಪು ಚುಕ್ಕೆ.


ಆಗ ಮದುವೆ ಊಟಕ್ಕೆ ಬಂದವರು ವಧುವರರಿಗೆ ಮನಸಾರೆ ಹರಸದಿದ್ದರೂ ಹಿಡಿ ಶಾಪ ಹಾಕಲು ಮಾತ್ರ ಹಿಂದೆ ಮುಂದೆ ನೋಡುವುದೇ ಇಲ್ಲ.ಎಲ್ಲರೂ ವರ ಬಲದಿಂದ ಮೆರೆಯುವ ಸಿದ್ದಿಪುರುಷರಂತೆ ನಾ ಮುಂದು ತಾ ಮುಂದು ಶಾಪ ಕೊಟ್ಟು ಮದುವೆ ಮನೆಯವರನ್ನು ಶಾಪಗ್ರಸ್ತರನ್ನಾಗಿ ಮಾಡಲು ಕ್ಯೂ ನಿಂತು ಬಿಡುತ್ತಾರೆ.



ಇಲ್ಲಿಯೂ ಹಾಗೇ ಆಯಿತು.ಕೊನೆಯ ಪಂಕ್ತಿಗಿಂತ ಸ್ವಲ್ಪ ಮುಂಚೆ ಊಟಕ್ಕೆ ಉಳಿತ ನನಗೆ ಈ ಗೋಬಿ ಮಂಚೂರಿ ಹಾಗೂ ಐಸ್ ಕ್ರೀಮ್ ಸ್ಲ್ಯಾಬ್ ಗಳು ಮೆನುವಿನ ಲಿಸ್ಟ್ ನಿಂದಲೇ ಮಂಗ ಮಾಯವಾಗಿ ಬಿಟ್ಟಿದ್ದವು.ನಾನು ಕಾದಿದ್ದೇ ಬಂತು;ಕೊನೆಯವರೆಗೂ ಅದೆರಡು ಎಲೆಯತ್ತ ಸುಳಿದಾಡಲೇ ಇಲ್ಲ.ಅದೊಂದು ಕರಿಯಲ್ಲಿ ಕಾಣಿಸಿಕೊಂಡ ಕ್ಯಾಪ್ಸಿಕಂ ತುಂಡುಗಳು ಪತನಗೊಂಡ ಭವ್ಯ ಪನ್ನೀರ್ ಸಾಮ್ರಾಜ್ಯದ್ದೊಂದು  ಕತೆಯನ್ನು ಹೇಳುತ್ತಿದ್ದವು.


ಎಲೆಯ ಮೇಲೆ ಇಪ್ಪತ್ತು ಮೂವತ್ತು ತರಹೇವಾರಿ ಮಚ್ ಮಚ್ ಐಟಂಗಳನ್ನು ತೋಡ ತೋಡ ಬಡಿಸಿದರೂ ನನಗೆ ಅದು ಯಾವುದೂ ಒಂಚೂರು ರುಚಿ ಅನಿಸಲೇ ಇಲ್ಲ.ಅನ್ನದ ಮೇಲೆ ಬಿದ್ದಂತಹ ಆ ನೀರಸ ಟೊಮೆಟೊ ಸಾರು ನಮ್ಮ ಪುಲ್ಕಿ ಗೋಪಾಲಕೃಷ್ಣ ದೇವಸ್ಥಾನದ ಅಡುಗೆ ರಾಮ್ ಭಟ್ರು ಮಾಡುವ ಘಮದ ಸಾರಿಗೆ ಎಲ್ಲಿಯೂ ಒಂಚೂರು ಸರಿ ಸಾಟಿಯಾಗಲಿಲ್ಲ.ಇದಕ್ಕಿಂತ ಬೈಲು ಮನೆಯ ಅಂಬಕ್ಕನ ಪುನರ್ಪುಳಿ ಸಾರೇ ಅದೆಷ್ಟು ರುಚಿ ಎಂದು ಒಮ್ಮೆ ಅಂದುಕೊಂಡೆ. 


ಆದರೂ ಯಾರಿಗೂ ಶಾಪ ಹಾಕದೆ ಒಂದರ ಬದಲು ಎರಡು ಸ್ವೀಟ್ಸ್ ಬಾಕ್ಸ್ ಗಳನ್ನು ಕೇಳಿಯೇ ಪಡೆದುಕೊಂಡು,ನೂರು ಕಾಲ ಸುಖವಾಗಿ ಬಾಳಿ ಎಂದು ವಧು ವರರಿಗೆ ನಗು ನಗುತ್ತಾ ಕೈ ಕುಲುಕಿದೆ." ಊಟ ಮಾಡಿಕೊಂಡೇ ಹೋಗಬೇಕು.."ಎಂದು ನಗುತ್ತಾ ಹೇಳಿದ ವರನಿಗೆ " ನೋಡಿ ಎರಡು ಸ್ವೀಟ್ಸ್ ಬಾಕ್ಸ್,ಊಟ ಆಗಲೇ ಆಗಿಯಿತು,ಗೋಬಿ ಮಂಚೂರಿಯಂತು ಬಹಳ ಇಷ್ಟವಾಯಿತು.." ಎಂದು ಯಾವುದೇ ಕಪಟವಿಲ್ಲದೆ ಮೆಚ್ಚುಗೆ ಸೂಚಿಸಿ ಅಲ್ಲಿಂದ ಹೊರಟು ಸಂಜೆಯ ವೇಳೆಗೆ ಮನೆ ತಲುಪಿದೆ.


ಅಪ್ಪ ಮಹಡಿಯ ಮನೆಯ ಅನುರಾಧನ ಮನೆಗೆ ಹೋಗಿದ್ದರು.ಮನೆಯಲ್ಲಿ ಒಬ್ಬನೇ ಇದ್ದೆ.ಸ್ವೀಟ್ಸ್ ಬಾಕ್ಸ್ ತರೆದು ನೋಡಿದರೆ ಅದರಲ್ಲೂ ನನಗೆ ಇಷ್ಟವಾಗದ ಸಿಹಿಗಳೇ ಹೇರಳವಾಗಿ ತುಂಬಿಕೊಂಡಿದ್ದವು.ಎರಡೂ ಬಾಕ್ಸ್ ನಲ್ಲಿದ್ದ ಹುರಿದ ಗೋಡಂಬಿಗಳನ್ನಷ್ಟೇ ಎತ್ತಿಕೊಂಡು ನಿಧಾನವಾಗಿ ಮುಕ್ಕತೊಡಗಿದೆ. 


ಮದುವೆ ಮನೆಯಲ್ಲಿ ಸರಿಯಾಗಿ ಊಟ ಮಾಡದ ಕಾರಣ ಹೊಟ್ಟೆ ಇನ್ನೂ ತಾಳ ಹಾಕುತ್ತಲೇ ಇತ್ತು.ನನಗೆ ಸ್ವಲ್ಪವೇ ತಿನ್ನಲಿ ಅದನ್ನು ಸರಿಯಾಗಿ ತಿನ್ನದಿದ್ದರೆ ಸಮಾಧಾನವೇ ಆಗುವುದಿಲ್ಲ.ಕೆಟ್ಟ ಊಟದ ಅನುಭವದ ನಂತರ ಇನ್ನೊಂದು ಏನಾದರೂ ಚೆನ್ನಾಗಿರುವುದನ್ನು ತಿಂದರಷ್ಟೇ ಮನಸ್ಸಿಗೆ ನೆಮ್ಮದಿ. 



ಆಗಲೇ ಮೊಬೈಲ್ ರಿಂಗಣಿಸಿದ್ದು. ನೋಡಿದರೆ ಅದು ಬೈಲು ಮನೆಯ ರುಕ್ಕುವಿನದ್ದು.ರುಕ್ಕು ಅನುರಾಧಳ ತಂಗಿ ಹಾಗೂ ಪೊಲ್ಲನ ಅಕ್ಕ.ರುಕ್ಮಿಣಿಯನ್ನು ರುಕ್ಕು ಎಂದು,ಪುರಂದರನನ್ನು ಪೊಲ್ಲ ಎಂದು ಕರೆದೇ ಅಭ್ಯಾಸ.


" ಎಂತದಾ ರುಕ್ಕು,ಏನು ವಿಷಯ ಹೇಳು..." ಅಂದೆ ಎಂದಿನಂತೆ ಉಡಾಫೆಯ ಧ್ವನಿಯಲ್ಲಿ. 


" ಮನೆಗೆ ಬನ್ನಿ..." ಅಂದಳು ಅವಳು ನುಲಿಯುತ್ತಾ.


" ಶುರುವಿಗೆ ವಿಷಯ ಎಂತ ಅಂತ ಹೇಳಾ,ಆಮೇಲೆ ನೋಡುವ..." ಅಂದೆ.


" ಮೊಟ್ಟೆ ಇದೆ.." ಅಂದಳು ಅವಳು.


" ಎಷ್ಟಿದೆ? " ಎಂದು ಕೇಳಿದ ನನ್ನ ಕಣ್ಣುಗಳು ಹಾಗೇ ಮತ್ತಷ್ಟು ಅರಳಿಕೊಂಡವು.


" ಆರೋ,ಏಳೋ ಇರಬೇಕು..ನಿಮಗೆ ಅದ್ಯಾಕೆ,ಅಮ್ಮ ಕೂಡ ಕರೆಯುತ್ತಿದ್ದಾರೆ,ರಪ್ಪ ಬನ್ನಿ.. " ಅಂದಳು.


ಅವಳ ಪಕ್ಕದಲ್ಲಿಯೇ ಇದ್ದ ಪೊಲ್ಲ " ನೀಲು ಅಣ್ಣ ಬಾ..ನಾವು ಆಮ್ಲೆಟ್ ಮಾಡಿ ಇಲ್ಲವೇ ಬೇಯಿಸಿ ಉಪ್ಪಿನ ಹುಡಿ,ಮೆಣಸಿನ ಹುಡಿ ಎಲ್ಲಾ ಹಾಕಿ ತಿನ್ನುವ.ನಿನಗೆ ಊರ ಕೋಳಿಯ ಮೊಟ್ಟೆ ಇಷ್ಟ ಅಲ್ವಾ.ಅದಕ್ಕೆ ನಾನೂ ತಿನ್ನದೇ,ಅಕ್ಕನಿಗೂ ತಿನ್ನಲು ಬಿಡದೇ ನಿನಗಾಗಿ ಹಾಗೇ ಇಟ್ಟಿದ್ದೇನೆ,ರಪ್ಪ ಬಾ..ನಾನು ರುಕ್ಕು ಅಕ್ಕ ಕಾಯ್ತಾ ಇರ್ತೇವೆ.. " ಎಂದು ಪೊಲ್ಲ ಜೋರಾಗಿ ಹೇಳಿದ್ದು ನನಗೆ  ಮಧುರವಾಣಿಯಂತೆ ಕೇಳಿತ್ತು.


ಆಹಾ.. ಊರ ಕೋಳಿ ಮೊಟ್ಟೆ,ಎಷ್ಟು ದಿನ ಆಯಿತು ತಿನ್ನದೆ. ಮದುವೆಯ ಸಪ್ಪೆ ಊಟದ ನೆನಪು ಮರೆಯಲ್ಲಿಕ್ಕೆ ಇದಕ್ಕಿಂತ ಬೇರೆನು ಬೇಕು ಎಂದು ರಪ ರಪನೆ ಚಪ್ಪಲಿ ಹಾಕಿಕೊಂಡು ನಮ್ಮ ಮನೆಯಿಂದ ಕೆಳಗಿದ್ದ ಬೈಲುಮನೆಯ ಅಂಬಕ್ಕನ ತೋಟದ ಮನೆ ಕಡೆಗೆ ನಡೆಯ ತೊಡಗಿದೆ.ಬೈಲುಮನೆಯ ನಾಯಿ ಪೊಂಕ್ರ ಹೆಚ್ಚಾಗಿ ನಮ್ಮನೆಯಲ್ಲಿಯೇ ಇರುವುದು.ಅವನೂ ಸಹ ನನ್ನ ಜೊತೆ ಬಾಲ ಅಲ್ಲಾಡಿಸುತ್ತಾ ಅವನ ಮನೆಯ ಕಡೆಗೆಯೇ ಆ ಗದ್ದೆಯ ಬದುಗಳಲ್ಲಿ ನಡೆಯತೊಡಗಿದ. 



ಅಂಬಕ್ಕನ ಮನೆಗೆ ಹೋದಾಗ ಪೊಲ್ಲ,ರುಕ್ಕು ನನ್ನ ದಾರಿಯನ್ನೇ ಬಕ ಪಕ್ಷಿಗಳಂತೆ ಕಾಯುತ್ತಿದ್ದರು.ಮೊಟ್ಟೆಗಳನ್ನು ಬೈಹುಲ್ಲು ಹಾಕಿಟ್ಟ ಬುಟ್ಟಿಯೊಳಗೆ ಇಟ್ಟುಕೊಂಡು ನನ್ನನ್ನೇ ಎದುರು ನೋಡುತ್ತಿದ್ದರು.ನಾನು ಬರದೇ ಮೊಟ್ಟೆಗಳನ್ನು ಅವರು ಕೂಡ ಬೇಯಿಸಲಾರರು.ಒಳ್ಳೆಯದನ್ನು ಕೆಟ್ಟದನ್ನು ಒಟ್ಟಿಗೆ ಸೇರಿ ಮಾಡಿಯೇ ಅಭ್ಯಾಸ.ಅಂಬಕ್ಕನನ್ನು ಕಾಂತಪ್ಪಣ್ಣನನ್ನು ಮಾತಾಡಿಸಿ ನಾನು ರುಕ್ಕು ಮತ್ತು ಪೊಲ್ಲ ಮನೆಯ ಹೊರಗಿನ ಬಚ್ಚಲು ಮನೆಯ ಪಕ್ಕದ ಕಲ್ಲಿನ ಒಲೆಯ ಮುಂದೆ ಕುಕ್ಕರುಗಾಲಿನಲ್ಲಿ ಕುಳಿತುಗೊಂಡೆವು.


ಬೈಲು ಮನೆಯಲ್ಲಿ ಮೊಟ್ಟೆ ಬೇಯಿಸಿಕೊಳ್ಳುವುದು ಯಾವಾಗಲೂ ನಾವೇ.ನಮಗೆ ಅದರಲ್ಲಿ ಏನೋ ಒಂಥರಾ ಖುಷಿ ಇದೆ.ಇದೊಂದು ಕೆಲಸವನ್ನು ನಾವು ಬಾಲ್ಯದಿಂದಲೂ ಇಷ್ಟಪಟ್ಟೇ ಮಾಡುತ್ತಾ ಬಂದಿದ್ದೇವೆ.


ರುಕ್ಕು ರಪ ರಪನೆ ಒಣ ಸೌದೆ ಎಲ್ಲಾ ಜೋಡಿಸಿ ಕಡ್ಡಿ ಗೀರಿ ಒಲೆಗೆ ಬೆಂಕಿ ಸ್ಪರ್ಶ ಮಾಡಿದಳು.ಪೊಲ್ಲ ಒಂದು ಪಾತ್ರೆಯಲ್ಲಿ ನೀರು ಹಾಕಿ ಅದನ್ನು ಒಲೆಯ ಮೇಲೆ ತಂದು ಇಟ್ಟ.ನಾನು 'ಮಾಸ್ಟರ್ ಶೆಫ್ ಪುಲ್ಕಿ' ಬುಟ್ಟಿಯೊಳಗಿನಿಂದ ಒಂದೊಂದೇ ಮೊಟ್ಟೆಗಳನ್ನು ಜಾಗ್ರತೆಯಿಂದ ತೆಗೆದು ಪಾತ್ರೆಯೊಳಗೆ ಹಾಕಿದೆ.ಸರಿಯಾಗಿ ಏಳು ಮೊಟ್ಟೆಗಳಿದ್ದವು.ಮೂವರೂ ಮತ್ತೆ ಒಲೆಯ ಮುಂದೆ ಕುಳಿತುಕೊಂಡೆವು.ಪಕ್ಕದಲ್ಲಿಯೇ ನಾಯಿ ಪೊಂಕ್ರ ಕೂಡ ನಮ್ಮೊಡನೆ ಆಸೀನನಾದ. 


ಮೊಟ್ಟೆ ಬೇಯುವವರೆಗೆ ಏನಾದರೊಂದು ಅಧಿಕ ಪ್ರಸಂಗ ಮಾತಾಡದಿದ್ದರೆ ಈ ಅಕ್ಕ ತಮ್ಮನಿಗೆ ತಿಂದ ಅನ್ನ ಕರಗುವುದಿಲ್ಲ ಅದರಲ್ಲೂ ಪೊಲ್ಲನಿಗೆ ಅದಂತು ಅವನ  ಜೀವಮಾನದಲ್ಲಿಯೇ ಸಾಧ್ಯವಿಲ್ಲ ಎನ್ನುವುದು ನನಗಂತು ಬಹಳಷ್ಟು ಖಚಿತವಾಗಿ ಗೊತ್ತಿತ್ತು.ಇವನು ಈಗ ಏನಾದರೂ ಶುರು ಮಾಡಬೇಕಲ್ಲ ಎನ್ನುವಾಗಲೇ ಅವನ ರಾಮಾಯಣ ಶುರುವಾಗಿ ಬಿಟ್ಟಿತು. 


" ನೀಲು ಅಣ್ಣ.. ಕಾಲೇಜಿಗೆ ಒಂದು ವಾರ ರಜೆ ಇದೆ.ನಾನು ಅಜ್ಜಿಮನೆ ಪಲ್ಕೆಗೆ ಹೋಗುತ್ತಿದ್ದೇನೆ,ನೀನೂ ಬಾ.. ನಾವು ಅಲ್ಲಿ ಗಮ್ಮತ್ ಮಾಡುವ.. " ಎಂದು ಶುರು ಮಾಡಿದ ಪೊಲ್ಲ. 


ಅವನು ನನ್ನನ್ನು ಎಲ್ಲಿ ಹೋದರೂ ಕರೆದೇ ಕರೆಯುತ್ತಾನೆ.ಆದರೆ ನನಗೆ ಈ ಪೊಲ್ಲ ಮತ್ತು ರುಕ್ಕು ಜೊತೆಗೆ ಎಲ್ಲಿಗಾದರೂ ಹೋಗುವುದೆಂದರೆನೇ ಸಿಕ್ಕಾಪಟ್ಟೆ ಭಯ.ಏಕೆಂದರೆ ಇವರಿಬ್ಬರು ನನ್ನ ಮಾನ್-ಸಮ್ಮಾನ್ ಅನ್ನು ಎತ್ತಿ ಹಿಡಿಯುವ ಕೋಶಿಶ್ ನಲ್ಲಿ ಪ್ರತೀ ಸಲವೂ ಅದನ್ನು ಹರಾಜು ಹಾಕಿದ ಉದಾಹರಣೆಗಳೇ ಜಾಸ್ತಿ.ಅವರಿಬ್ಬರು ನನ್ನೊಡನೆ ಸೇರಿದರೆ ಪರಿಸ್ಥಿತಿಗಳು ನನಗೆ ಯಾವಾಗಲೂ ಮುಶ್ಕಿಲ್ ಅನಿಸುವುದಿದೆ. 


" ಗಮ್ಮತ್ ಮಾಡಲು ಅಲ್ಲಿ ಏನಿದೆ ಅಂತಹದ್ದು,ನಮ್ಮ ಪುಲ್ಕಿಯಲ್ಲಿ ಇರದೇ ಇರುವಂತಹದ್ದು.." ಎಂದು ಒಲೆಯ ಬೆಂಕಿ  ಶಾಖಕ್ಕೆ ಕೈ ಒಡ್ಡುತ್ತಲೇ ಹೇಳಿದೆ. 


" ಅಣ್ಣ ಅಲ್ಲಿಯ ಗಮ್ಮತೇ ಬೇರೆ.ಅಲ್ಲಿ ನಮ್ಮ ಊರಿಗಿಂತ ದೊಡ್ಡ ಕಾಡಿದೆ.ಅಜ್ಜಿ ಮನೆಯವರು ಆವಾಗವಾಗ ಶಿಕಾರಿಗೆ ಕೂಡ ಹೋಗ್ತಾನೆ ಇರ್ತಾರೆ.ನಾವು ಕೂಡ ಅವರೊಟ್ಟಿಗೆ ಶಿಕಾರಿಗೆ ಹೋಗುವ.ನಿನಗೆ ನಮ್ಮ ಪಯ್ಯ ಬಾವನ ಬಗ್ಗೆ ಗೊತ್ತಿಲ್ಲ,ಅವನು ಬೇಟೆಯಲ್ಲಿ ಕಲಿಪುರುಷ.ನೀನು ಇಲ್ಲಿ ಬರೀ ಊರ ಕೋಳಿಗಳನ್ನು,ಅಂಕದ ಕೋಳಿಗಳನ್ನು ಅಷ್ಟೇ ತಿಂದದ್ದು ಅಲ್ಲಾ..ಅಲ್ಲಿಗೆ  ಹೋದರೆ ಬೇಕಾದಷ್ಟು ರುಚಿಕರ ಕಾಡುಕೋಳಿಗಳನ್ನೇ ನೀನು ಚಪ್ಪರಿಸಿ ತಿನ್ನಬಹುದು ..."ಎಂದು ಹೇಳಿ ನನ್ನ ಬಾಯಿಯ ರುಚಿ ಚಪಲವನ್ನು ಇನ್ನಷ್ಟು ಹೆಚ್ಚಿಸಿದ.ಮೊದಲೇ ಮದುವೆಯ ಕೆಟ್ಟ ಊಟದ ಅನುಭವದಿಂದ ನೊಂದು ಬೆಂದಿದ್ದ ನಾನೀಗ ಕಾಡುಕೋಳಿಗಳ ಕನಸನ್ನು ಆ ಒಲೆಯ ಮುಂದೆ ಕಾಣತೊಡಗಿದೆ. 


" ಹೌದು ಹೋಗೋಣ...ನಾನು ಸ ಬರ್ತೇನೆ. ನಾನು ಒಮ್ಮೆ ಸ ಶಿಕಾರಿ ನೋಡ್ಲಿಲ್ಲ..." ಒಲೆಗೆ ಓಂಟೆಯಲ್ಲಿ ಇನ್ನಷ್ಟು ಗಾಳಿ ಊದುತ್ತಾ,ಬೆಂಕಿ ಹೆಚ್ಚು ಮಾಡುತ್ತಾ ಉತ್ಸಾಹದಿಂದ ಹೇಳಿದಳು ರುಕ್ಕು. 


" ಎಂತದಾ.. ನಿಂಗೆ ಭಾಷೆ ಉಂಟನಾ.ಶಿಕಾರಿಗೆ ಯಾರಾದರೂ ಹುಡುಗಿಯರು ಬರ್ತಾರಾ..ಬೇಡ ಬೇಡ...ನೀನು ಬರುದೇ ಬೇಡ..ನಾನು ಪೊಲ್ಲ ಇಬ್ಬರೇ ಹೋಗ್ತೇವೆ,ಅಷ್ಟೇ.." ಎಂದು ಹೇಳಿ ಪಾತ್ರೆಯಲ್ಲಿ ಬೇಯುತ್ತಿದ್ದ ಮೊಟ್ಟೆಗಳನ್ನು ಸೌಟಿನಲ್ಲಿ ಎತ್ತಿ ಬೆಂದಿದೆಯಾ ಎಂದು ಪರೀಕ್ಷಿಸತೊಡಗಿದೆ. 


ಮೊಟ್ಟೆಯ ಸಿಪ್ಪೆಗಳು ಒಡೆದಿದ್ದವು.ಎಲ್ಲಾ ಮೊಟ್ಟೆಗಳು ಚೆನ್ನಾಗಿಯೇ ಬೆಂದಿದ್ದವು.ಪೊಲ್ಲ ಮನೆಯ ಒಳಗೆ ಹೋಗಿ ಬಿಸತ್ತಿ,ಮೆಣಸಿನ ಹುಡಿ,ಉಪ್ಪಿನ ಹುಡಿಗಳನ್ನು ತಂದ.ಕಾಂತಪ್ಪಣ್ಣ ನಮಗೆ ಮೊಟ್ಟೆ ತಿನ್ನಲು ಒಂದು ದೊಡ್ಡ ಪ್ಲೇಟ್ ತಂದುಕೊಟ್ಟರು.ಮೂವರು ಸೇರಿ ಮೊಟ್ಟೆಯ ಸಿಪ್ಪೆ ಸುಲಿದೆವು.ನಾನು ಆ ಏಳು ಮೊಟ್ಟೆಗಳನ್ನು ಬಿಸತ್ತಿಯಿಂದ ತುಂಡು ಮಾಡಿ ಅದರ ಮೇಲೆ ಮೆಣಸಿನ ಹುಡಿ ಹಾಗೂ ಉಪ್ಪಿನಹುಡಿಯನ್ನು ಹದವಾಗಿ ಉದುರಿಸಿದೆ. 


ರುಕ್ಕುಗೆ ಎರಡು ಮೊಟ್ಟೆ ,ಪೊಲ್ಲನಿಗೆ ಎರಡು ಮೊಟ್ಟೆ ಹಾಗೂ ನನಗೆ ಮೂರು ಮೊಟ್ಟೆ ಎಂದು ಅದೆಷ್ಟೋ ವರ್ಷಗಳಿಂದ ಚಾಚೂ ತಪ್ಪದೇ ನಡೆದುಕೊಂಡ ಬಂದ ನನ್ನದೊಂದು ಮೊಟ್ಟೆ ಪಾಲು ಮಾಡುವ ಹಳೆಯ ಸಂಪ್ರದಾಯವನ್ನು ಮುರಿಯದೆ ಮತ್ತೊಮ್ಮೆ ಪಾಲಿಸಿದೆ.ಏಳು ಮೊಟ್ಟೆಗಳ ಎಲ್ಲಾ ಹದಿನಾಲ್ಕು ಭಾಗಗಳು ಒಂದೇ ತಟ್ಟೆಯಲ್ಲಿ ಇದ್ದವು.ಹೆಚ್ಚಾಗಿ ನಮಗೆ  ಮೂವರಿಗೂ ಹಾಗೇ ಒಂದೇ ತಟ್ಟೆಯಲ್ಲಿ ಮೊಟ್ಟೆ ತಿಂದು ಅಭ್ಯಾಸ.



" ನಾನು ಬರ್ತೇನೆ..ನನ್ನನೂ ಕರ್ಕೊಂಡು ಹೋಗಿ..." ಮತ್ತೆ ರಾಗ ಎಳೆದಳು ರುಕ್ಕು. 


" ಅಕ್ಕ.. ನಿಂಗೆ ಒಮ್ಮೆ ಹೇಳಿದ್ರೆ ಅರ್ಥ ಆಗುದಿಲ್ಲವಾ..ಅದು ದೊಡ್ಡ ಕಾಡು.. ನಮ್ಮ ಈ ಪುಲ್ಕಿಯ ಕುರುಚಲು ಗುಡ್ಡ ಅಲ್ಲ.. ಹುಲಿ,ಸಿಂಹ ಎಲ್ಲಾ ಇರ್ತದೆ ಅಲ್ಲಿ,ಬೇಡ ಅಂದ್ರೆ ಬೇಡ.." ಎಂದು ಹೇಳಿ ಅವಳನ್ನು ಬರದಂತೆ ತಡೆಯುವ ಪ್ರಯತ್ನಕ್ಕೆ ಅವನೂ ಸಹ ಕೈ ಹಾಕಿದ. 


ಹುಲಿ ಓಕೆ.ಆದರೆ ನಮ್ಮ ಜಿಲ್ಲೆಯ ಕಾಡುಗಳಲ್ಲಿ ಈ ಸಿಂಹ ಹೇಗೆ?ಬಹುಶಃ ಇವನು ಈಗೀಗ ನವರಾತ್ರಿಯ ಮಾರ್ನೆಮಿ ಹುಲಿಗಳ  ಜೊತೆಗೆ ಬರುವ ಎರಡು ಕಾಲಿನ ಸಿಂಹಗಳಿಗಳಿಗೆ ಕೂಡ  ಅಭಿಮಾನಿಯಾಗಿದ್ದಾನೆ ಎಂದು ನನಗನಿಸಿತು. 


" ಬೇಕಾದರೆ ನನ್ನ ಈ ಎರಡು ಮೊಟ್ಟೆಗಳಲ್ಲಿ ಒಂದು ಮೊಟ್ಟೆಯನ್ನು ನಿಮ್ಗೇ ಕೊಡ್ತೇನೆ..ನನ್ನನ್ನು ಸ ಕರ್ಕೊಂಡು ಹೋಗಿಯ ಪ್ಲೀಸ್.." ಎಂದು ಪಕ್ಕದಲ್ಲಿ ಕುಳಿತಿದ್ದ ನನಗೆ ಮೊಣಕೈಯಲ್ಲಿ ಕುಟ್ಟಿ ಮತ್ತೊಮ್ಮೆ ರುಕ್ಕು ಗೋಗೆರದಳು. 


ನನಗೆ ಅವಳ ಈ ಮೊಟ್ಟೆ ಮನವಿ ಬಹಳ ಇಷ್ಟವಾಯಿತು. 


" ಆಯಿತು ಬಾ ಹಾಗಾದರೆ.ಹೇಳಿ ಕೇಳಿ ಅದು ನಿನ್ನ ಅಜ್ಜಿ ಮನೆ, ಬೇಡ ಎಂದು ಹೇಳಲು ನಾನು ಯಾರು,ಆದರೆ ಶಿಕಾರಿಗೆ ಮಾತ್ರ ಬಿಲ್ಕುಲ್ ಸಾಧ್ಯವೇ ಇಲ್ಲ.. " ಎಂದು ಹೇಳಿ ತಟ್ಟೆಯಲ್ಲಿದ್ದ ಒಂದು ಮೊಟ್ಟೆಯ ಅರ್ಧ ಭಾಗವನ್ನು ನಾನು ಬಾಯಿಯೊಳಗೆ ಹಾಕಿಕೊಂಡೆ.


ಅವಳಿಗೆ ಒಟ್ಟಿನಲ್ಲಿ ನಮ್ಮ ಜೊತೆ ಅವಳ ಅಜ್ಜಿಗೆ ಮನೆಗೆ ಹೋಗಬೇಕಿತ್ತು ಅಷ್ಟೇ. ಖುಷಿಯಿಂದ ಅವಳ ಪಾಲಿನ ಒಂದು ಮೊಟ್ಟೆಯ ಎರಡು ಭಾಗಗಳನ್ನು ಕೆಳಗಿದ್ದ ತಟ್ಟೆಯಲ್ಲಿಯೇ  ನನ್ನತ್ತ ತಳ್ಳಿದಳು.ಅದರ ಜೊತೆಗೆ ಕೃತಜ್ಞತೆ ಎಂಬಂತೆ ಅವಳ ಪಾಲಿಗೆ ಬಂದಿದ್ದ ಒಂದು ಮೊಟ್ಟೆಯ ಹಳದಿ ಬೊಂಡುಗಳನ್ನು ಸಹ ನನಗೇ ದಯಪಾಲಿಸಿದಳು.


ನಾನು ಬರಲು ಒಪ್ಪಿಕೊಂಡಿದ್ದು ಪೊಲ್ಲನಿಗೂ ಖುಷಿ.ಅವನೂ ಅವನ ಎರಡು ಮೊಟ್ಟೆಗಳ ಹಳದಿ ಬೊಂಡುಗಳನ್ನು ನನ್ನತ್ತ ತಳ್ಳಿದ.ಅವನಿಗೆ ಇದರಲ್ಲಿ ಎಲ್ಲಾ  ಆಸಕ್ತಿ ಇರಲಿಲ್ಲ.ಅವನು ಅದಾಗಲೇ ಪಲ್ಕೆಯ ಕಾಡುಗಳಲ್ಲಿ ಕೋವಿ ಹಿಡಿದು ಶಿಕಾರಿಗೆ ಹೋಗುತ್ತಿರುವ ಕನಸು ಕಾಣುತ್ತಿದ್ದ.


ಒಂದೆರಡು ಮೊಟ್ಟೆ ಬೊಂಡುಗಳನ್ನು ತಿಂದ ಮೇಲೆ ನಮ್ಮ ಪಕ್ಕವೇ ನಾಲಗೆ ಹೊರಗೆ ಹಾಕಿಕೊಂಡು ನಮ್ಮನ್ನೇ ನೋಡುತ್ತಾ ನಿಂತಿದ್ದ ಪೊಂಕ್ರನಿಗೆ ನಾನು ಉಳಿದ ಎಲ್ಲಾ ಬೊಂಡುಗಳನ್ನು ಹಾಕಿ ಬಿಟ್ಟೆ.ಪೊಂಕ್ರ ಗಬಗಬನೇ ಅದನ್ನು ಖುಷಿಯಿಂದ ತಿನ್ನತೊಡಗಿದ.ನಾನು ಅದರ ಪಾಲಿನ ಮೊಟ್ಟೆದಾತನಾಗಿದ್ದೆ.ನಾಳೆ ಬೆಳಿಗ್ಗೆಯೇ ಹೋಗುವುದೆಂದು ನಿರ್ಧರಿಸಲಾಯಿತು. 


ರಾತ್ರಿಯಾಗಿತ್ತು.ಬೈಲಿನಿಂದ ನಾನು ನಮ್ಮ ಬೊಟ್ಟು ಮನೆಯ ದಾರಿ ಹಿಡಿದೆ.ಪೊಂಕ್ರ ಮತ್ತೆ ಬಾಲ ಅಲ್ಲಾಡಿಸುತ್ತಾ ನನ್ನ ಹಿಂದೆಯೇ ನಮ್ಮ ಮನೆಯ ಕಡೆಗೆ ಸವಾರಿ ಬಂದ.ಮನೆಗೆ ಬಂದು ಊಟ ಏನು ಮಾಡದೆ ಹಾಗೇ ಮಲಗಿಕೊಂಡೆ.ಅಪ್ಪ ಅಂತು ಅದಾಗಲೇ ಊಟ ಮಾಡಿ ಮಲಗಿಯಾಗಿತ್ತು. 


ಮರುದಿನ ಬೆಳಿಗ್ಗೆ ಆದ ಕೂಡಲೇ ಐದು ಬಾರಿ ಪೊಲ್ಲ ಕಾಲ್ ಮಾಡಿದ್ದ.ರುಕ್ಕು ಕೂಡ ಒಂದೆರೆಡು ಬಾರಿ ಕಾಲ್ ಮಾಡಿದ್ದಳು. ಅವರ ಜೋಶ್ ನೋಡುವಾಗ ನನಗೆ ಭಯ ಹೆಚ್ಚಾಗುತ್ತಿತ್ತು.ಇವರು ಶಿಕಾರಿ ಎಂದರೆ ಏನು ಪಬ್ಜಿ ಗೇಮ್ ಅಂತ ತಿಳಿದುಕೊಂಡಿದ್ದಾರೋ ಹೇಗೆ ಅಂತ ದಿಗಿಲಾಯಿತು. 


ಪುಲ್ಕಿಯಿಂದ  ಪಲ್ಕೆಗೆ............. ಕೊನೆಗೂ ಮೂವರ ಬಂಡಿ ಹೊರಟೇ ಬಿಟ್ಟಿತು.


ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದ್ದ ನಮ್ಮದೇ ಜಿಲ್ಲೆಯ ಊರದು.ಬಹಳ ಸಮೃದ್ಧವಾದ ಅಷ್ಟೇ ಶಾಂತವಾದ ಜಾಗ.ಗಾಳಿಯೂ ಶುದ್ಧ,ನೀರೂ ಶುದ್ಧ ತರಕಾರಿಯೂ ಪರಿಶುದ್ಧ,ಅದೇ ರೀತಿ ಅಲ್ಲಿಯ ಜನರು.


ಪೊಲ್ಲನ ಅಜ್ಜಿ ಮನೆ ಬಹಳ ಹಳೆಯ ಕಾಲದ್ದು.ಮರದ ದೊಡ್ಡ ದೊಡ್ಡ ಬೋದಿಗದ ಕಂಬಗಳೇ ಮನೆಯ ಚಾವಡಿಯಲ್ಲಿ ಆ ಮನೆಯ ಗತ ಇತಿಹಾಸ ಹೇಳುವುದಕ್ಕಾಗಿ ನಿಂತಿದ್ದವು. 


ಪೊಲ್ಲನ ಅಜ್ಜ ಅಜ್ಜಿ,ಮಾವಂದಿರಾದ ರವಿಯಣ್ಣ,ರಾಘಣ್ಣ,ಮಾಮಿಯರಾದ ರವಿಯಣ್ಣನ ಹೆಂಡತಿ ವಾಸಂತಿ,ರಾಘಣ್ಣನ ಹೆಂಡತಿ ಜಯಂತಿ ಹಾಗೂ ರಾಘಣ್ಣನ ದೊಡ್ಡ ಮಗ ವಿಠ್ಠಲ ಎಲ್ಲರೂ ನಮ್ಮನ್ನೂ ಬಹಳ ಆದರಿಂದ ಸ್ವಾಗತಿಸಿದರು.ರವಿಯಣ್ಣನ ಇಬ್ಬರೂ ಹೆಣ್ಣು ಮಕ್ಕಳು ಮದುವೆಯಾಗಿ ಗಂಡು ಮನೆಗೆ ಹೋಗಿದ್ದರು.ರಾಘಣ್ಣನಿಗೆ  ಇಬ್ಬರು ಗಂಡು ಮಕ್ಕಳು ಅದರಲ್ಲಿ ದೊಡ್ಡವನು ವಿಠ್ಠಲ,ಚಿಕ್ಕವನೇ ಬೇಟೆಗಾರ ಪಯ್ಯ.ವಿಠ್ಡಲನಿಗೆ ಇನ್ನೂ ಮದುವೆ ಆಗಿರಲಿಲ್ಲ.


ಅವರೆಲ್ಲರನ್ನೂ ನಾನು ಅವರುಗಳು ಪುಲ್ಕಿಯ ಬೈಲು ಮನೆಗೆ ಬಂದಾಗ ನೋಡಿದ್ದೆ,ಹಾಗಾಗಿ ಎಲ್ಲರ ಪರಿಚಯವೂ ಇತ್ತು.ಆದರೆ ಪಯ್ಯನನ್ನೇ ನಾನು ಇಲ್ಲಿಯವರೆಗೆ ನೋಡಿರಲಿಲ್ಲ.ಅವರೆಲ್ಲರಿಗೂ ಮನೆಯ ಮೊಮ್ಮಕ್ಕಳು ಬಂದಿರುವುದು ಬಾರೀ ಸಂತೋಷ.ಅದರ ಜೊತೆಗೆ ಮೊದಲ ಬಾರಿಗೆ ನಾನು ಬಂದಿರುವುದು ಅವರಿಗೆ ಇನ್ನೂ ಹೆಚ್ಚಿನ ಖುಷಿ. 


ನನ್ನ ಕಣ್ಣುಗಳು ಮಾತ್ರ ಹುಡುಕುತ್ತಿದ್ದದ್ದು ಪೊಲ್ಲ ಹೇಳಿದ್ದ ಆ ಮಹಾನು ಬೇಟೆಗಾರನನ್ನೇ.ಅವನು ಆ ರೂಮಿನಲ್ಲಿ ಇರಬಹುದೇ,ಈ ರೂಮಿನಲ್ಲಿ ಇರಬಹುದೇ ಅಥವಾ ಅಟ್ಟದಲ್ಲಿ ಕೋವಿಗಳ ನುಣುಪು ಮೈ ಸವರುತ್ತಿರಬಹುದೇ,ಇಲ್ಲ ಜಿಂಕೆಯ  ಕೊಂಬುಗಳನ್ನು ಮನೆಯ ಯಾವುದಾದರೂ ಗೋಡೆಗೆ ಹೊಡೆದು ಮನೆಯನ್ನು ಇನ್ನಷ್ಟು ಸೊಗಸಾಗಿ ಅಲಂಕಾರಗೊಳಿಸುತ್ತಿರಬಹುದೇ ಎಂದೆಲ್ಲಾ ಯೋಚಿಸುತ್ತಿರುವಾಗಲೇ ಪೊಲ್ಲ ಖುಷಿಯಿಂದ ಜೋರಾಗಿ ಹೇಳಿದ.. " ನೋಡಿ ಬಂದಲ್ಲಾ ನಮ್ಮ ಪಯ್ಯ ಬಾವ..ನೀಲು ಅಣ್ಣ ನೋಡು ಇವನೇ ಪಯ್ಯ,ಯಾನೇ ಪ್ರವೀಣ.. ಪಲ್ಕೆಯ ಭಯಂಕರ ರಣಬೇಟೆಗಾರ..". ಇಂಟ್ರಡಕ್ಷನೇ ಅದ್ಭುತವಾಗಿತ್ತು


ಮೊದಲ ಬಾರಿಗೆ ಬೇಟೆಗಾರನ ನೇರಾ ಮುಖಾಮುಖಿ........ 


ಆದರೆ ಆ ಪಯ್ಯ ವಯಸ್ಸಿನಲ್ಲಿ ಪೊಲ್ಲನಿಗಿಂತ ದೊಡ್ಡವನು ಹಾಗೂ ನನಗಿಂತಲೂ ಚಿಕ್ಕವನಾಗಿದ್ದ.ಅವನನ್ನು ನೋಡುವಾಗ ನನಗೆ ಅವನು ರಣಬೇಟೆಗಾರನಲ್ಲ,ಬದಲಿಗೆ ಒಳ್ಳೆಯ ರಣಕುಡಿಯಂತೆ(ಮದ್ಯಪ್ರೀಯ) ಕಂಡ.


ಇನ್ನೂ ಹುಡುಗನಂತೆಯೇ ಇರುವ ಇವನೇನು ಶಿಕಾರಿ ಮಾಡಬಲ್ಲ ಎಂದು ಅನಿಸಿದರೂ ಬಹುಶಃ ಬೇಟೆಗಾರರ ಕುಡಿ ಅಲ್ಲವೇ ಹಾಗಾಗಿ ಚಿಕ್ಕಂದಿನಿಂದಲೂ ಬೇಟೆಗೆ ಹೋಗಿ ಹೋಗಿ ಬಹಳಷ್ಟು ಪಳಗಿರಬೇಕು,ಶಿಕಾರಿಯಲ್ಲಿ ಎತ್ತಿದ ಕೈಯೇ ಆಗಿರಬೇಕು ಇವ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.ಪೊಲ್ಲ ನನಗೆ ಅವನನ್ನು,ಅವನಿಗೆ ನನ್ನನ್ನು ಪರಿಚಯಿಸಿದ.


ಶಾಲೆಗೆ ಹೋಗುವುದನ್ನು ಚಿಕ್ಕಂದಿನಲ್ಲಿಯೇ ಬಿಟ್ಟ ಅವನು ಮುಂಡು (ಪಂಚೆ) ಕಟ್ಟಿಕೊಂಡು,ತಲೆಗೊಂದು ಅಂಪೈರ್ ಹ್ಯಾಟು ಹಾಕಿಕೊಂಡು ತನ್ನದೇ ಮನೆಯ ಗದ್ದೆಯ,ತೋಟದ ಕೆಲಸ ಮಾಡುವುದಂತೆ ಈಗ.ಅವನನ್ನು ನನಗೆ ಪರಿಚಯಿಸಿದ ಪೊಲ್ಲ ಮಾತ್ರ ಅದಾಗಲೇ ಯಾವಾಗ ಒಮ್ಮೆ ರಾತ್ರಿ ಆಗುತ್ತದೆ ಎಂದು ಚಡಪಡಿಸತೊಡಗಿದ. 



ಮನೆಯ ಒಳಗೆ ಹೋಗುವುದಕ್ಕೆ ಮೊದಲು ಅಂಗಳದಲ್ಲಿ ಇರುವಾಗಲೇ ಒಂದು ದೊಡ್ಡ ಚೊಂಬಿನಲ್ಲಿ ಬಾವಿಯ ತಣ್ಣನೆಯ ನೀರು ಹಾಗೂ ಒಂದು ತಟ್ಟೆಯ ತುಂಬಾ ತುಂಡರಿಸಿದ ಬೆಲ್ಲದ ಚೂರುಗಳನ್ನು ತಂದು ಇಟ್ಟರು.ಆ ಬಾವಿ ನೀರೇ ಬೆಲ್ಲಕ್ಕಿಂತ ಸಿಹಿಯಾಗಿತ್ತು.ಆದರೆ ಬೇರೆ ಯಾರೂ ತಿನ್ನದೇ ಇದ್ದ ಕಾರಣ ಮನೆಯವರಿಗೆ ಬೇಜಾರು ಆಗಬಾರದು ಎಂದು ನಾನೇ ತಟ್ಟೆಯಲ್ಲಿದ್ದ ಎಲ್ಲಾ ಬೆಲ್ಲವನ್ನು ತಿಂದು ಸಪಾಯಿ ಮಾಡಿದೆ. 



ಅದಾಗಲೇ ಮಧ್ಯಾಹ್ನವಾಗಿತ್ತು.ಹಾಗಾಗಿ ಎಲ್ಲರೂ ನೆಲದ ಮೇಲೆಯೇ ಚಾವಡಿಯಲ್ಲಿ ಊಟಕ್ಕೆ ಕುಳಿತೆವು. 


ಪೊಲ್ಲ ಊಟಕ್ಕೆ ಕುಳಿತಿದ್ದವರಿಗೂ,ಬಡಿಸಲು ನಿಂತಿದ್ದವರಿಗೂ ಒಟ್ಟಿನಲ್ಲಿ ಮನೆಯ ಎಲ್ಲರಿಗೂ,ಅಲ್ಲಿಯ ಗೋಡೆಗಳಿಗೂ,ಕಂಬಗಳಿಗೂ ಕೂಡ ಕೇಳಿಸುವಂತೆ ನನ್ನನ್ನು ಇನ್ನೂ ಹೆಚ್ಚು ಡೀಪಾಗಿ ಪರಿಚಯಿಸಲು ಶುರು ಮಾಡಿದ...


" ಇವನನ್ನು ನೀವು ಪುಲ್ಕಿಗೆ  ಬಂದಾಗ ನೋಡಿಯೇ ಇರುತ್ತೀರಾ,ನಮ್ಮನೆಯ ಮೇಲಿನ ಬೊಟ್ಟು ಮನೆಯ ನೀಲಣ್ಣನವರ ಮಗ ನೀಲು ಅಂತ.ಪೂರ್ತಿ ಹೆಸರು 'ನೀಲಮೇಘ'.ಕೆಲಸ ಏನೂ ಮಾಡದಿದ್ದರೂ ಊರಿನಲ್ಲಿ ನಮ್ಮ ಈ ನೀಲು ಅಣ್ಣನದ್ದು ಬಹಳ ದೊಡ್ಡ ಹೆಸರು.ಇವನು ಸಮಾಜ ಸೇವೆ ಎಲ್ಲಾ ಮಾಡ್ತಾನೆ.ಮುಂಚೂಣಿಯಲ್ಲಿ ನಿಂತು ಮುಷ್ಕರ, ಚಳುವಳಿ,ಹರತಾಳ,ರಸ್ತೆ ರೊಕೋ ಎಲ್ಲಾ ಕಾಲ ಕಾಲಕ್ಕೆ  ಮಾಡುತ್ತಲೇ ಇರುತ್ತಾನೆ.ಊರಿನಲ್ಲಿ ಸ್ಟಾಪ್ ಕೊಡದೆ ಹೋಗುವ ಎಕ್ಸ್‌ಪ್ರೆಸ್ ಬಸ್ಸುಗಳ ಗಾಜುಗಳಿಗೆ ಕಲ್ಲು ಬಿಸಾಡುವುದು,ರಸ್ತೆ ಗುಂಡಿಗಳಲ್ಲಿ ಬಾಳೆಗಿಡ ನೆಟ್ಟ ಪ್ರತಿಭಟನೆ ಮಾಡುವುದು,ಪೊಟ್ಟು ಬೋರ್ ವೆಲ್ ಗಳ ಮುಂದೆ ಖಾಲಿ ಕೊಡಪಾನ ಹಿಡಿದು ಊರ ಮಹಿಳೆಯರಿಂದ ಉಗ್ರವಾದ ಪ್ರತಿಭಟನೆ ಮಾಡಿಸುವುದು,ಕೇವಲ ಫಳಾರ ಅಷ್ಟೇ ತಿಂದು ಪಂಚಾಯಿತಿ ಎದುರು ಆಮರಣಾಂತ ಉಪವಾಸ ಮಾಡುವುದು,ಅಷ್ಟೇ ಏಕೆ ಇವನು ರೌಡಿಗಳ ಪಾಲಿನ ಸಿಂಹ ಸ್ವಪ್ನ,ನೊಂದವರ ಬೆಂದವರ ಬಡವರ ಪಾಲಿನ ಆಶಾ ಕಿರಣ,ದಾರಿ ದೀಪ,ಸ್ಟ್ರೀಟ್ ಲೈಟ್, ಮಣ್ಣಿನ ಮಗ,ಕೃಷಿಕಮಿತ್ರ ನಮ್ಮಣ್ಣ ಈ ನೀಲು ಅಣ್ಣ.. " ಎಂದು ಉದ್ದಕ್ಕೆ ಅವರೆಲ್ಲರ ಎದುರು ಬಿಲ್ಡ್ ಅಪ್ ಕೊಟ್ಟ ಪೊಲ್ಲ.


ಯಾವ ಕೋನದಿಂದ ನೋಡಿದರೂ ಇದರಲ್ಲಿ ನನ್ನ ಮಾರ್ಯಾದೆ ಹೆಚ್ಚು ಆಗುವ ಯಾವುದೇ ಅಂಶಗಳು ನನಗಂತು  ಕಾಣಲಿಲ್ಲ.ಅವರುಗಳಿಗೆ ಏನು ಅನಿಸಿತೋ ಗೊತ್ತಿಲ್ಲ ಆದರೆ ಅವನ ಮಾತುಗಳಲ್ಲಿ ನಾನೊಬ್ಬ ಪಬ್ಲಿಕ್ ಪ್ರಾಪರ್ಟಿ ಡ್ಯಾಮೇಜು  ಮಾಡುವ ಸಮಾಜ ಘಾತುಕನಂತೆ,ಒಬ್ಬ ಬಚ್ಚಾಲಿ ಕಿಡಿಗೇಡಿಯಂತೆ ನನಗೆ ನಾನೇ ಕಾಣಿಸಿಕೊಂಡೆ.ಅವನಿಗೆ ಜಸ್ಟ್ ನಾನೊಬ್ಬ ಸಮಾಜ ಸೇವಕ ಇಲ್ಲವೇ ಹೋರಾಟಗಾರ ಎಂದಷ್ಟೇ ಹೇಳಬಹುದಿತ್ತು ಎಂದು ನನಗೆ ಒಳಗೊಳಗೆ ಅತಿಯಾದ ಸಿಟ್ಟು ಉಕ್ಕಿ ಬಂತು.ನನ್ನ ಪುಣ್ಯಕ್ಕೆ ಮನೆಯವರು ಮನೆಗೆ ಬಂದ ಅತಿಥಿಯ ಮರ್ಯಾದೆ ತೆಗೆಯಬಾರದು ಎಂದು ನನ್ನ ಹೋರಾಟಗಳ ಬಗ್ಗೆ ಯಾವುದೇ ಕ್ರಾಸ್ ಕ್ವೆಷನ್ಸ್ ಗಳನ್ನು ಕೇಳಲಿಲ್ಲ.


ಈಗ ಬಡಿಸುವ ಸರದಿ.ರುಕ್ಕು ಕೂಡ ಅವಳ ವಾಸಂತಿ ಮಾಮಿ ಹಾಗೂ ಜಯಂತಿ ಮಾಮಿಯರೊಂದಿಗೆ ಬಡಿಸಲು ನಿಂತಳು.ಒಂದೊಂದೇ ಪದಾರ್ಥಗಳು ಬಂದು ಎಲೆಯ ಮೇಲೆ ತಮ್ಮ ತಮ್ಮ ನಿರ್ದಿಷ್ಟ ಜಾಗಗಳನ್ನು ಅಲಂಕರಿಸಲು ಶುರು ಮಾಡಿದವು.ಕರಂಡೆಪುಳಿಯ ಖಾರದ ಉಪ್ಪಿನಕಾಯಿ,ಉಪ್ಪಡ್ ಪಚ್ಚಿರ್ ಉಪ್ಪುಕರಿ,ಭರಣಿಯಲ್ಲಿ ಹಾಕಿಟ್ಟ  ನೀರುಮಾವಿನದ್ದೊಂದು ರುಚಿಯಾದ ಚಟ್ನಿ ಎಲೆಯ ಅಂಚುಗಳಲ್ಲಿ ಸ್ಥಾನ ಪಡೆದವು.


ಎಲೆಯ ನಡು ಭಾಗವನ್ನು ಆಕ್ರಮಿಸಿಕೊಳ್ಳುವ ಮೈನ್  ಮೆನು ಬರುವ ಮೊದಲೇ ಎಲೆಯಲ್ಲಿದ್ದ ಎಲ್ಲವನ್ನೂ ಇಷ್ಟಿಷ್ಟೇ ಬೆರಳಲ್ಲಿ ನೆಕ್ಕಿ  ನೋಡಿದೆ.ಎಲ್ಲವೂ ಇನ್ನಷ್ಟು ಹೊಟ್ಟೆ ಹಸಿವು ಹೆಚ್ಚು ಮಾಡುವಷ್ಟು ರುಚಿಕರವಾಗಿದ್ದವು.ಮದುವೆ ಊಟದ ಕಹಿ ನಿಧಾನಕ್ಕೆ ಕರಗತೊಡಗಿತು. 


ಅಡುಗೆ ಕೋಣೆಯಲ್ಲಿ ಅಂಗಡಿಯ ಕೋರಿರೊಟ್ಟಿಯ ಪ್ಯಾಕೇಟುಗಳು ಒಡೆದು ಹೋದ ಸದ್ದು ನಾನು ಊಟಕ್ಕೆ ಕುಳಿತಿದ್ದಲ್ಲಿಗೇ ಕೇಳಿಸಿತು. ಓಹೋ.. ಹಾಗಾದರೆ ಒಳ್ಳೆಯ ಕೋಳಿ ಊಟದ ಪುಷ್ಕಳ ಭೋಜನವೇ ಇವತ್ತು ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.ಕೋರಿರೊಟ್ಟಿ ಹಾಕಿಟ್ಟ ಅಗಲದ ಹರಿವಾಣದಂತಹ ಪಾತ್ರೆ ಬಂದಿತು.ನಾನು "ಬೇಡ ಬೇಡ.. ಸಾಕು ಸಾಕು.." ಎಂದು ಬಾಯಿಯಲ್ಲಿ ಸುಮ್ಮನೆ ಹೇಳಿದರೂ ಎಲೆಯ ಮೇಲೆ ಬೇಕೆಂದೇ ಅಡ್ಡ ಕೈ ಹಿಡಿಯಲಿಲ್ಲ. 


 " ವಾಸಂತಿ ಮಾಮಿ,ಅವರಿಗೆ ನಾನ್ವೆಜ್ ಅಂದರೆ ತುಂಬಾ ಇಷ್ಟ..ಅಮ್ಮ ಮನೆಯಲ್ಲಿ ಕೋಳಿ ಮಾಡಿದರೆ ಇವರನ್ನು ಕರೆಯದೇ ಇರುವುದಿಲ್ಲ,ಇವರು ಎಲ್ಲಿದ್ದರೂ ಓಡೋಡಿ ಬರುತ್ತಾರೆ,ಮತ್ತು ಕೋಳಿ ಸುಕ್ಕದ ಮಸಾಲೆ ಹೂ ಖಾಲಿಯಾದ ಮೇಲೆ ಸುಕ್ಕದ ಬಣಲೆಯನ್ನು ಸಹ ಇವರು ನೆಕ್ಕಿ ನೆಕ್ಕಿಯೇ  ತಿನ್ನುತ್ತಾರೆ,ನಾನ್ವೆಜ್ ಅಂದರೆ ಅಷ್ಟು ಇಷ್ಟ..." ಎಂದು ರುಕ್ಕು ತನ್ನ ವಾಸಂತಿ ಮಾಮಿಗೆ ಅವರಾಗಿ ಕೇಳದಿದ್ದರೂ ನನ್ನದೊಂದು ವಿಶೇಷ ಗುಣಗಳ ಗುಣಗಾನವನ್ನೇ ಮಾಡಿ ಬಿಟ್ಟಳು.


ನನ್ನ ಮಾರ್ಯಾದೆ ಎನ್ನುವುದು ಇಲ್ಲಿ ಹರಿದು ಹಂಚಿ ಹೋಗಿ ಅದಾಗಲೇ ಬಹಳ ಹೊತ್ತಾಗಿದೆ,ಇನ್ನು ಉಳಿಸಲು ಇವರಿಬ್ಬರು ಏನೂ ಉಳಿಸಿಲ್ಲ ಎಂದು ನನಗಾಲೇ ಸ್ಪಷ್ಟವಾಗಿ ಅರಿವಾಯಿತು.ಈ ರೀತಿಯಾಗಿಯೇ ಇವರಿಬ್ಬರ ಜೊತೆ ಇದ್ದಾಗ ನನ್ನ ಬದುಕು ಸಿಕ್ಕಾಪಟ್ಟೆ ಮುಶ್ಕಿಲ್ ಆಗಿ ಬಿಡುವುದು. 


ವಾಸಂತಿಯಕ್ಕ ಕೈ ಸಡಿಲ ಮಾಡಿಕೊಂಡು ನನ್ನ ಎಲೆಯ ಮೇಲೆಯೇ ಅಗಲಕ್ಕೆ ಕೋರಿರೊಟ್ಟಿಗಳನ್ನು ಹರಡಲು ಶುರು ಮಾಡಿದರು.ನಾನು ಬೇಡ ಎಂದು ಹೇಳದಿದ್ಧರೆ ಬಹುಶಃ ಅರ್ಧ ಕೆಜಿಯ ಪ್ಯಾಕೇಟಿನಲ್ಲಿರುವಷ್ಟು ರೊಟ್ಟಿ ನನ್ನ ಒಬ್ಬನ ಎಲೆಯಲ್ಲಿಯೇ ಇರುತ್ತಿತ್ತು.


ರೊಟ್ಟಿಯ ಮೇಲೆ ಪಯ್ಯನ ಅಮ್ಮ ಜಯಂತಿಯಕ್ಕ ತೆಳುವಾದ ಕೋಳಿ ಸಾರು ಸುರಿದರು.ಎಲೆಯ ಪಕ್ಕದಲ್ಲಿಯೇ ವಿಠ್ಠಲ ಕೋಳಿ ಪುಳಿಮುಂಚಿಯನ್ನು ಒಂದೆರಡು ಸೌಟು ಜಾಸ್ತಿಯೇ ಬಡಿಸಿದ.ಆಹಾ..ಎಂತಹ ಪುಳಿಮುಂಚಿ ಅದು.ಅಂಬಕ್ಕ ಮನೆಯ ಊರ ಕೋಳಿಯ ಪದಾರ್ಥಕ್ಕಿಂತಲೂ ಇದು ಅದ್ಭುತವಾಗಿತ್ತು.ಆ ಘಮ ಆ ರುಚಿ ಎಲ್ಲಿಂದ ಇದಕ್ಕೆ ಒದಗಿ ಬಂತು ಎಂದು ಯೋಚಿಸುತ್ತಲೇ ಯೋಚಿಸುತ್ತಲೇ ಎಲೆಯ ನಡುವಲ್ಲಿದ್ದ ಕೋರಿರೊಟ್ಟಿಯನ್ನು ತಿಂದು ಮುಗಿಸಿದೆ.


ಈಗ ಅನ್ನದ ಸರದಿ.ನಾನು ಬೇಡ ಎಂದರೂ ಇವರು ಮನೆಯ ಸಂಪ್ರದಾಯ,ಊಟಕ್ಕೆ ಕೂತವರು ಒಂದು ಸರ್ತಿ ಅನ್ನ ಹಾಕಿಕೊಳ್ಳಬಾರದು,ಅದು ಅನ್ನ ಬಡಿಸಿದ ಮನೆಯವರಿಗೆ ಅಷ್ಟೊಂದು ಒಳ್ಳೆಯದಲ್ಲ,ಕೇಡಾಗುತ್ತದೆ ಹೀಗೆ ಏನಾದರೊಂದು ಹೇಳಿ ಎರಡು ಸಲ ಅನ್ನ ಬಡಿಸಿಯೇ ಬಡಿಸುತ್ತಾರೆ,ಅದಾಗಲೇ ಹೊಟ್ಟೆ ಭರ್ತಿಯಾಗಿರುವ ನಾನು ಇನ್ನು ಎರಡು ಬಾರಿ ಅವರು ಹಾಕುವಷ್ಟು ಅನ್ನ ಹಾಕಿಕೊಂಡರೆ ಖಂಡಿತಾ ಹೊಟ್ಟೆ ಬಿರಿದೇ ಇಲ್ಲಿ ಸತ್ತು ಹೋಗುತ್ತೇನೆ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.


ಅವರಿಗೂ ಬೇಜಾರು ಆಗಬಾರದು ಎಂದು ಸ್ವಲ್ಪ ಸ್ವಲ್ಪವೇ ಅನ್ನವನ್ನು ಎರಡು ಸಲ ನಾನೇ ಬಡಿಸಿಕೊಂಡೆ.ಗುದ್ದಿ ಹಾಕಿದ ಅಂಬಡೆ ಹಾಗೂ ಒಣ ಬಂಗುಡೆ ಮೀನಿನದ್ದೊಂದು ಸಾರು ಮಾಡಿದ್ದರು.ಆಹಾ..ಅದಕ್ಕೂ ಎಂತಹ ಘಮ.ಬಡಿಸಲು ಬಂದ ರುಕ್ಕು ಒಣ ಬಂಗುಡೆಯ ತುಂಡುಗಳನ್ನು ಹುಡುಕಿ ಹುಡುಕಿ ನನಗೆಯೇ ಜಾಸ್ತಿ ಹಾಕಿಬಿಟ್ಟಳು.ಮತ್ತೊಮ್ಮೆ ಕೋಳಿ ಪುಳಿಮುಂಚಿ ಕೇಳದಿದ್ದರೂ ವಿಠ್ಠಲ ಇನ್ನೊಂದಿಷ್ಟು ಬಡಿಸಿ  ಹೋದ.ಅದು ಮಾತ್ರ ಯಾವ ರೆಸ್ಟೋರೆಂಟ್ ಗಳಲ್ಲಿ ಸಿಗಲು ಸಾಧ್ಯವಿಲ್ಲದ ರೆಸಿಪಿ ಎಂದು ನನ್ನ ಮನಸ್ಸು ಅದಾಗಲೇ ಷರಾ ಬರೆದಾಗಿತ್ತು.



ಊಟದ ನಂತರ ಅಟ್ಟ ಹತ್ತಿ ನಾನು ಪೊಲ್ಲ ಆ ಮನೆಯ ಹಿತ್ತಾಳೆಯ ಅಡುಗೆ ಪಾತ್ರೆಗಳನ್ನು,ಒಣಗಿಸಿದ ಅಡಿಕೆ,ಕರಿಮೆಣಸು ಮತ್ತು ಅಟ್ಟಿ ಹಾಕಿಟ್ಟ ಅಕ್ಕಿ ಮುಡಿಯ ದಾಸ್ತಾನನ್ನು,ಹಳೆಯ ಕಾಲದ ಟಿವಿಯಷ್ಟು ದೊಡ್ಡದಾದ ರೇಡಿಯೋವನ್ನು ನೋಡಿದೆವು.ಇನ್ನು ನಿನಗೆ ಅಜ್ಜನ ಕೋಣೆಯಲ್ಲಿರುವ ಶಿಕಾರಿಯ ಕೋವಿಗಳನ್ನು ತೋರಿಸುತ್ತೇನೆ ಎಂದು ಪೊಲ್ಲ ನನ್ನನ್ನು ಅವನ ಅಜ್ಜನ ಕೋಣೆಗೆ ಕರೆದುಕೊಂಡು ಹೋದ.


ಎರಡೆರಡು ಕೋವಿಗಳನ್ನು ಅಲ್ಲಿನ ಗೋಡಯಲ್ಲಿ ಎಕ್ಸ್ ರೀತಿಯಲ್ಲಿ ನೇತು ಹಾಕಿದ್ದರು.ಅದನ್ನು ನೋಡುವಾಗ ನನಗೆ ಈ ಹಳೆಯ ಫಿಲಂಗಳಲ್ಲಿ ನೋಡಿದ್ದ ಕಾಡುಗಳ್ಳರ ಮನೆಯೇ  ಅತಿಯಾಗಿ ನೆನಪಾಯಿತು.ಸ್ವತಃ ಅಜ್ಜನೇ ನಾನು ಈ ಕೋವಿಯಲ್ಲಿ ಹುಲಿ ಕೊಂದಿದ್ದೆ,ಈ ಕೋವಿಯಲ್ಲಿ ಕಡವೆ ಕೊಂದಿದ್ದೆ,ಈ ಕೋವಿಯಲ್ಲಿ ಚಿರತೆ ಕೊಂದಿದ್ದೆ ಎಂದು ಹೇಳಲು ಶುರು ಮಾಡಿದರು. 


ರವಿಯಣ್ಣ ನನಗೆ ಕೋವಿಗಳ ಬಗ್ಗೆ ಅದರಲ್ಲಿಯೂ ಅಲ್ಲೇ ಇದ್ದ ಹಳೆಯ ಕಾಲದ ಕೇಪಿನ ಕೋವಿಗೆ ಯಾವ ರೀತಿ ಮದ್ದಿನ  ಈಡನ್ನು ಟೈಟಾಗಿ ಕೂರಿಸುತ್ತಾರೆ ಎಂದು ವಿವರಿಸತೊಡಗಿದರು.

ಈಗ ಹೆಚ್ಚಾಗಿ ತೋಟೆಯ ಕೋವಿಗಳನ್ನು ಬಳಸುತ್ತೇವೆ ಎಂದು ತೋಟೆಯ ಕೋವಿಯನ್ನೂ,ಅದರ ಟಿವಿ ರಿಮೋಟಿನ ಶೆಲ್ಲಿನ ಗಾತ್ರದ ತೋಟೆಗಳನ್ನು(ಗುಂಡು)ಸಹ ತೋರಿಸಿದರು. 


ಅಜ್ಜನ ಕೋಣೆಯ ಇನ್ನೊಂದು ಗೋಡೆಯಲ್ಲಿ ಹುಲಿಗಳ ಚರ್ಮವನ್ನು ಕೂಡ ಅಗಲಕ್ಕೆ ಅಂಟಿಸಿದ್ದರು.ಅದನ್ನು ನೋಡುತ್ತಾ ಪೊಲ್ಲ " ಅಜ್ಜ ನೀವು ಇಲ್ಲಿ ಆನೆದಂತಗಳನ್ನು ಕೂಡ ಸಿಕ್ಕಿಸಿದ್ದರೆ ಆಗ ಈ ಗೋಡೆ ಇನ್ನೂ ಚಂದವಾಗಿ ಕಾಣುತ್ತಿತ್ತು..." ಎಂದು ಹೇಳಿದ.


ಪೊಲ್ಲನ ಮಾತಿನಿಂದ ನನಗಂತು ಈಗ ಈ ಮನೆಯವರು ದಂತಚೋರ ವೀರಪ್ಪನ್ ನ ಸಹಚರರೆನೋ ಎಂದು ಅನ್ನಿಸಿತು ಒಮ್ಮೆ."ಆನೆ ಕೊಲ್ಲಬಾರದು ಮಗ.ಆನೆ ಗಣಪತಿ ದೇವರು .." ಎಂದು ಅಜ್ಜ ಪೊಲ್ಲನಿಗೆ ಸಮಜಾಯಿಷಿ ನೀಡಿದರು. 


ನಾನು ಪೊಲ್ಲನ ಅಜ್ಜನನ್ನೇ ಕೇಳಿದೆ "ಪಲ್ಕೆ ಅಂದರೆ ಸಮತಟ್ಟಾದ ಜಾಗ ಅಲ್ಲವೇ ಅಜ್ಜ.. ಇಲ್ಲಿ ನೋಡಿದರೆ ಮನೆಯ ಸುತ್ತ ಮುತ್ತ ಗುಡ್ಡಗಳೇ ಇವೆ..." ಎಂದು ಹೇಳಿದೆ. 


ಅದಕ್ಕೆ ಅಜ್ಜ ಹೇಳಿದರು " ಈ ಊರಿನ ಪೂರ್ತಿ ಹೆಸರು ಕುಟ್ಟಿದಪಲ್ಕೆ ಅಂತ.ಹೆಚ್ಚು ಕಡಿಮೆ ನೂರು ವರ್ಷಗಳ ಹಿಂದೆ ನಮ್ಮ ಮನೆಯ ಎದುರಿನ ಈ ಜಾಗ ಖಾಲಿಯಾಗಿ ಪಲ್ಕೆಯಂತೆಯೇ ಇಂತು.ಊರಿನ ಎಲ್ಲಾ ಮಕ್ಕಳು ಇಲ್ಲಿ ಬಂದು ಕುಟ್ಟಿದೊನ್ನೆ (ಚಿನ್ನಿದಾಂಡು)ಆಡುತ್ತಿದ್ದರು.ಆವಾಗ ಮಕ್ಕಳು ಈಗಿನಂತೆ ಬ್ಯಾಟ್ ಬಾಲ್ ಎಲ್ಲಾ ಆಡ್ತಾ ಇರ್ಲಿಲ್ಲ. ಆ ಮಕ್ಕಳ ಬಾಯಿಯಲ್ಲಿ ಈ ಜಾಗಕ್ಕೆ 'ಕುಟ್ಟಿದೊನ್ನೆ ಆಟದ ಪಲ್ಕೆ' ಎಂಬ ಹೆಸರು ನಿರಂತರವಾಗಿ ಹರಿದಾಡಿ ಹರಿದಾಡಿ,ಕೊನೆಗೆ ಅದು ' ಕುಟ್ಟಿದಪಲ್ಕೆ' ಯಾಗಿಬದಲಾಯಿತು.ಊರ ಜನರು ಕೂಡ ಅದೇ ಹೆಸರಿನಿಂದ ಇದನ್ನು ಗುರುತಿಸಲಾರಂಭಿಸಿದರು.ಮುಂದೆ ಬ್ಯಾಟ್ ಬಾಲ್ ಆಟ ಊರಿಗೆ ಬಂದು ಈ ಕುಟ್ಟಿದೊನ್ನೆ ಆಡುವ ಮಕ್ಕಳುಗಳೇ ನಾಪತ್ತೆಯಾಗಿ ಬಿಟ್ಟರು,ಆದರೆ ಆ ಹೆಸರು ಮಾತ್ರ ಹಾಗೇ ಉಳಿದುಕೊಂಡಿತು.ಸಮತಟ್ಟಾದ ಜಾಗದಲ್ಲಿ ನಿಧಾನಕ್ಕೆ ಪೊದೆ ಗಂಟಿಗಳು ಬೆಳೆದು ಈ ರೀತಿಯಾಗಿ ಗುಡ್ಡವೇ ಆಗಿ ಬಿಟ್ಟಿತು.. ಎಂದು ಹೇಳಿದರು ಅಜ್ಜ. 


ನೂರು ವರ್ಷಗಳ ಹಿಂದೆ ಈಗೀನ ಕ್ರಿಕೆಟ್ ನಂತೆಯೇ ಆಗಿನ ಮಕ್ಕಳು ಚಿನ್ನಿದಾಂಡು ಆಡುತ್ತಿದ್ದರು,ಮತ್ತು ಅದಕ್ಕೆ ಆವಾಗಿನ   ಮಕ್ಕಳಲ್ಲಿದ್ದ ಆಸಕ್ತಿ ನೋಡಿ ನನಗಂತು ಆ ಆಟದ ಬಗ್ಗೆ ಒಮ್ಮೆ ಬೆರಗು ಮೂಡದೇ ಇರಲಿಲ್ಲ. 



ಪೊಲ್ಲನಲ್ಲಿ ಈಗಲೂ ಇದ್ದದ್ದು ಶಿಕಾರಿಯ ಆತುರ ಒಂದೇ.ಹೆಚ್ಚು ಕಡಿಮೆ ನನಗೂ ಅದರ ಕುತೂಹಲವಿದ್ದದ್ದು ಮಾತ್ರ ನಿಜವೇ.ನಾನು ಅಪ್ಪನ ರೋಚಕ ಶಿಕಾರಿ ಕತೆಗಳನ್ನು ಕೇಳಿದ್ದೆನೇ ಹೊರತು ಒಮ್ಮೆಯೂ  ಶಿಕಾರಿಗೆ ಹೋಗಿರಲಿಲ್ಲ. ಹಾಗಾಗಿ ನನಗೂ ಅದು ಹೇಗಿರುತ್ತದೆ ಎಂದು ನೋಡುವ ಕುತೂಹಲ. 


ಪೊಲ್ಲ ತನ್ನ ಪಯ್ಯ ಬಾವನಲ್ಲಿ ಕೇಳಿಯೇ ಬಿಟ್ಟ.."ಬಾವ ನಾವು ಎಷ್ಟು ಗಂಟೆಗೆ ಶಿಕಾರಿಗೆ ಹೋಗುವುದು..ಇವತ್ತು ನಿಜವಾಗಿಯೂ ಹೋಗ್ಲಿಕ್ಕೆ ಉಂಟಲ್ಲಾ.? ". 


ಬೇಟೆಗಾರ ಪಯ್ಯ ಅದನ್ನು ಕೇಳಿ ಹಾಗೇ ನಕ್ಕ " ಶಿಕಾರಿಯಲ್ಲವಾ.. ಮಾಡಿದರಾಯಿತು ಬಿಡು.." ಎಂದು ಪೊಲ್ಲನಿಗೆ ಹೇಳಿದ.ಅವನು ಹಾಗೆ ಹೇಳುವಾಗ ಅವನಿಗೆ ಈ ಶಿಕಾರಿ ಗಿಕಾರಿ ಎಲ್ಲಾ ಮಕ್ಕಳಾಟದಂತೆ ಕಂಡಿತು ನನಗೆ.


ಆದರೆ ಸ್ವಲ್ಪ ಅಳುಕಿನಿಂದಲೇ " ಬೇರೆ ದೊಡ್ಡವರು ಯಾರು ಬರುವುದಿಲ್ಲವಾ..." ಎಂದು ಕೇಳಿದೆ.


ರವಿಯಣ್ಣ ನನ್ನ ಬಳಿ ಬಂದು ಪಯ್ಯನ ಶಿಕಾರಿಯ  ಗುಣಗಾನವನ್ನೇ ಮಾಡಿದರು." ನೀಲಮೇಘ ನೀನು ಪಯ್ಯನನ್ನು ಎಂದಿಗೂ ಈ ಶಿಕಾರಿಯ ವಿಷಯದಲ್ಲಿ ಅಂಡರ್ ಎಸ್ಟಿಮೇಟ್ ಮಾಡ್ಬೇಡ.ಪಯ್ಯ ಒಳ್ಳೆಯ ಬೇಟೆಗಾರ,ಈ ಊರಿನ ಕಲಿಪುರುಷ ಅವನು.ಅವನಲ್ಲಿ ಒಮ್ಮೆ ಕಲಿಪುರುಷ ಎಂಟ್ರಿ ಆದರೆ ಉಂಟಲ್ಲಾ ಅಷ್ಟೇ.ಆ ದಿನ ದೊಡ್ಡ ಶಿಕಾರಿ ಬಿದ್ದಂತೆಯೇ ಲೆಕ್ಕ.." ಎಂದು  ತಮ್ಮನ ಕಿರಿಯ ಮಗನನ್ನು ಕೇವಲ ನನಗಷ್ಟೇ ಕೇಳುವ ಹಾಗೆ ಬಹಳ ಹತ್ತಿರ ಬಂದು ಹಾಡಿ ಹೊಗಳಿದರು.


ಆ ಮನೆಯಲ್ಲಿ ಈ ರವಿಯಣ್ಣ ಸ್ವಲ್ಪ ಕುಶಾಲಿನ ಮನುಷ್ಯನಂತೆ ಕಂಡರೆ,ರಾಘಣ್ಣ ಸ್ವಲ್ಪ ಗಾಂಭೀರ್ಯದ ಗಂಭೀರ ಜನದಂತೆ ಕಂಡರು.


" ಪಯ್ಯ ಮತ್ತು ಕೂರನ ಜೋಡಿ ಕಾಡಿಗೆ ಇಳಿದರೆ ಕಾಡು ಪ್ರಾಣಿಗಳು ಕೂಡ ಗಡಗಡ ನಡುಗುತ್ತವೆ.. " ಎಂದು ಹೇಳಿದ ಪಯ್ಯನ ಅಣ್ಣ ವಿಠ್ಠಲ. 


ಕೂರ ಎನ್ನುವುದು ಆ ಮನೆಯ ಬೇಟೆನಾಯಿ ಎಂದು ಗೊತ್ತಾದ ಕೂಡಲೇ,ಬೇಟೆಗಾರ ಪಯ್ಯ ಮತ್ತು ಕೂರ ನಾಯಿ ಇಡೀ  ಕುಟ್ಟಿದಪಲ್ಕೆಯಲ್ಲಿಯೇ ದಿ ಬೆಸ್ಟ್ ಶಿಕಾರಿ ಕಾಂಬೋ ಎಂದು ನನಗೆ ನಾನೇ ಅರ್ಥ ಮಾಡಿಕೊಂಡೆ. 



ಕೂರ ನಾಯಿಯ ವಿಷಯ ಬಂದ ಕೂಡಲೇ ಪಯ್ಯನ ಅಪ್ಪ ರಾಘಣ್ಣ ಅವರು ತಮ್ಮ ಹೆಮ್ಮೆಯ ನಾಯಿಯ ಬಗ್ಗೆ ಹೇಳಲು ಶುರು ಮಾಡಿದರು.. " ಊರಿನಲ್ಲಿ ಅದೆಷ್ಟೋ ಬೇಟೆಯಾಡಿ ಹೆಸರುಗಳಿಸಿದ ಧೀಮಂತ ನಾಯಿ ಇದು.ಇವನನ್ನು ಕೂಡ ನಾನು ಮನೆಮಗನಂತೆಯೇ ಬೆಳೆಸಿದ್ದೇನೆ.ಊರಿನ ಬೇರೆ ಯಾರಾದರೂ ಬೇಟೆಗೆ ಹೋಗುವುದಿದ್ದರೂ ಸಹ ಇವನನ್ನೇ ಕರೆದುಕೊಂಡು ಹೋಗುತ್ತಾರೆ.ಸದ್ಯಕ್ಕೆ ಈ ಮನೆಯ ಈ  ಮನೆತನದ ಪ್ರತಿಷ್ಠೆಯ ಸಂಕೇತ ಇವನು.ಎಷ್ಟೋ ತಲೆಮಾರುಗಳಿಂದಲೂ ಈ ಮನೆ ಶಿಖಾರಿಗೆ ಹಾಗೂ ಒಳ್ಳೆಯ ಬೇಟೆ ನಾಯಿಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ.ಅದನ್ನೀಗ ನಾವುಗಳು ಹೇಗೆ ಉಳಿಸಿಕೊಂಡು ಹೋಗುತ್ತಿದ್ದೆವೆಯೋ ಅದೇ ರೀತಿ ಈ ನಮ್ಮ ಕೂರ ಕೂಡ ಉಳಿಸಿಕೊಂಡು ಹೋಗುತ್ತಿದ್ದಾನೆ..."ಎಂದು ತಮ್ಮ ನಾಯಿಯ ಬಗ್ಗೆ ಅಪಾರ ಮೆಚ್ಚುಗೆಯ  ಮಾತುಗಳನ್ನಾಡಿದರು ರಾಘಣ್ಣ. 


ಇವರ ನಾಯಿಯ ಸಾಹಸಕ್ಕೆ ಅವಶ್ಯವಾಗಿ ಮೆಡಲು ಕೊಡಬಹುದಾದರೂ ಈ ವಿಷಯ ಅರಣ್ಯಾಧಿಕಾರಿಗಳ ಗಮನಕ್ಕೆ ಬಂದರೆ ಖಂಡಿತವಾಗಿಯೂ ಇವರಿಗೆ ಜೈಲೂಟವೇ ಗ್ಯಾರಂಟಿ ಎಂದು ಮನಸಿಗೆ ಅನಿಸಿತು.ಆದರೂ ಆ ಹಿರಿಯರಿಗೆ ಅದನ್ನು ಹೇಗೆ ತಿಳಿಸಿ ಹೇಳುವುದು ಎಂದು ನನಗೆ ಗೊತ್ತಾಗಲಿಲ್ಲ.


ಈಗಲೂ  ನಿರ್ಭೀತಿಯಿಂದ ಶಿಕಾರಿ ಮಾಡುವುದು ಮತ್ತು ಅದನ್ನು ಹೆಮ್ಮೆಯಿಂದ ಅವರು  ಹೇಳಿಕೊಳ್ಳುವುದು ನೋಡಿ ಸದ್ಯದ ಅರಣ್ಯದ ಕಠಿಣ ಕಾನೂನಿನ ಬಗ್ಗೆ ಅವರಿಗೆ ಅರಿವೇ ಇಲ್ಲದಿರುವುದನ್ನು ನೋಡಿ ನನಗೆ ಒಮ್ಮೆ ಬೇಸರವಾಯಿತು.ಇಡೀ ಊರಿನವರೇ ಶಿಕಾರಿ ಮಾಡಲು ಹೋಗುತ್ತಾರೆ ಎಂದರೆ ಬಹುಶಃ ಈ ಭಾಗಗಳಲ್ಲಿ ಶಿಕಾರಿ ಎನ್ನುವುದೇ ಆಯಾಯ ಮನೆತನದ ಪ್ರತಿಷ್ಠೆಯ ವಿಷಯ ಇರಬೇಕು ಎಂದು ನನಗೆ ನಾನೇ  ಅಂದುಕೊಂಡೆ. 


" ಯಾವ ಪ್ರಾಣಿಗಳನ್ನೆಲ್ಲಾ ನೀವು ಶಿಕಾರಿ ಮಾಡುತ್ತೀರಿ..." ಕುತೂಹಲದಿಂದಲೇ ಕೇಳಿದೆ ನಾನು.


ವಿಠ್ಠಲ ಪಟ್ಟಿ ಒಪ್ಪಿಸತೊಡಗಿದ " ಕಾಡುಕುರಿ,ಕಾಡುಹಂದಿ,ಮೊಲ,ಬರ್ಂಕ,ಬೆರು,ಎರಡು ನಾಲಗೆಯ ಉಡ,ನವಿಲು,ಪುನುಗು ಬೆಕ್ಕು,ಕಡವೆ,ಕೆಂದಳಿಲು,ಕನೆಪಂಜಿ ಇತ್ಯಾದಿ ಇತ್ಯಾದಿ.. "


ವಿಠ್ಠಲ ಹೇಳಿದ ಹೆಸರುಗಳಲ್ಲಿ ಕೆಲವು ಅಪರೂಪದ ಅಳಿವಿನಂಚಿನ ಪ್ರಭೇದದ ಪ್ರಾಣಿಗಳು ಕೂಡ ಇರುವುದನ್ನು ನೋಡಿ ಇವರಿಗೆ ಇದನ್ನೆಲ್ಲ ಯಾವ ರೀತಿ ಬಿಡಿಸಿ ಹೇಳುವುದು ಎಂದು ನನಗೆ ಗೊತ್ತಾಗದೆ ಇನ್ನಷ್ಟು ಬೇಸರವಾಯಿತು. 


ವಿಠ್ಠಲನ ಅಷ್ಟು ದೊಡ್ಡ ಪಟ್ಟಿಯಲ್ಲಿ ಅವನು ಕಾಡುಕೋಳಿಗಳನ್ನೇ ಬಿಟ್ಟಿದ್ದ.


" ಮತ್ತೆ ಕಾಡುಕೋಳಿ? " ನಾನು ಕುತೂಹಲಕ್ಕೆ ಕೇಳಿದೆ. 


ಎಲ್ಲರೂ ಜೋರಾಗಿ ನಕ್ಕರು. 


" ಏಕೆ ಎಲ್ಲಾ ನಗುತ್ತಿದ್ದೀರಿ.. " ಕೇಳಿದೆ. 


" ಮತ್ತೆ ಮಧ್ಯಾಹ್ನ ಊಟಕ್ಕೆ ಮಾಡಿದ ಆ ಕೋಳಿ ಸಾರು,ಪುಳಿಮುಂಚಿ ಯಾವುದರದ್ದು ಅಂದುಕೊಂಡೆ.. ಅದು ಕಾಡುಕೋಳಿಯದ್ದೇ..."  ನಗುತ್ತಾ ಹೇಳಿದ ವಿಠ್ಠಲ.


ಪುನಃ ಎಲ್ಲರೂ ನಕ್ಕರು. 


ಅರೆ ಇವರೇನು.ಇಷ್ಟು ಸುಲಭವಾಗಿ ಕಾಡುಕೋಳಿಗಳು ಹೇಗೆ ಇವರಿಗೆ ಸಿಗುತ್ತವೆ?.. ಅದೇ ಪ್ರಶ್ನೆಯನ್ನು ಅವರುಗಳಿಗೂ ಕೇಳಿದೆ. 


ಬೇಟೆಗಾರ ಪಯ್ಯ ಶುರು ಮಾಡಿದ " ಹೌದು ಇಲ್ಲಿ ಹಾಗೆಯೇ, ನಮಗೆ ಬೇಕೆಂದಾಗಲೆಲ್ಲ ಕಾಡುಕೋಳಿಗಳ ಶಿಕಾರಿಯೇ.ಯಾರಾದರೂ ನೆಂಟರು ಬರುವುದಿದ್ದರೆ ಹಿಂದಿನ ದಿನವೇ ಹೋಗಿ ಹೊಡೆದುಕೊಂಡು ಬರುತ್ತೇವೆ. ಹಾಗಾಗಿ ನೆಂಟರಿಷ್ಟರು ಇದ್ದರೆ ಕಾಡುಕೋಳಿಗಳದ್ದೇ ರುಚಿಯಾದ ಊಟ ನಮ್ಮ ಮನೆಯಲ್ಲಿ.ಇವತ್ತು ನೀವುಗಳು ಬರುತ್ತೀರಿ ಎಂದು ಗೊತ್ತಿತ್ತು ಅಲ್ಲವೇ, ಹಾಗಾಗಿ ನಿನ್ನೆಯೇ ಹೋಗಿ ಐದಾರು ಕೋಳಿಗಳನ್ನು ಹೊಡೆದುಕೊಂಡು ಬಂದೆ... " ಎಂದು ಹೇಳಿ ಮುಗಿಸಿದ ಪಯ್ಯ. 


ಅವನು ಹೇಳುವ ರೀತಿ ನೋಡಿದರೆ ಬೇಕೆಂದಾಗ ಚಿಕನ್ ಅಂಗಡಿಗೆ ಹೋಗಿ ಈ ಬ್ರಾಯ್ಲರ್ ಕೋಳಿಗಳನ್ನು,ಟೈಸನ್ ಗಳನ್ನು ತರುವ ರೀತಿ ಇತ್ತು ಅವನದ್ದೊಂದು ಕಾಡುಕೋಳಿಗಳ ಶಿಕಾರಿ.ಮನಸ್ಸು ಬಂದಾಗಲೆಲ್ಲ ಕಾಡಿಗೆ ನುಗ್ಗಿ ಬೇಕಾದಷ್ಟು ಅಧಿಕ ರುಚಿಯ ಈ ಕಾಡುಕೋಳಿಗಳನ್ನು ಹೊತ್ತುಕೊಂಡು ಬರುವ ಅವನ ಭಾಗ್ಯವನ್ನು ನೆನೆದು ನನಗೆ ಅವನ ಬಗ್ಗೆಯೇ ಸಿಕ್ಕಾಪಟ್ಟೆ ಅಸೂಯೆ ಮೂಡಿತು. 



ರಾತ್ರಿ ಎಂಟು ಗಂಟೆ ಆಗುತ್ತಿದ್ದಂತೆ ಶಿಕಾರಿಯ ತಯಾರಿಗಳು ಶುರುವಾದವು.ನಾನೂ ಬರುತ್ತೇನೆ ಎಂದು ಹೊರಡಲು ಅಣಿಯಾದ ರುಕ್ಕುವಿಗೆ ಅವಳ ಮಾಮಿಯಂದಿರೇ ಸರಿಯಾಗಿ ಬೈದು ಮನೆಯಲ್ಲಿರಲು ಹೇಳಿದರು.ನಾನು ಮತ್ತು ಪೊಲ್ಲ ಸಣ್ಣ ವಯಸ್ಸಿನ ಗ್ರೇಟೆಸ್ಟ್ ಬೇಟೆಗಾರ ಈ ಪಯ್ಯನ  ಪರಾಕ್ರಮವನ್ನು ನೋಡಲು ಸಿದ್ದವಾದೆವು. 



ಪಯ್ಯ ಎರಡು ನಳಿಕೆಯ ಕೋವಿ ತೆಗೆದ.ಅದು ಅವರ ಮನೆಯ ಶಿಕಾರಿಯ ಹಗ್ಗುರುತು.ಅದು ಇಲ್ಲಿಯವರೆಗೆ ಎಷ್ಟೋ ಬೇಟೆ ಆಡಿದೆ ಎಂದು ಆ ಮನೆಯವರಿಗೂ ಗೊತ್ತಿಲ್ಲ.ಬೇಟೆಯನ್ನು ನೆಲಕ್ಕುರುಳಿಸದೇ ಅದು ಮತ್ತೆ ಮನೆಗೆ ಮರಳಿದ ಉದಾಹರಣೆಗಳೇ ಇಲ್ಲವಂತೆ.ಎಣ್ಣೆಯಿಂದ  ಚೆನ್ನಾಗಿ ತಿಕ್ಕಿದ ಅದರ ಮೈ ಕಂಬಳದ ಕೋಣಗಳ ಮೈಯಂತೆಯೇ ಮಿಂಚುತ್ತಿತ್ತು.ಶಿಕಾರಿಗೆ ಬೇಕಾಗುವ ಹೆಡ್ಡ್ ಲೈಟ್ ಗಳನ್ನು ಸಹ ಮೂವರೂ ತಲೆಗೆ ಕಟ್ಟಿಕೊಂಡೆವು.ಪಯ್ಯ ಚೂರಿ ಹಾಗೂ ಗೋಣಿಯೊಂದನ್ನು ಕೈಯಲ್ಲಿ ಹಿಡಿದುಕೊಂಡ.ಅದರೊಳಗಿನ ಚೀಲದಲ್ಲಿ ಒಂದಷ್ಟು ಕೋವಿಯ ತೋಟೆಗಳೂ ಇದ್ದವು. ಮೂವರ ಕಾಲುಗಳನ್ನು ಬೂಟುಗಳು ಅಲಂಕರಿಸಿದವು.


ಪಯ್ಯ ಮನೆಯಲ್ಲಿ ಅಮ್ಮನಿಗೆ ಮತ್ತು ದೊಡ್ಡಮ್ಮನಿಗೆ ಮಸಾಲೆ ಕಡೆದಿಡಲು ಮತ್ತು ಪೂಜಿರೊಟ್ಟಿ ಕೂಡ ಮಾಡಿಡಲು ಹೇಳಿದ.ಪೂಜಿರೊಟ್ಟಿ ಎಂದರೆ ಕಬ್ಬಿಣದ ಕಾವಲಿಗೆ ಅಕ್ಕಿ ಹಿಟ್ಟನ್ನು ತೆಳುವಾಗಿ ಕೈಯಿಂದಲೇ ಸವರಿ ಮಾಡುವ ಒಂದು ವಿಧದ ರೊಟ್ಟಿ. ಅದು ಬಿಸಿ ಇರುವಾಗಲೇ ಕೋಳಿಯೋ ಮೀನೋ ಒಟ್ಟಿನಲ್ಲಿ ನಾನ್ ವೆಜ್ ಪದಾರ್ಥಕ್ಕೆ ಅದ್ದಿ ತಿನ್ನಬೇಕು.ಗರಿಗರಿಯಾಗಿ ಮುರಿದು ತಿನ್ನಲು ಒಂಥರಾ ಚೆನ್ನಾಗಿರುತ್ತದೆ ಅದು.


ಶಿಕಾರಿಗೆ ಹೋಗುವ ಮೊದಲೇ ಮಸಾಲೆ ಹಾಗೂ ಪೂಜಿರೊಟ್ಟಿ ಮಾಡಿಡಲು ಹೇಳಿದ ಪಯ್ಯನ ಆತ್ಮ ವಿಶ್ವಾಸ ನನಗೆ ಬೆರಗು ಮೂಡಿಸಿತು.ಅವನಲ್ಲಿ ನನಗೀಗ ಹಸಿದ ಹುಲಿ ಕಾಣುತ್ತಿತ್ತು. ಶಿಕಾರಿ ಮಾಡಿ ಬಂದು ಅದನ್ನು ರಾತ್ರಿಯೇ ಪದಾರ್ಥ ಮಾಡಿ ತಿನ್ನುವುದೆಂದು ಪೊಲ್ಲನಂತು ನಿರ್ಧರಿಸಿಯಾಗಿತ್ತು ಹಾಗಾಗಿ ಮನೆಯವರು ಸ್ವಲ್ಪ ಊಟ ಮಾಡಿಕೊಂಡು ಹೋಗಿ ಎಂದರೂ ಇಲ್ಲ ನಾವು ಶಿಕಾರಿ ತಂದು ಅದನ್ನೇ ಊಟ ಮಾಡುತ್ತೇವೆ,ನೀವುಗಳು ಬೇಗ ಬೇಗ ಮಸಾಲೆ ಕಡೆದಿಡಿ ಎಂದು ತನ್ನ ಬಾವ ಪಯ್ಯನ ಮೇಲಿನ ಅಪಾರವಾದ ನಂಬಿಕೆಯಿಂದ  ಪೊಲ್ಲನೂ ಕೂಡ ಮನೆಯವರಿಗೆಲ್ಲಾ ಹೇಳಿದ.


ಈ ಪೊಲ್ಲನನ್ನು ನೋಡುವಾಗ ಇವನು ನಮ್ಮ ಪುಲ್ಕಿಯ ಬದಲು ಈ ಪಲ್ಕೆಯಲ್ಲೇ ಇದ್ದಿದ್ದರೆ ಇವನೂ ಸಹ ಕಾಲೇಜಿಗೆಲ್ಲಾ ಹೋಗದೆ ಪಯ್ಯನಂತೆ ಒಬ್ಬ ರಣಬೇಟೆಗಾರ ಆಗಿ ಬಿಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ನನಗೆ ಬಲವಾಗಿ ಅನಿಸಿತು.



ಮನೆಯಿಂದ ಹೊರ ಬಿದ್ದು ಬೇಟೆ ನಾಯಿ ಕೂರನ ಜೊತೆಗೆ ನಾವು ಮೂವರೂ ಮನೆಯ ಮುಂದಿದ್ದ ಆ ದಟ್ಟ ಕಾಡನ್ನು ಪ್ರವೇಶಿಸಿದೆವು.ಎದುರಿನಲ್ಲಿ ಪಯ್ಯ,ಅವನ ಹಿಂದೆ ನಾನು, ನನ್ನ ಹಿಂದೆ ಪೊಲ್ಲ.ಎಲ್ಲರಿಗಿಂತ ಎದುರಿನಲ್ಲಿ ಕೂರ.ಮನೆಯಲ್ಲಿ ನಾವು ಹೊಡೆದು ಹೊತ್ತು ತರಬಹುದಾದ ಬೇಟೆಯ ಬಗ್ಗೆ ಪ್ರತೀಕ್ಷೆಗಳು ಆ ಕ್ಷಣದಿಂದಲೇ ಗರಿಗೆದರತೊಡಗಿತು.


ಪಯ್ಯನ ಪರಾಕ್ರಮ ಇಲ್ಲಿಂದಲೇ  ಶುರು..........



ಮೇಲೆ ಹುಣ್ಣಿಮೆ ಬೆಳದಿಂಗಳು ಇದ್ದರೂ ಆ ಕಾಡು ಅದೆಷ್ಟು ದಟ್ಟವಾಗಿತ್ತು ಎಂದರೆ ನಾವು ಮೂವರು ಒಟ್ಟಿಗೆ ಇದ್ದರೂ ಸಹ ಕಾಡೊಳಗಿನ ಕೆಲವು ಭಾಗದ ಕತ್ತಲೆ ಮಾತ್ರ ನಮ್ಮನ್ನು ನಿಜವಾಗಿಯೂ ಸಿಕ್ಕಾಪಟ್ಟೆ ಹೆದರಿಸುತ್ತಿತ್ತು. 


ಪಾಲೆ ಮರದ ಅದೊಂದು ಪರಿಮಳ ನಾವುಗಳೇ ಮೂರ್ಛೆ ಹೋಗುವಷ್ಟು ತೀಕ್ಷ್ಣವಾಗಿತ್ತು.ಮಿಂಚು ಹುಳುಗಳ ಮಿಣುಕು ದೀಪ ಅಲ್ಲಲ್ಲಿ ಮಿಂಚಿ ಮರೆಯಾಗುತ್ತಿತ್ತು.ಗೂಬೆಗಳು ಹೆದರಿಸಲೆಂದೇ ಗೂಕ್ ಎನ್ನುತ್ತಿದ್ದವು.ಎಲ್ಲೋ ಮರೆಯಲ್ಲಿದ್ದ ಕಪ್ಪೆಗಳ ವಟರು,ಜೀರುಂಡೆಗಳ ಝೇಂಕಾರ,ಕಾಲಡಿಯಲ್ಲಿ ಪುಡಿಯಾಗುತ್ತಿದ್ದ ಒಣ ಎಲೆಗಳ ಸಪ್ಪಳ,ನಮಗೆಯೇ ಸ್ಪಷ್ಟವಾಗಿ ಕೇಳುವ ನಮ್ಮ ಗುಂಡಿಗೆಯದ್ದೊಂದ ನಿರಂತರ ಸದ್ದು ನಿಧಾನಕ್ಕೆ ಆ ನಿಶ್ಶಬ್ದದಲ್ಲಿ ಕಾಡಿನ ಭಯವನ್ನು ಇನ್ನಷ್ಟು ಹೆಚ್ಚು ಮಾಡುತ್ತಿದ್ದವು. 


ಪಯ್ಯನಿಗೆ ಎಲ್ಲಿ ಹೋಗಿ ಬೇಟೆ ಮಾಡಬೇಕು ಎಂಬುವುದರ ಬಗ್ಗೆ ಸ್ಪಷ್ಟವಾದ ಅರಿವಿತ್ತು.ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಕಾಡನ್ನು ಅರೆದು ಕುಡಿದಿರುವ ಅವನು ನೋಡುವಾಗಲೆಲ್ಲ ನನಗೆ ಬೆರಗು ಹುಟ್ಟುತ್ತಿತ್ತು. 


ಏನೇ ಆಗಲಿ ಯಾರ ಭಯವೂ ಇಲ್ಲದ  ಶಿಕಾರಿ ಮಾಡುವ ಇವನನ್ನೊಮ್ಮೆ ನಾನು ಹೆದರಿಸಿಬಿಡಲೇಬೇಕು ಎಂದು ನಾನು  ತೀರ್ಮಾನಿಸಿದೆ.. 


" ಪಯ್ಯ ನೀನು ಎಷ್ಟು ವರ್ಷಗಳಿಂದ ಶಿಕಾರಿ ಮಾಡುತ್ತಿದ್ದೀಯಾ..." ಎಂದು ನಡೆಯುತ್ತಲೇ ಮುಖದತ್ತ ಬರುತ್ತಿದ್ದ ದಾರಿಯ ಬಲ್ಲೆಯ ಗೆಲ್ಲುಗಳನ್ನು ಸರಿಸುತ್ತಾ ಕೇಳಿದೆ. 



"  ತುಂಬಾ ಚಿಕ್ಕಂದಿನಿಂದಲೇ ಅಜ್ಜನೊಂದಿಗೆ,ರವಿ ದೊಡ್ಡಪ್ಪನೊಂದಿಗೆ,ಅಪ್ಪನೊಂದಿಗೆ,ವಿಠ್ಠಲಣ್ಣನೊಂದಿಗೆ ಹಾಗೂ ಊರವರೊಂದಿಗೆ ಶಿಕಾರಿಗೆ ಹೋಗುತ್ತಿದ್ದವನು ನಾನು.ಮಕ್ಕಳು ಬ್ಯಾಟು ಬಾಲ್ ಗಳೊಂದಿಗೆ ಆಟವಾಡುವ ವಯಸ್ಸಿನಲ್ಲಿ ನಾನು ಕೋವಿಯೊಂದಿಗೆ ಆಟವಾಡುತ್ತಿದ್ದೆ ಗೊತ್ತಾ.... "ಎಂದು ತನ್ನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡ ಪಯ್ಯ.


ಅವನಿಗೆ ಹಿರಿಯರೊಂದಿಗೆಲ್ಲಾ ಬೇಟೆಯಾಡಿದ ತಾನೊಬ್ಬ ಬಹಳ ಅನುಭವಿ ಮತ್ತು ಇಷ್ಟು ಚಿಕ್ಕ ವಯಸ್ಸಿಗೆನೇ ಊರಿನ ಖ್ಯಾತ ಬೇಟೆಗಾರನೆಂಬ ದೊಡ್ಡ ಹಮ್ಮು ಇತ್ತು. 


ಕಾಡಿನಲ್ಲಿ ನಮ್ಮ ಪ್ರಯಾಣ ಮುಂದುವರಿಯಿತು. 


" ಪಯ್ಯ ನಿನಗೆ ಗೊತ್ತೇ ಈ ಶಿಕಾರಿಗೆ ಹೋಗುವವರೇನಾದರೂ ಪೋಲಿಸರಿಗೆ ಸಿಕ್ಕಿ ಬಿದ್ದರೆ, ಎತ್ತಿಕೊಂಡು ಹೋಗಿ ಸ್ಟೇಷನ್ ನಲ್ಲಿ ಅಂಗಿ ಚಡ್ಡಿ ಎಲ್ಲಾ ಬಿಚ್ಚಿಸಿ ಚೆನ್ನಾಗಿ ಏರೋಪ್ಲೇನ್, ಹೆಲಿಕಾಪ್ಟರ್ ಗಳನ್ನು ಹತ್ತಿಸುತ್ತಾರೆ.." ಎಂದು ಮೆಲ್ಲಗೆ ಒಂದು ಬಾಂಬು ಎಸೆದೆ. 


ನಡೆಯುತ್ತಿದ್ದ ಅವನು ಸ್ವಲ್ಪ ಹೊತ್ತು ಮೌನವಾದ.ಆ ನಂತರ ಹೇಳಿದ " ನಾನೇನು ಸುಮ್ಮನೆ ಪ್ರಾಣಿಗಳನ್ನು ಕೊಲ್ಲುತ್ತಿಲ್ಲ, ಅವುಗಳು ನಮಗೆ ಉಪದ್ರ ಮಾಡುತ್ತವೆ.ಅವುಗಳ ಹಾವಳಿ ಅತಿಯಾದಾಗ ನಮ್ಮ ರಕ್ಷಣೆಗೆ,ನಮ್ಮ ತೋಟ,ಗದ್ದೆ,ಬೆಳೆದ ತರಕಾರಿಗಳ ರಕ್ಷಣೆಗೆ ನಾವು ಶಿಕಾರಿ ಮಾಡುತ್ತೇವೆ ಅಷ್ಟೇ.." ಎಂದು ಹೇಳಿದ ಪಯ್ಯ. 


ಅವನಿಗೆ ಯಾರೋ ಈ ಉತ್ತರ ಹೇಳಿ ಹೇಳಿ ಅಭ್ಯಾಸ ಮಾಡಿಸಿರಬೇಕು ಅದನ್ನೇ ನನ್ನ ಮುಂದೆಯೇ ಉರು ಹೊಡೆಯುತ್ತಿದ್ದ.


" ಈ ಕಾಡು ಹಂದಿಗಳನ್ನು ಕೊಲ್ಲುತ್ತೀ ಅಲ್ವಾ.. ಅದು ನಿನಗೆ ಏನು ತೊಂದರೆ ಮಾಡಿದೆ ಹೇಳು ಪಯ್ಯ... " ಅಂದೆ. 


" ಅದು ನಮ್ಮನೆಯ ಗೆಣಸುಗಳನ್ನು ಅಗೆದು ಅಗೆದು ತಿನ್ನುತ್ತದೆ.. "ಎಂದು ತಡವರಿಸದೇ ಉತ್ತರ ಕೊಟ್ಟ ಪಯ್ಯ. 


ಅಯ್ಯೋ ಪಾಪಿ.ಕೇವಲ ನಾಲ್ಕು ಗೆಣಸಿಗಾಗಿ ಒಂದಿಡೀ ಕಾಡು ಸಂತಾನವನ್ನೇ ನಾಶ ಮಾಡುತ್ತಿರುವೆಯಲ್ಲೋ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ. 


" ಮತ್ತೆ ಆ ಚಂದದ ನವಿಲುಗಳು...? " ಪುನಃ ಕೇಳಿದೆ. 


" ಅವುಗಳ ಉಪದ್ರ ಹೇಳಿ ಪ್ರಯೋಜನವಿಲ್ಲ.ಅವುಗಳು ಅಲಸಂಡೆಗಳನ್ನು ತಮ್ಮ ಕೊಕ್ಕಿನಲ್ಲಿ ಕಚ್ಚಿಕೊಂಡು ಹಾಗೇ ಓಡಿ ಬಿಡುತ್ತವೆ,ಒಂದನ್ನೂ ಉಳಿಸುವುದಿಲ್ಲ ಮಾರಿಗಳು..." ಎಂದು ಕೂಡಲೇ ಉತ್ತರಿಸಿದ. 


ಒಟ್ಟಿನಲ್ಲಿ ಅವನಲ್ಲಿ ಎಲ್ಲದಕ್ಕೂ ಅವನಿಗೆ ಸರಿಹೊಂದುವ ಉತ್ತರಗಳಿದ್ದವು.ಅದು ಎಷ್ಟು ಸರಿ ತಪ್ಪು ಎಂಬ ಚಿಂತೆ ಆಗಲಿ ಚಿಂತನೆಯಾಗಲಿ ಅವನಲ್ಲಿ ಇರಲಿಲ್ಲ. 


" ಈ ಮೊಲಗಳನ್ನಾದರೂ ಏತಕ್ಕಾಗಿ ಹೊಡೆಯುತ್ತೀರಿ.. ಅದು ನಿಮ್ಮ ಜಾಗಕ್ಕೆ ಬಂದು ತಿನ್ನುವಂತಹದ್ದು ಏನಿದೆ ನಿಮ್ಮಲ್ಲಿ ..?" ಮತ್ತೆ ಕೇಳಿದೆ. 


" ಅದು  ಕ್ಯಾರೇಟ್ ತಿನ್ನುತ್ತದೆ.." ನನ್ನ ಹಿಂದಿನಿಂದ ನಡೆದು ಬರುತ್ತಿದ್ದ ಪೊಲ್ಲ ಹೇಳಿದ. 


ಕಾರ್ಟೂನ್ ನೋಡಿ ನೋಡಿ ಇವನು ಮೊಲ ಬರೀ ಕ್ಯಾರೆಟ್ ಅಷ್ಟೇ ತಿನ್ನುತ್ತದೆ ಮತ್ತು ಕ್ಯಾರೆಟ್ ನಮ್ಮ ಜಿಲ್ಲೆಯಲ್ಲಿ ಅದರಲ್ಲೂ ಈ ಕುಟ್ಟಿದಪಲ್ಕೆಯಲ್ಲಿ ಕೂಡ  ಬೆಳೆಯುತ್ತಾರೆಂದು  ಅಂದುಕೊಂಡಿದ್ದಾನೆಂದು ತಿಳಿದು ನನಗೆ ನಗು ಬಂತು.ಒಟ್ಟಿನಲ್ಲಿ ಪೊಲ್ಲ ಕ್ಯಾರೆಟ್ ಕೃಷಿಯನ್ನು ಈ ಮೊಲಗಳಿಗಾಗಿ ನಮ್ಮ ಜಿಲ್ಲೆಗೆ ಅದಾಗಲೇ ತಂದು ಬಿಟ್ಟಿದ್ದ. 



" ಅಷ್ಟೊಂದು ಕ್ಯಾರೆಟ್ ಎಂತಕ್ಕೆ ಪೊಲ್ಲ,ಅವುಗಳು ಸ ಹಲ್ವಾ ಏನಾದರೂ..." ಎಂದು ಪೊಲ್ಲನಲ್ಲಿಯೇ ಹಿಂದಕ್ಕೆ ತಿರುಗಿ ಕೇಳಿದೆ.


ನಾನು ಹೇಳಿದ್ದು ಕೇಳದವನಂತೆ ಅವನು ಬೇರೆ ಎಲ್ಲೋ ನೋಡುತ್ತಾ ನಡೆಯುತ್ತಿದ್ದ. 


"ಹಾಗಾದರೆ ಹಲಸಿನ ಹಣ್ಣುಗಳನ್ನು ತಿನ್ನುವ,ಜೇನು ಕದಿಯಲು ಬರುವ ಈ ಕರಡಿಗಳನ್ನು ಏಕೆ ಕೊಲ್ಲುವುದಿಲ್ಲ ನೀನು... " ಪಯ್ಯನಲ್ಲಿ ಕೇಳಿದೆ. 


ಈಗ ಕಳ್ಳ ಸಿಕ್ಕಿಬಿದ್ದ.ಇದಕ್ಕೆ ಅವನ ಬಳಿ ಖಂಡಿತಾ ಉತ್ತರವಿಲ್ಲ;ಹಾಗಂತ ನಾನಂದುಕೊಂಡಿದ್ದೆ.ಆದರೆ ಅದಕ್ಕೆ ಕೂಡ ಅವನ ಬಳಿ ಒಂದು ಸಿದ್ದ ಉತ್ತರವಿತ್ತು. 


" ನಿಮಗೆ ಪುರಾಣ ಎಲ್ಲಾ ಗೊತ್ತಿಲ್ಲ ಎಂದು ಕಾಣುತ್ತದೆ.ಕರಡಿ ಅಂದರೆ ಜಾಂಬವಂತ,ಅದನ್ನೆಲ್ಲ ಕೊಲ್ಲುವ ಹಾಗಿಲ್ಲ... " ಎಂದು ಭುಜ ಕುಣಿಸಿ ಹೇಳಿ ನಡೆಯುವುದನ್ನು ಮುಂದುವರಿಸಿದ ಪಯ್ಯ.



ನನ್ನ ಮ..ಗ..ನೇ..ನಿನ್ನ ಎಲ್ಲಾ ಲಾಜಿಕ್ ಗಳು ಕೂಡ ನಿನಗೆ ಬೇಕಾದಂತೆಯೇ ಇದೆ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.ಹಾಗಾಗಿ ಈ ಬಾಳೆಹಣ್ಣುಗಳನ್ನು ಕಬಳಿಸುವ ಮಂಗಗಳನ್ನು ಏಕೆ ನೀನು ಕೊಲ್ಲುವುದಿಲ್ಲ ಎಂದು ಕೇಳಿದರೆ ಅದಕ್ಕೆ ಅವನ ನೀಡುವ ಉತ್ತರ ಏನಿರಬಹುದು ಎಂದು ಮೊದಲೇ ಗೊತ್ತಾಗಿ ನಾನು ಮುಂದೆ ಅಂತಹ ಪ್ರಶ್ನೆ ಕೇಳದಿರಲು ನಿರ್ಧರಿಸಿದೆ. 



ಮರದ ಎಡೆಗಳಲ್ಲಿ ಅಲ್ಲಲ್ಲಿ ಬೆಳಂದಿಗಳ ಪ್ರಭೆ ಇಷ್ಟಿಷ್ಟೇ ಇಣುಕಿ ನಮ್ಮನ್ನೇ ನೋಡುತ್ತಿದ್ದವು.ತಲೆಗೆ ಕಟ್ಟಿಕೊಂಡಿದ್ದ ಪ್ರಖರ ಬೆಳಕಿನ ಲೈಟು ನಮ್ಮ ಮುಂದಿದ್ದ ದಾರಿಯನ್ನು ನಮಗೆ ಇಂಚಿಚೂ  ತೋರಿಸುತ್ತಿದ್ದವು.ಕೂರನ ಹಿಂದೆಯೇ ಮೂವರೂ ನಡೆದೆವು.ನಮ್ಮ ನಡಿಗೆ ಕುಟ್ಟಿದಪಲ್ಕೆಯ ದಟ್ಟ ಕಾಡಿನ ನಡುವೆ ಮತ್ತಷ್ಟು ಮುಂದುವರಿಯಿತು. 


" ಇವತ್ತು ಬೇಟೆ ಸಿಗುವ ಸಂಭವ ಹೇಗಿದೆ.ಏನಾದರೂ ಕಾಡಿನ  ಮುನ್ಸೂಚನೆಗಳು .." ಈ ಮೊದಲು ನಿರಂತರವಾಗಿ ಪ್ರಶ್ನೆ ಕೇಳಿ ಸತಾಯಿಸಿದ್ದಕ್ಕಾಗಿ ಈ ಬಾರಿ ಅವನನ್ನು ಉತ್ತೇಜಿಸುವ ಪ್ರಶ್ನೆಯನ್ನೇ ಕೇಳಿದೆ ನಾನು. 


" ಓ ನೀಲು ಅಣ್ಣ..ನಿನಗೆ ಪಯ್ಯ ಬಾವನ ಬಗ್ಗೆ ಇನ್ನೂ ಗೊತ್ತಿಲ್ಲ. ಅವನು ಕಲಿಪುರುಷ.ಬೇಟೆ ಸಿಗದೆ ಬರೀ ಕೈಯಲ್ಲಿ ಅವನು ಹಿಂದಿರುಗಿದ ದಿನಗಳೇ ಇಲ್ಲವಂತೆ ಈ ಊರಿನಲ್ಲಿ ..." ಎಂದು ಪೊಲ್ಲ ಮತ್ತೆ ಪಯ್ಯನ ಪ್ರಶಂಸೆಗೆ ಇಳಿದ. 


ನನಗೆ ಇವನನ್ನು ಈ ಪೊಲ್ಲ,ಪಯ್ಯನ ರವಿ ದೊಡ್ಡಪ್ಪ ಇವರುಗಳು ಏತಕ್ಕಾಗಿ ಇವನಿಗೆ ಕಲಿಪುರುಷ ಕಲಿಪುರುಷ ಎಂದು ಹೇಳುತ್ತಾರೆ ಎಂದು ನಿಜವಾಗಿಯೂ ಗೊತ್ತಾಗಲಿಲ್ಲ.ಪುಷ್ಕರನನ್ನು ಪ್ರವೇಶಿಸಿ ಪಗಡೆಯಾಟದಲ್ಲಿ ನಳ ಮಹಾರಾಜನನ್ನು ಸೋಲಿಸಿ ಇನ್ನಿಲ್ಲದಂತೆ ಕಾಡಿದ್ದ ಕಲಿ ಪುರುಷನ ಬಗ್ಗೆ ಒಂದಿಷ್ಟು ಕೇಳಿದ್ದೆ,ದುರ್ಯೋಧನ ಒಳಗಿದ್ದ ಕಲಿಪುರುಷನ ಅಂಶದ ಬಗ್ಗೆಯೂ ಕೇಳಿದ್ದೆ,ಮುಂದೆ ಕಲಿಯುಗದಲ್ಲಿ ಸ್ವತಃ ಭಗವಂತ ವಿಷ್ಣುವೇ ತನ್ನ ಹತ್ತನೇ ಅವತಾರವಾದ ಕಲ್ಕಿ ಅವತಾರವನ್ನು ಎತ್ತಿ ಇತರ ಚಿರಂಜೀವಿಗಳ ಸಹಾಯವನ್ನೂ ಪಡೆದು ಪೂರ್ಣ ಪ್ರಮಾಣದಲ್ಲಿ ಜನ್ಮ ತಾಳುವ ಈ ಕಲಿಪುರುಷನನ್ನು ಸಂಹಾರ ಮಾಡುತ್ತಾನೆ ಎಂದು ಕೂಡ ಅಲ್ಲಲ್ಲಿ ಕೇಳಿದ್ದೇನೆ.ಒಟ್ಟಿನಲ್ಲಿ ಕಲಿಪುರುಷ ಅಂದರೆ ಕೆಟ್ಟವನು.ಹಾಗಾದರೆ ಇವನು ಯಾವ ರೀತಿ ಕೆಟ್ಟವನು?



ಬಹುಶಃ ಕಾಡು ಪ್ರಾಣಿಗಳ ಪಾಲಿಗೆ ಇವನು ಕಲಿಪುರುಷನಂತೆ ಕ್ರೂರಿಯಾಗಿರಬಹುದು.ಸಿನಿಮಾದದ ರಣಬೇಟೆಗಾರನಂತೆ ಇವ ಈ ಕುಟ್ಟಿದಪಲ್ಕೆಯ ಕಾಡಿಗೆ ಕಲಿಪುರುಷ ಎಂದು ನನಗೆ ನಾನೇ ತೀರ್ಮಾನಿಸಿದೆ.ಆದರೂ ಒಮ್ಮೆ ಇವನಲ್ಲಿಯೇ ಅದನ್ನು ಕೇಳಿ ಬಿಡುವ,ಇವನಲ್ಲಿ ಇದಕ್ಕೂ ಏನಾದರೂ ಒಂದು ಪೆದಂಬು(ವಿತಂಡ)ಉತ್ತರ ಇರಬಹುದು ಎಂದು ಆ ಪ್ರಶ್ನೆಯನ್ನು ಪಯ್ಯನಲ್ಲೇ ಕೇಳಿದೆ. 


" ಅದು ಹೌದು ಪಯ್ಯ.. ನಿನ್ನ ದೊಡ್ಡಪ್ಪ,ಈ ಪೊಲ್ಲ ಹಾಗೂ ಈ ಊರಿನವರು ಸಹ ಎಲ್ಲರೂ ನಿನ್ನನ್ನು 'ಊರಿನ  ಕಲಿಪುರುಷ' ಎಂದೇ ಕರೆಯುತ್ತಾರಲ್ಲ,ಯಾಕೆ ಹಾಗೆ? ಹೆಚ್ಚಾಗಿ ಜನರು ತುಂಬಾ ಒಳ್ಳೆಯವನಾದರೆ ಮಹಾಪುರುಷ,ಅವತಾರ ಪುರುಷ,ಆದಿ ಪುರುಷ,ಯುಗಪುರುಷ,ಸುಖ ಪುರುಷ,ಸಿದ್ದಪುರುಷ..ಎಂದೆಲ್ಲಾ ಕರೆಯುವುದನ್ನು ನಾನು ಕೇಳಿದ್ದೆನೆ.ನೀನು ಅದು ಹೇಗೆ ಕಲಿಪುರುಷ ? " ಎಂದು ಅವನಲ್ಲಿಯೇ ಕೇಳಿದೆ. 


" ಓಹ್ ಅದಾ..ಅದು ಏನಿಲ್ಲ,ನನ್ನಷ್ಟು ಕಲಿ(ಶೇಂದಿ) ಕುಡಿಯುವವರು ನಮ್ಮ ಊರಿನಲ್ಲಿಯೇ ಯಾರೂ ಇಲ್ಲ.ಊರಿನ ಕಲಿ ಗಡಂಗ್ ಬೆಳಿಗ್ಗೆ ಓಪನ್ ಮಾಡುವಾಗ ಕೂಡ ಮೊದಲಿಗನಾಗಿ ಅಲ್ಲಿ ನಾನಿರುತ್ತೇನೆ,ಅದನ್ನು ಸಂಜೆ ಮುಚ್ಚಿ ಗಡಂಗಿನವನು ಬೀಗ ಹಾಕುವಾಗ ಕೂಡ ಕೊನೆಯವನಾಗಿ  ನಾನೇ ಹೆಚ್ಚಾಗಿ ಅಲ್ಲಿ ಇರುತ್ತೇನೆ. ಹಾಗಾಗಿ ಕಲಿಪ್ರಿಯನಾದ ನನ್ನನ್ನು ಎಲ್ಲರೂ ಬಹಳ ಗೌರವದಿಂದ ಕಲಿಪುರುಷ,ಕಲಿಪುರುಷ ಎಂದೇ ಈ ಊರಿನಲ್ಲಿ ಕರೆಯುತ್ತಾರೆ.." ಎಂದು ಹೇಳಿ ಮುಗಿಸಿದ ಕಲಿಪುರುಷ ಪಯ್ಯ. 


ನನಗೊಮ್ಮೆ ಈ ಬಂಡೆ ಹೊಡೆಯುವ ದೊಡ್ಡ ಸುತ್ತಿಗೆ ತೆಗೆದುಕೊಂಡು,ಅದರಿಂದಲೇ ಅವನಿಗೆ ಆರಂಭದಿಂದಲೂ ಒಟ್ರಾಶಿ ಬಿಲ್ಡ್ ಅಪ್ ಕೊಟ್ಟ ಪೊಲ್ಲನಿಗೊಮ್ಮೆ ಜೋರಾಗಿ ಬಡಿದು ಬಿಡಬೇಕು ಎಂಬಷ್ಟು ಕೋಪ ಬಂದು ಬಿಟ್ಟಿತು. 


" ಅಂದರೆ ನೀನು ಕಲಿ ಕುಡಿದು ಬೇಟೆಯಾಡಲು ಹೋಗಿ ಹೋಗಿ ಬೇಟೆಯ ಕಲಿಪುರುಷ ಆದದ್ದಾ..? " ದಾರಿಯಲ್ಲಿ ನಡೆಯುತ್ತಲೇ ಮತ್ತೆ ಪ್ರಶ್ನೆ ಕೇಳಿದೆ. 


" ಹಿಂದೆ ಎಲ್ಲಾ ಇಡೀ ದಿನ ಒಳ್ಳೆಯ ಸಿಹಿ ಕಲಿ ಯಾವಾಗ ಬೇಕಾದರೂ ಸಿಗುತ್ತಿತ್ತು.ಅಷ್ಟೇನು ಅಮಲು ಕೂಡ ಆಗುತ್ತಿರಲಿಲ್ಲ,ಈಗ ಎಲ್ಲಿ ಅಷ್ಟೊಂದು ತಾಜಾ ಸಿಗುತ್ತದೆ. ಕೇವಲ ಪುಳಿಕಲಿ(ಹುಳಿಯಾದ ಕಲಿ) ಅಷ್ಟೇ ಇರುವುದು ಎಲ್ಲಾ ಕಡೆ... " ಎಂದು ಹೇಳಿದವನೇ ತನ್ನ ಅಂಗಿಯನ್ನು ಮೇಲೆತ್ತಿ ಸೊಂಟದ ಪಂಚೆಯಲ್ಲಿ  ಸಿಕ್ಕಿಸಿದ್ದ ಬಾಟಲಿಯೊಂದನ್ನು ತೆಗೆದುಕೊಂಡು ಅದರಲ್ಲಿದ್ದ ಬಿಳಿಯ ಬಣ್ಣದ ಪುಳಿಕಲಿಯನ್ನು ಗಟಗಟನೆ ಕುಡಿದು ನಮ್ಮೆದುರೇ ಬಾಟಲಿ ಖಾಲಿ ಮಾಡಿ ಬಿಟ್ಟ ಪಯ್ಯ. 


ನನಗೆ ಇವನು ಈ ಅಮಲಿನಲ್ಲಿ ಎಂತಹ  ಶಿಕಾರಿ ಮಾಡಬಲ್ಲ ಎಂದು ಅವನ ಸಾಮರ್ಥ್ಯದ ಬಗ್ಗೆಯೇ ಮೊದಲ ಬಾರಿಗೆ ಸಂದೇಹ ಬಂತು.ಆದರೆ ಅವನ ರವಿ ದೊಡ್ಡಪ್ಪ ಕೂಡ ಹೇಳಿದ್ದರು" ಇವನೊಬ್ಬ ಕಲಿಪುರುಷ..ಇವನ ಬಾಡಿಯಲ್ಲಿ ಕಲಿಪುರುಷನ ಅವತಾರ ಆದರೆ ಅಷ್ಟೇ ಬೇಟೆ ಫಿನಿಷ್.." ಎಂಬ ಮಾತುಗಳು ನೆನಪಾಗಿ.ನಿಜವಾಗಿಯೂ ಇವನು ನಾರ್ಮಲ್ ಜನ ಅಲ್ಲ,ಇವನೊಬ್ಬ ಡಿಫರೆಂಟ್ ಬೇಟೆಗಾರನೇ ಇರಬೇಕು ಎಂದು ಕಷ್ಟಪಟ್ಟು ಆದರೂ ಅಂದುಕೊಂಡೆ.



ಆದರೆ ಇವನು ಕಲಿಪುರುಷ ಎನ್ನುವುದನ್ನು ರವಿಯಣ್ಣ ಮನೆಯಲ್ಲಿ ಎಲ್ಲರೆದುರು ಹೇಳದೆ ಹತ್ತಿರ ಬಂದು ಕೇವಲ ನನಗೆ ಕೇಳಿಸುವಂತೆ ಹೇಳಿದ್ದು ಇವನು ಈ ರೀತಿಯಾಗಿ ಕಲಿ ಕುಡಿಯುವುದಕ್ಕಾಗಿಯೇ ಇರಬಹುದಾ? ಅವರು ಹೇಳಿದ್ದು ನಿಜವಾಗಿಯೂ ವಿಡಂಬನೆ ಅಲ್ಲ ತಾನೇ ಎಂಬ ಇನ್ನೊಂದು ಆಲೋಚನೆಯೂ ತಲೆಯಲ್ಲಿ ಹಾಗೇ ಓಡಿತು. 


ನನ್ನ ಮನಸ್ಸಿನಲ್ಲಿದ್ದ ಗೊಂದಲ ಅರ್ಥ ಮಾಡಿಕೊಂಡ ಪೊಲ್ಲ .. " ಅಣ್ಣ...ನೀನು ಟೆನ್ಶನ್ ಮಾಡ್ಬೇಡ.ಅವನು ಕಲಿಪುರುಷ...ಅವನಿಗೆ ಬೇಟೆ ಎನ್ನುವುದು ಚಿಟಿಕೆ ಹೊಡೆದಷ್ಟು ಸುಲಭ,ಶಿಕಾರಿ ಅಂದರೆ ಇದೆಲ್ಲಾ ಕಾಮನ್ನು.ಮುಂದೆ ಪಯ್ಯ ಬಾವನ ಚಮತ್ಕಾರವನ್ನು ನೀನೇ ನಿನ್ನ ಕಣ್ಣಾರೆ ನೋಡುವೆಯಂತೆ ಬಿಡು .." ಎಂದು ಪಯ್ಯನ ಪರ ವಹಿಸಿಕೊಂಡು ಹೇಳಿದ ಪೊಲ್ಲ.ಅವನು ಇದೆಲ್ಲಾ ಕಾಮನ್ನು ಎಂದು ಹೇಳುವಾಗ ಪೊಲ್ಲ ಕೂಡ ಚಿಕ್ಕಂದಿನಲ್ಲಿಯೇ ಶಿಕಾರಿಗೆ ಹೋಗಿ ಹೋಗಿ ಬಹಳಷ್ಟು ಅನುಭವ ಉಳ್ಳವನಂತೆ ಕಂಡ. 


ಅದನ್ನು ಅರ್ಥಮಾಡಿಕೊಂಡ ಪಯ್ಯ ನಾನಿರುವಾಗ ನಿಮಗೆ ಶಿಕಾರಿಯ ಚಿಂತೆ ಯಾಕೆ ಎನ್ನುವುದನ್ನು ಕೇವಲ ತನ್ನ ಕೈ ಸನ್ನೆಯಲ್ಲಿಯೇ ಹೇಳಿದ್ದನ್ನು ನೋಡಿದಾಗ ನನಗೆ,ಈ ಮುಂಬೈ ಇಂಡಿಯನ್ಸ್ ನ ಸೂರ್ಯಕುಮಾರ್ ಯಾದವ್ ನಾನ್ ಸ್ಟ್ರೈಕರ್ ಬ್ಯಾಟ್ಸ್‌ಮನ್ ಗೆ,ಟೆನ್ಶನ್ ಮಾಡ್ಬೇಡ ನಾನಿದ್ದೇನೆ,ನಾನಿರುವುದೇ ನಿಮಗಾಗಿ,ಟೀಮ್ ಇರುವುದೇ ನಮಗಾಗಿ ಎಂಬ ಭರವಸೆಯನ್ನು ಎದೆ ಮುಟ್ಟಿಕೊಂಡು ಕಣ್ಣು ಮಿಟುಕಿಸಿಕೊಂಡು  ಕೈ ಸನ್ನೆಯಲ್ಲಿಯೇ ಹೇಳಿದ್ದ ಆ ದೃಶ್ಯವೊಂದು ಈ ಕುಟ್ಟಿದಪಲ್ಕೆಯ ಕಾಡಿನಲ್ಲೂ ಒಮ್ಮೆ ಕಣ್ಣ ಮುಂದೆ ರಪ್ಪ ಅಂತ ಪಾಸಾದಂತಾಯಿತು. 


ಆದರೆ ಈ ಪೊಲ್ಲನಂತು ಪದೇ ಪದೇ ಕಲಿಪುರುಷ ಕಲಿಪುರುಷ ಎಂದು ಹೇಳುವಾಗ ನನಗೆ ಮುಂದೊಂದು ದಿನ ಇದೇ ಹೆಸರಿಟ್ಟು   ಈ ಊರಿನ ಗಡಂಗಿನವರು ಇವನಿಗೆ ಸನ್ಮಾನ ಮಾಡಿದರೂ ಕೂಡ ಅಚ್ಚರಿಯಿಲ್ಲ ಎಂದು ಅನಿಸಿತು.


ಇನ್ನೂ ನಡೆಯುತ್ತಲೇ ಇದ್ದೆವು.ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೇನೆ ಎನ್ನುವುದು ಕೇವಲ ಪಯ್ಯನಿಗಷ್ಟೇ ಗೊತ್ತಿತ್ತು


" ಶಿಕಾರಿಗೆ ಹೋಗುವಾಗ ಇತರ ಅಪಾಯಕಾರಿ ಮೃಗಗಳ ಬಗ್ಗೆಯೂ ನಮಗೆ ಎಚ್ಚರ ಅವಶ್ಯಕ.ಶಿಕಾರಿಗೆ ಬಂದ ನಾವೇ ಇಲ್ಲಿ ಶಿಕಾರಿಯಾಗಿ ಹೋಗುವ ಸಂಭವವೂ  ಇರುತ್ತದೆ.." ಮುಂದೆ ಮುಂದೆ ನಡೆಯುತ್ತಲೇ ಹೋಗುತ್ತಿದ್ದ ಪಯ್ಯ ಹೇಳಿದ.


" ಅಂತಹ ಅಪಾಯಕಾರಿ ಪ್ರಾಣಿಗಳು ಏನೇನಿದೆ ಈ ಕಾಡಿನಲ್ಲಿ..." ಕೇಳಿದೆ.


" ಆನೆ,ಕಾಟಿ,ವಿಷಕಾರಿ ಹಾವುಗಳು,ಕರಡಿ,ಹುಲಿ ಸಿಂಹ ಎಲ್ಲಾ ಇವೆ..ಕೆಲವೊಮ್ಮೆ ರಣ ಕೂಡ ಇರುತ್ತದೆ... "ಎಂದು ಪಯ್ಯ ಹೇಳಿದ.


ಬಾಕಿ ಎಲ್ಲಾ ಓಕೆ.ಇಲ್ಲಿ ಸಿಂಹ ಹೇಗೆ ಎನ್ನುವುದು ನಿಜಕ್ಕೂ ನನ್ನಂತಹ ಸಾಮಾನ್ಯನ ಕಲ್ಪನೆಗೂ ನಿಲುಕದ ವಿಷಯವಾಗಿತ್ತು. ಇವನ ಇಂತಹ ಮಾತುಗಳನ್ನೇ ಕೇಳಿ ಪೊಲ್ಲ ಕೂಡ ಇಲ್ಲಿ ಸಿಂಹ ಇದೆ ಎಂದು ಹೇಳುತ್ತಿದ್ದದ್ದು ಎಂದು ನಾನು ಅರ್ಥಮಾಡಿಕೊಂಡೆ.ಒಟ್ಟಿನಲ್ಲಿ ಗುಜರಾತಿನ  ಗಿರ್ ಅರಣ್ಯದಲ್ಲಿರಬಹುದಾದ ಸಿಂಹಗಳನ್ನು ಇವರಿಬ್ಬರು ಈ ಕಾಡಿನಲ್ಲಿಯೂ ಕೂಡ ತಮ್ಮ ಮಾತುಗಳ ಮೂಲಕ ಇಲ್ಲೂ  ಜೀವಂತವಾಗಿಟ್ಟಿರುವುದು ನನಗೆ ಸಿಕ್ಕಾಪಟ್ಟೆ ಭಯ ತಂದಿತು. 


ಪಯ್ಯ ಅಪಾಯಕಾರಿ ಪ್ರಾಣಿಗಳ ಹೆಸರಿನ ಪಟ್ಟಿ ಹೇಳಿ ಸ್ವಲ್ಪ ಹೊತ್ತಾದ ಮೇಲೆ "ಇಲ್ಲಿ ಚೀತಾ ಇದೆಯಾ?.."  ಎಂದು ಪೊಲ್ಲ ಕೇಳಿದ!


ಇದು ಅಸಾಮಾನ್ಯರು ಕೇಳಬಹುದಾದ ಪ್ರಶ್ನೆ ಹಾಗೂ ಪಯ್ಯನಂತಹ ತುಂಬಾ ಅಸಾಮಾನ್ಯನೇ ಉತ್ತರಿಸಬೇಕಾದ ಪ್ರಶ್ನೆ ಎಂದು ನನಗೆ ನಾನೇ ಅಂದುಕೊಂಡೆ.ಆದರೂ ಪಯ್ಯ ಏನು ಉತ್ತರ ನೀಡಬಹುದು ಈ ಪ್ರಶ್ನೆಗೆ ಎಂದು ನಾನು ಕಿವಿಯರಳಿಸುತ್ತಲೇ ನಡೆದೆ. 



" ಅದೆಲ್ಲಾ ಅದೃಷ್ಟ ಇದ್ದರೆ ಅಷ್ಟೇ ಸಿಗುವುದು..." ಎಂದು ಹೇಳಿದ  ಪಯ್ಯ ತನ್ನ ನಡಿಗೆ ಮುಂದುವರಿಸಿದ. 


ಇವನು ಯಾವುದೋ ನಾಯಿಪಿಲಿಗೆನೇ ಚೀತಾ ಎಂದುಕೊಂಡಿದ್ದಾನೋ ಹೇಗೆ ಎಂದು ನಾನಂದುಕೊಂಡೆ.ಈ ನಾಯಿಗಳನ್ನು ಹಿಡಿಯುವ ಒಂದು ರೀತಿಯ ಚಿರತೆ ಇದೆ, ಕೆಲವರು ಅದನ್ನು ಚಿರತೆ ಎಂದೇ ಹೇಳುತ್ತಾರೆ.ಇನ್ನು ಕೆಲವರು ಚಿಟ್ಟೆ ಹುಲಿ,ಚಿಟ್ಟೆ ಚಿರತೆ,ನೈಪಿಲಿ ಎಂದೆಲ್ಲಾ ಕರೆಯುತ್ತಾರೆ.ಅದು ಹೆಚ್ಚಾಗಿ ಮನೆಯ ನಾಯಿಗಳನ್ನು ರಾತ್ರಿ ವೇಳೆ ಬಂದು ಸದ್ದಿಲ್ಲದೇ  ಕಬಳಿಸುತ್ತದೆ;ಈ ನರಿಗಳು ಕೋಳಿಗಳನ್ನು ಕಬಳಿಸುವಂತೆ.ನಮ್ಮ ಪಲ್ಕಿ ಕೂಡ ಹಳ್ಳಿಯೇ.ಬೈಲು ಗದ್ದೆಗಳು ಸಣ್ಣಪುಟ್ಟ ಗುಡ್ಡಗಳಿದ್ದಾವೆ ಅಲ್ಲಿ.ಹಾಗಾಗಿ ಅಲ್ಲಿಯೂ ಕೆಲವೊಮ್ಮೆ ಈ ನಾಯಿಪಿಲಿ ಬಂದು ನಾಯಿ ಕಚ್ಚಿಕೊಂಡು ಹೋದ ಕಥೆಗಳು ಅಪರೂಪಕ್ಕೊಮ್ಮೆ ಕೇಳಿ ಬರುತ್ತವೆ.ಇವನು ಚೀತಾ ಬಗ್ಗೆ ಹೇಳಿದಾಗ ನನಗೆ ಮೊದಲು ಅದೇ ನೆನಪಾಯಿತು.



 ಈ ಪಯ್ಯ ಅದೃಷ್ಟ ಇದ್ದರೆ ಚೀತಾ ಕೂಡ ಈ ಕಾಡಿನಲ್ಲಿ ಸಿಗುತ್ತದೆ ಎಂದು ಹೇಳಿದ್ದು ಚೀತಾವನ್ನು ಶಿಕಾರಿ ಮಾಡುವ ಅವಕಾಶಕ್ಕಾಗಿಯೇ ಆದರೂ,ನಾನು ಮಾತ್ರ ಅದಕ್ಕೆ ನಾವು ಸಿಕ್ಕರೆ,ನಾವುಗಳೇ ಅದರ ಭೂರಿ ಭೋಜನದ್ದೊಂದು ಅವಕಾಶ ಎಂದು ಇನ್ನಿಲ್ಲದಂತೆ ಭಯ ಪಟ್ಟುಕೊಂಡೆ. 


ಈ ಪಯ್ಯ ಮಾತಾಡುವ ರೀತಿ ನೋಡಿದರೆ ಎಪ್ಪತ್ತು ವರ್ಷಗಳ ಹಿಂದೆಯೇ ಚೀತಾ ನಶಿಸಿ ಹೋಗಿತ್ತು ಎನ್ನುವುದೆಲ್ಲಾ ಶುದ್ಧ ಸುಳ್ಳು,ಏಕೆಂದರೆ ಯಾರೂ ಸಹ ಕುಟ್ಟಿದಪಲ್ಕೆಯ ಈ ಕಾಡಿಗೆ ಬಂದು  ಸರಿಯಾಗಿ ತಲಾಶ್ ಮಾಡ್ಲಿಲ್ಲ.ಹಾಗಾಗಿಯೇ ತಜ್ಞರಿಗೆ ಇಲ್ಲಿ ಚೀತಾ ಇರುವುದು ಗೊತ್ತಿಲ್ಲ.ಅದರಲ್ಲೂ ದೇಶದ ಕೊನೆಯ ಮೂರು ಚೀತಾಗಳನ್ನು ಏಳು ದಶಕಗಳ ಹಿಂದೆ ಛತ್ತೀಸ್‌ಗಢದ ರಾಜ ಮಹಾರಾಜ ರಾಮಾನುಜ್ ಪ್ರತಾಪ್ ಸಿಂಗ್ ದೇವ್ ರಾತ್ರಿ ಬೇಟೆಯಾಡಿದ ಎಬುದು ಕೂಡ ಸುಳ್ಳು ಅಪವಾದವೇ ಎಂದು ಅನಿಸಿತು.ಏಕೆಂದರೆ ಕುಟ್ಟಿದ ಪಲ್ಕೆಯ ಕಾಡಿನಲ್ಲಿ ಈಗಲೂ ರಾಶಿ ರಾಶಿ ಚೀತಾಗಳಿರುವಾಗ ಅದು ಹೇಗೆ ರಾಜ ಕೊಂದ ಚೀತಾಗಳು ಕೊನೆಯ ಚೀತಾವಾಗಿರಲು ಸಾಧ್ಯ..ಎಂದು ಒಳಗೊಳಗೆಯೇ  ನಗು ಬಂದು ಮತ್ತೆ ನಡಿಗೆ ಮುಂದುವರಿಸಿದೆ. 


" ಅದು ಹೌದು ರಣ ಅಂದರೆ ಎಂತ? " ಪೊಲ್ಲ ಕುತೂಹಲದಿಂದಲೇ ಮತ್ತೆ ಕೇಳಿದ.


ಪಯ್ಯ ಅಪಾಯಕಾರಿ ಪ್ರಾಣಿಗಳ ಹೆಸರು ಹೇಳುವಾಗ ಈ ಕಾಡಿನಲ್ಲಿ ರಣ ಕೂಡ ಇದೆಯೆಂದು ಹೇಳಿದ್ದನ್ನು ಪೊಲ್ಲ ಇನ್ನೂ  ನೆನಪಿನಲ್ಲಿಯೇ ಇಟ್ಟುಕೊಂಡಿದ್ದ. 


" ಏಕೆ ಅದನ್ನು ನೋಡಬೇಕು ಎಂಬ ಆಸೆಯೇ ನಿನಗೆ? ... ರಣ ಅಂದರೆ ದೆವ್ವ....! " ಎಂದು ಹೇಳಿ ನನಗೂ ಪೊಲ್ಲನಿಗೆ ಒಮ್ಮೆಲೇ ಭಯ ಹುಟ್ಟಿಸಿ ಬಿಟ್ಟ ಪಯ್ಯ.


ರಣ ಎಂದರೆ ಈ ರಣಬೇಟೆಗಾರ,ರಣಧೀರ,ರಣಕುಡಿ,ರಣರಂಗದ ತರಹ  ಅಂತಹದ್ದೇ ಏನೋ ಒಂದು ಇರಬಹುದು ಎಂದು ಪೊಲ್ಲ ತಿಳಿದುಕೊಂಡಿದ್ದಿರಬಹುದು ಎಂದು ನೆನಪಾಗಿ ಮತ್ತೊಮ್ಮೆ ನಗು ಬಂತು.


" ನಮ್ಮಂತೆ ಇತರರು ಕೂಡ ಕಾಡಿಗೆ ಶಿಕಾರಿಗೆ ಬಂದಿದ್ದರೆ ಆಗ ಅದಕ್ಕಿಂತ ಡೇಂಜರ್ ಇನ್ನೊಂದಿಲ್ಲ,ಗೊತ್ತಾಗದೇ ಮನುಷ್ಯರು ಮನುಷ್ಯರನ್ನೇ ಶಿಕಾರಿ ಮಾಡುವ ಸಂಗತಿಗಳು ಕೂಡ ನಡೆಯುತ್ತದೆ,ಕೆಲವೊಮ್ಮೆ ಶಿಕಾರಿ ಹೆಸರಿನಲ್ಲಿ ವೈರಿಗಳನ್ನು ಬೇಕೆಂದೇ ಮುಗಿಸಿ ಹಾಕುವುದೂ ಇದೆ.ಕಾಡಿನ ನಕಾರಾತ್ಮಕ ಶಕ್ತಿಗಳು,ರಣ,ಮೋಹಿನಿ ಮೊದಲಾದವು ಇಲ್ಲಿ ನಮ್ಮ ದಾರಿಯನ್ನು  ತಪ್ಪಿಸಬಹುದು.ಮರಕಳ್ಳರು,ಡಕಾಯಿತರು ಕೂಡ ಒಮ್ಮೆಲೇ ಎದುರಾಗಬಹುದು,ಕೊಲೆ ಆದಂತಹ ಹೆಣಗಳು ಕಾಲಿಗೆ ಅಡರಬಹುದು... " ಎಂದು ಹೇಳಿದ ಪಯ್ಯ ಈ ಬಾರಿ  ಹಾರರ್ ಥ್ರಿಲ್ಲರ್ ಕತೆಗಳನ್ನು ನಮಗೆ ಹೇಳಿ ನಮ್ಮನ್ನು ಹೆದರಿಸುವ ಉತ್ಸಾಹದಲ್ಲಿರುವಂತೆ ಕಂಡಿತು. 



ಇದರ ಬಗ್ಗೆ ಇವನಲ್ಲಿ ಇನ್ನೂ ಡೀಪಾಗಿ ಕೇಳಿ ಚಳಿ ಜ್ವರ ಬರಿಸಿಕೊಳ್ಳುವುದು ಬೇಡ ಎಂದು ನಿರ್ಧರಿಸಿದ ನಾನು ಮತ್ತು ಪೊಲ್ಲ ಮೌನವಾಗಿ ಎದುರಾಗುತ್ತಿದ್ದ ಕುರುಚಲು ಬಲ್ಲೆಗಳನ್ನು ಸರಿಸುತ್ತಾ ಮತ್ತೆ ಮುಂದೆ ಮುಂದೆ ನಡೆದೆವು. 


ನೂರಾರು ಬೇಟೆಗಳನ್ನು ಆಡಿದ್ದ ಅನುಭವಿ ಕೂರ ನಾಯಿ ಕೂಡ ನಮಗಿಂತ ಮುಂದೆ ಓಡಿತು. 


ಕೂಡಲೇ ನಡೆಯುತ್ತಿದ್ದ ಪಯ್ಯ ಒಂದು ಕಡೆ ನಿಂತ. ಓಹ್ ಪಯ್ಯನ ಅಸಲಿ ರಣರಂಗ ಇಲ್ಲಿಂದಲೇ ಆರಂಭವಾಗುತ್ತದೆ ಎಂದು ನನಗೆ ನಾನೇ ಅಂದುಕೊಂಡೆ. 


ನಮಗೆ ಇನ್ನು ಮುಂದೆ ಹೇಗಿರಬೇಕೆಂದು ಪಯ್ಯ ಒಟ್ರಾಶಿ ಮಾರ್ಗದರ್ಶನ ಮಾಡಲು ಶುರು ಮಾಡಿದ.


" ಇಬ್ಬರೂ ಸರಿಯಾಗಿ ಕೇಳಿಸಿಕೊಳ್ಳಿ.ಶಿಕಾರಿಗೆ ಬರುವಾಗ  ಸಿಕ್ಕಾಪಟ್ಟೆ ತಾಳ್ಮೆ ಬೇಕು.ಮೌನವೇ ಇಲ್ಲಿ ಎಲ್ಲಕ್ಕಿಂತ ದೊಡ್ಡ ಶಸ್ತ್ರ. ಸಣ್ಣ ಸದ್ದನ್ನೂ ಆಲಿಸುವ ಹರಿತಾದ ಕಿವಿ ನಮಗಿರಬೇಕು.ಕತ್ತಲಲ್ಲಿ ಕಾಣುವ ಕಣ್ಣುಗಳು ಇಂತಹದ್ದೇ ಪ್ರಾಣಿಯದ್ದು..ಈ ವಾಸನೆ ಇದೇ ಪ್ರಾಣಿಯದ್ದು..ಎಂಬ ಅರಿವು ಸಹ ಅವಶ್ಯವಾಗಿಯೇ ಇರಬೇಕು,ಅದೇ ರೀತಿ ನಮ್ಮ ವಾಸನೆ ಕೂಡ ಪ್ರಾಣಿಗೆ ಸಿಗದಂತೆ ಮಾಡಲು ಗಾಳಿ ಬೀಸುವ ದಿಕ್ಕಿನ ಬಗ್ಗೆ  ಕೂಡ ನಮಗೆ ತಿಳುವಳಿಕೆ ಬೇಕು,ಹಾಗಾಗಿ ಶಿಕಾರಿಗೆ ಬಂದಾಗ ನಾವು ಪ್ರತೀ  ಕ್ಷಣವೂ ಸದಾ ಎಚ್ಚರದಿಂದ್ದು ಜಾಗ್ರತವಾಗಿರಬೇಕು.ಶಿಕಾರಿ ಎಂದರೆ,ಈ ದಟ್ಟ ಕಾಡು ಎಂದರೆ, ರಾತ್ರಿಯ ಅದರೊಳಗಿನ ಲೋಕಗಳೆಂದರೆ ಅದು ಯಾವತ್ತಿಗೂ ಮಕ್ಕಳಾಟವಲ್ಲ... " ಎಂದು ಹೇಳಿ ಮುಗಿಸಿದ ಪಯ್ಯ. 


ಇನ್ನೂ ಇಪ್ಪತ್ತೈದೋ,ಇಪ್ಪತ್ತಾರೋ ವಯಸ್ಸಿನ ಅವನು ನನ್ನ ಕಣ್ಣಿಗೆ ಮಾತ್ರ ಸಹಸ್ರಾರು ವರ್ಷಗಳಿಂದ ಬರೀ ಬೇಟೆಯೊಂದನ್ನೇ ಆಟದಂತೆ ಆಡಿಕೊಂಡು ಬಂದ ಚತುರನಂತೆ ಕಂಡ.ಬಹುಶಃ ಬೇಜಾರು ಆದಾಗ ಡೈನೋಸಾರ್ ಗಳನ್ನು ಕೂಡ ಇವನೇ ಅಂದಕಾಲತ್ತಿಲ್ ಸಮಯದಲ್ಲಿ ಕೊಂದು ಮುಗಿಸಿರಬೇಕು ಎಂದು ನನಗೆ ನಾನೇ ಅಂದಕೊಂಡೆ. 



" ಇವತ್ತು ನಮಗೆ ನೀನು ಏನು ಬೇಟೆ ತೆಗೆದುಕೊಡುತ್ತಿ...." ಎಂದು ಸಂತೆಯಲ್ಲಿ ಮಗು ಅಪ್ಪನಲ್ಲಿ ಯಾವ ತಿಂಡಿ ತೆಗೆಸಿಕೊಡುತ್ತಿ, ಯಾವ ಆಟಿಕೆ ತೆಗೆಸಿಕೊಡುತ್ತಿ,ಬುಲ್ಡೋಜರ್ ತೆಗೆಸಿಕೊಡುತ್ತಿಯಾ ಅಥವಾ ಟಿಪ್ಟರ್ ತೆಗೆಸಿಕೊಡುತ್ತಿಯಾ ಎಂದು ಕೇಳಿದಂತೆ ಪೊಲ್ಲ ಪಯ್ಯನಲ್ಲಿ ಕೇಳಿದ..



" ನಿಮಗೇನು ಬೇಕು ಹೇಳಿ..ಹಂದಿ,ಕೋಳಿ,ಕುರಿ,ಮೊಲ,ಬರ್ಂಕ,ಉಡ ಯಾವುದು ಬೇಕು ಹೇಳಿ..ಅದನ್ನೇ ತೆಗೆಸಿಕೊಡುವ..." ಎಂದು ಪಯ್ಯ ಹೇಳಿದ. 



ನಿಮಗೇನು ಬೇಕು ಎಂದು ಅವನು ಕೇಳಿದ್ದು ನನಗೆ " ಹೇಳಿ ಏನು ಕೊಡ್ಲಿ. ಬಿಸಿ ಬನ್ಸ್ ಇದೆ.. ಗೋಳಿಬಜೆ ಇದೆ.. ಬೆಚ್ಚ ಪೋಡಿ ಇದೆ, ಸೇಮೆ ಸಾಂಬಾರ್ ಇದೆ, ಸುರ್ನೊಲಿ ಇದೆ, ಅಪ್ಪ ಇದೆ, ಕಲ್ತಪ್ಪ ಇದೆ, ನೆಯ್ಯಪ್ಪ ಇದೆ,,.. ಏನು ಕೊಡ್ಲಿ ಹೇಳಿ " ಎಂದು ಪುಲ್ಕಿ  ಹೋಟಿಲಿನಲ್ಲಿ ಮಾಬಲಣ್ಣ ಕೇಳಿದಂತಿತ್ತು.


" ನನಗೆ ಒಂದು ಜಿರಾಫೆ ಬೇಕು..." ಎಂದು ನಾನು ಹೇಳಿದೆ.


" ನನಗೊಂದು ಖಡ್ಗ ಮೃಗ.... "  ಪೊಲ್ಲ ಹೋಟೆಲಿನಲ್ಲಿ ನನಗೊಂದು ಮಸಾಲೆ ಎಂದು ಕೂಗಿ ಹೇಳುವಂತೆಯೇ ಹೇಳಿದ್ದ. 


" ಅದೆಲ್ಲಾ ಈ ಕಾಡಿನಲ್ಲಿ ಇಲ್ಲ... " ಅಂದ ಪಯ್ಯ. 


" ಹಾಗಾದರೆ ಪಕ್ಕದ ಕಾಡಿನಲ್ಲಿ ಇದೆಯಾ?.. " ಮತ್ತೆ ಅವನನ್ನು ಕೆದಕುವುದಕ್ಕಾಗಿ ಕೇಳಿದೆ.


" ಸರಿಯಾಗಿ ಹುಡುಕಿದರೆ ಸಿಗಬಹುದು.. " ಅಂದ.


ಒಟ್ಟಿನಲ್ಲಿ ಅವನ ಬಳಿ ಎಲ್ಲ ಪ್ರಶ್ನೆಗಳಿಗೂ ಅವನದ್ದೇ ಆದ  ಉತ್ತರಗಳಿದ್ದವು ಮತ್ತು ನಮ್ಮ ಜಿಲ್ಲೆಯ ಕುಟ್ಟಿದಪಲ್ಕೆ ಎಂಬ ಕಾಡಿನಲ್ಲಿ ವಿಶ್ವದ ಎಲ್ಲಾ ಖಂಡಗಳ ಪ್ರಾಣಿಗಳೂ ಜಿಗಿದು ನಲಿದು ಕುಣಿದು ಕುಪ್ಪಳಿಸಿ ಬಹಳ ಅನ್ಯೋನ್ಯವಾಗಿ ಒಟ್ಟೊಟ್ಟಿಗೆ  ಜೀವಿಸುತ್ತಿದ್ದವು;ಪಯ್ಯನ ಪ್ರಕಾರ. 



" ನಿಮಗೆ ಇವತ್ತು ನಾನು ನಿರಾಸೆ ಮಾಡಲಾರೆ.ಇವತ್ತು ನಿಮಗಾಗಿ ನಾಲ್ಕೈದು ಕಾಡುಕುರಿಗಳನ್ನೇ ಹೊಡೆದು ಬಿಡುವೆ.." ಎಂದು ಭರವಸೆ ನೀಡಿದ ನಮ್ಮ ಕಲಿಪುರುಷ ಪಯ್ಯ. 


ಏನಪ್ಪಾ ಇವನು.ಒಂದು ಕೆಜಿ ಕುರಿ ಮಾಂಸಕ್ಕೆ ಮಟನ್ ಸ್ಟಾಲಿನಲ್ಲಿ 500,600 ರೂಪಾಯಿಗಳವರೆಗೆ ರೇಟಿದೆ.ಇವನಿಲ್ಲಿ ನೂರಾರು ಕೆಜಿಗಳಷ್ಟು ಕುರಿ ಮಾಂಸಗಳ ಬಗ್ಗೆ ಅದರಲ್ಲೂ ಕಾಡುಕುರಿಗಳ ಮಾಂಸದ ಬಗ್ಗೆ ಹೇಳಿ ಸಿಕ್ಕಾಪಟ್ಟೆ ಬಾಯಲ್ಲಿ ನೀರೂರಿಸುತ್ತಿದ್ದಾನಲ್ಲಪ್ಪ ಎಂದು ನಾನು ಅದಾಗಲೇ ಕಲ್ಪನೆಯಲ್ಲಿ ತೇಲಲು ಶುರು ಮಾಡಿ ಬಿಟ್ಟೆ. 



ಪಯ್ಯನ ನಾಲ್ಕೈದು ಕಾಡುಕುರಿಗಳ ಬೇಟೆಯ ಮಾತುಗಳನ್ನು ಕೇಳಿ ಒಮ್ಮೆ ಸುಮ್ಮನೆ ಪೊಲ್ಲನ ಕಡೆಗೆ ನೋಡಿದೆ ನಾನು.ಹೇಗೆ ನಮ್ಮ ಬಾವ ಕಲಿಪುರುಷ ಎಂಬ ಲುಕ್ಕು ಅದಾಗಲೇ ಅವನ ಮುಖದಲ್ಲಿ ಬ್ರೈಟ್ ಆಗಿ ಪ್ರಕಟಗೊಂಡಿತ್ತು.


" ನೀಲು ಅಣ್ಣ.. ಇನ್ನು ಮುಂದೆ ನಮಗೆ ಪುಲ್ಕಿಯಲ್ಲೂ ಒಂದು ದೊಡ್ಡ ಕಾಡು ಬೇಕು.ನಾವು ಇನ್ನು ಮುಂದೆ ಅದಕ್ಕಾಗಿ ಅಭಿಯಾನ ಮಾಡುವ, ಹೋರಾಟ ಮಾಡುವ..ಬೇರೆ ಎಲ್ಲಾ ಲಾಟ್ಪೋಟ್ ಪ್ರತಿಭಟನೆಗಳು ಸಾಕು.ಇನ್ನು ಮುಂದೆ ವರ್ಷ ವರ್ಷವೂ ವನಮಹೋತ್ಸವವನ್ನು ದೊಡ್ಡ ಮಟ್ಟದಲ್ಲಿ ಮಾಡುವ..." ಎಂದು ಹೇಳಿದ ಪೊಲ್ಲ.


ಅವನು ಇದನ್ನು 'ಕಾಡು ಬೆಳೆಸಿ-ನಾಡು ಉಳಿಸಿ' ಎಂಬುದಕ್ಕಾಗಿ  ಹೇಳುತ್ತಿಲ್ಲ,ಬದಲಿಗೆ ಪುಲ್ಕಿಯಲ್ಲಿ ದೊಡ್ಡ ಕಾಡು ಆದರೆ ನಾವು ಸಹ ಅಲ್ಲಿ ಈ ಪಯ್ಯ ಕುಟ್ಟಿದಪಲ್ಕೆಯಲ್ಲಿ ಶಿಕಾರಿ ಮಾಡುವಂತೆಯೇ ಮಾಡಬಹುದು ಎಂಬ ದೂರದ ಆಲೋಚನೆಯಿಂದಲೇ ಹೇಳುತ್ತಿದ್ದಾನೆ ಎಂದು ನನಗೆ ಗೊತ್ತಾಗದೇ ಉಳಿಯಲಿಲ್ಲ. 



ಆ ನಂತರ ಪಯ್ಯ ನನ್ನನ್ನು ಪೊಲ್ಲನನ್ನು ಎರಡು ಬೇರೆ ಬೇರೆ ಮರಗಳಿಗೆ ಹತ್ತಿಸಿ ತಾನೂ ಒಂದು ದೊಡ್ದ ಮರ ಹತ್ತಿ ಕುಳಿತುಕೊಂಡ.ನಮ್ಮ ಶಾರ್ಪ್ ಶೂಟರನ ನಿಖರತೆಗಾಗಿ ನಾವಿಬ್ಬರೂ ಎದುರು ನೋಡುತ್ತಿದ್ದೆವು. 


ಕ್ಷಣಗಳು ಉರುಳಿದವು.ಮರದ ಮೇಲೆ ಕುಳಿತುಕೊಂಡೇ ಹಾಗೋ ಹೀಗೋ ಒಂದು ಗಂಟೆ ಕಳೆಯಿತು.ಕಾಡಿನ ಮೌನ ನಿಜಕ್ಕೂ ಕಂಡಾಪಟ್ಟೆ ಹೆದರಿಸುತ್ತದೆ. 


ಕಲಿಪುರುಷ ಈಗ ಎದುರಿದ್ದ ಮರದಲ್ಲಿ ಗಟ್ಟಿಯಾಗಿ ನಿದ್ದೆ ಹೊಡೆಯುತ್ತಿರಬಹುದಾ ಎಂಬ ಯೋಚನೆ ಬಂದು ನನಗೆ ಒಮ್ಮೆ ಹೆದರಿಕೆಯೂ ಆಯಿತು.ಪುಣ್ಯಕ್ಕೆ ಗೊರಕೆ ಸದ್ದು ಕೇಳಿ ಬರಲಿಲ್ಲ. 



ಆಗಲೇ ಕಾಡಿನ ಒಂದು ಮೂಲೆಯಲ್ಲಿ ಯಾವುದೋ ಪ್ರಾಣಿ ಸರಿದಾಡಿದ ಸದ್ದಾಯಿತು.


ಆ ಕೂಡಲೇ ನಮ್ಮ ಎದುರಿನ  ಮರದಿಂದ ಶಬ್ದ ಬಂದತ್ತ "ಡಮ್ಮ್... ಡಮ್ಮ್.." ಎಂದು ಗುಂಡು ಹಾರಿತು.ಒಂದಲ್ಲ ಎರಡು. ಜೊತೆಗೆ ಪ್ರಾಣಿಯೊಂದು ನೆಲಕ್ಕುರುಳಿದ ಜೋರಾದ ಸದ್ದು. ಬೆಳದಿಂಗಳ ಬೆಳಕಿನಲ್ಲಿ ಪಯ್ಯನ ಹೆಚ್ಚು ಕಡಿಮೆ ಶಬ್ದವೇಧಿಯಂತಹದ್ದೊಂದು ಅಮೋಘ ಕೈ ಚಳಕ. 


ಪಯ್ಯ ರಪರಪನೆ ಮರದಿಂದ ಇಳಿದ.


ಅದನ್ನು ನೋಡಿ ನಾವೂ ಸಹ ಕುಳಿತಿದ್ದ ಮರದಿಂದ ಇಳಿದೆವು.


ಕಲಿಪುರುಷ ಪಯ್ಯನ ಮುಖದಲ್ಲಿ ಗೆಲುವಿನ ಬಾವುಟವೊಂದು  ಅದಾಗಲೇ ಹಾರುತ್ತಿತ್ತು.


" ಹೇಗೆ ಈಗ ಎರಡು ಕುರಿಗಳಾದರೂ ಬಿದ್ದಿರಬಹುದು ಅಲ್ಲವೇ ಪಯ್ಯ ಬಾವ.." ಎಂದು ಪೊಲ್ಲ ಉತ್ಸಾಹದಿಂದಲೇ ಕೇಳಿದ. 


" ಬನ್ನಿ.. ನಿಮಗೇ ಗೊತ್ತಾಗುತ್ತದೆ ಈಗ ನನ್ನ ಅಸಲಿ ತಾಕತ್ತು.." ಎಂದು ಎದೆಯುಬ್ಬಿಸಿಕೊಂಡು ಭುಜದ ಮೇಲೆ ಕೋವಿ ಇಟ್ಟುಕೊಂಡು ಪಯ್ಯ ಶಿಕಾರಿ ಬಿದ್ದಂತಹ ದಿಕ್ಕಿನತ್ತ ನಡೆಯುತ್ತಾ ಹೋದ.ನಾವೂ  ಅವನ ಹಿಂದೆಯೇ ನಡೆದೆವು. 



ಕೊನೆಗೂ ಬೇಟೆ ಬಿದ್ದಂತಹ ಒಂದು ಸೀಗೆ ಬಲ್ಲೆಯ ಬಳಿಗೆ ಬಂದೆವು. ಅಲ್ಲಿ ಅವನ ಮನೆಯ ಹೆಸರಾಂತ ಬೇಟೆ ನಾಯಿ ಕೂರ,ಗುಂಡು ತಾಗಿ ರಕ್ತಕಾರಿಕೊಂಡು ಸತ್ತು ಬಿದ್ದಿದ್ದ! 


ಅದನ್ನು ನೋಡಿ ಪಯ್ಯನಿಗೆ ದಿಕ್ಕೇ ತೋಚದಂತಾಯಿತು! 


"ಅಯ್ಯೋ..ಇದೇನಾಯಿತು,ಇವತ್ತು ನನ್ನ ಅಪ್ಪ ನನ್ನನ್ನು ಖಂಡಿತಾ ಸಾಯಿಸಿಯೇ ಬಿಡ್ತಾರೆ.ಸ್ವಂತ ಬೇಟೆ ನಾಯಿಯನ್ನೇ ಕೊಂದರೆ ಅದಕ್ಕಿಂತ ದೊಡ್ಡ ದರಿದ್ರ ಮತ್ತೊಂದಿಲ್ಲ ಹಾಗೂ ಅವನಿಗಿಂತ ಕೆಟ್ಟ ಬೇಟೆಗಾರ ಮತ್ತೊಬ್ಬನಿಲ್ಲ.ಊರಿನಲ್ಲಿ ನನ್ನ ಹೆಸರು ಹಾಳಾಯಿತು.ಯಾವತ್ತೂ ಹೀಗೆ ಆಗಿರಲಿಲ್ಲ... ನಾನು ಆ ಪುಳಿಕಲಿ ಕುಡಿಯಬಾರದಿತ್ತು.. " ಎಂದು ಗೋಳೋ ಎಂದು ಅತ್ತ ನಮ್ಮ ಧೀರ ವೀರ ಕಲಿಪುರುಷ. 


ಅವನ ಹೆಸರು ಈ ಮೊದಲು ಕಲಿಪುರುಷನೆಂದು ಹಾಳಾಗಿರುವುದೇ ಅವನ ಗಮನಕ್ಕೆನೇ ಬಂದಿರಲಿಲ್ಲ.ಆದರೆ ಅವನಿಗೆ ಇನ್ನು ಮುಂದೆ ಹಾಳಾಗಿ ಹೋಗಬಹುದು ಎಂಬ ಚಿಂತೆ ಅವನಿಗೆ.


ಅದರಲ್ಲೂ ಕೂರ ಊರಿನ ಬಹಳ ಒಳ್ಳೆಯ ಬೇಟೆಗಾರ ನಾಯಿ ಮತ್ತು ಅವನ ಅಪ್ಪನ ಪ್ರಿಯ ನಾಯಿಯೂ ಹೌದು..ಅದನ್ನೇ ಇವನೀಗ ಕೊಂದು ಹಾಕಿದ್ದಾನೆ ಅಂದರೆ ಕೆಲವು ಕ್ಷಣಗಳ ನಂತರ ಇವನ ಪರಿಸ್ಥಿತಿ ಮನೆಯಲ್ಲಿ ಹೇಗಿರಬಹುದು ಎಂದು ಯೋಚಿಸಿ  ಒಳಗೊಳಗೆಯೇ ನನಗೆ ನಗು ಬಂತು.


ಆದರೆ ಅದನ್ನು ತೋರಿಸಿಕೊಳ್ಳದೆ ಈ ಕಲಿಪುರುಷನ ಅಭಿಮಾನಿ ಸಂಘದ ಅಧ್ಯಕ್ಷ ಪೊಲ್ಲನ ಕಡೆಗೊಮ್ಮೆ ಮೆಲ್ಲನೆ ನೋಡಿದೆ. 


ಅವನಂತು ಅಕ್ಷರಶಃ ಪಯ್ಯನನ್ನು  ಹೆದರಿಸಿಯೇ ಬಿಟ್ಟಿದ್ದ.. 


" ಪಯ್ಯ ಭಾವ.. ಈಗ ಏನು ಮಾಡುತ್ತೀಯಾ.ಕೂರನನ್ನು ಕೊಂದದ್ದು ಗೊತ್ತಾದರೆ ನಿನಗೆಯೇ ಮನೆಯಲ್ಲಿಂದು ತಿಥಿ ಆಗುವ ಸಂಭವ ಇದೆ ಇಂದು.ನಿನ್ನ ಅಪ್ಪ ಬೇರೆ ಸಿಕ್ಕಾಪಟ್ಟೆ ಕೋಪಿಷ್ಟ.. ಅವರಿಗೆ ಹೈ ಬಿ.ಪಿ ಬೇರೆ ಉಂಟು..ನೀನು ಇವತ್ತು ಸತ್ತೆ.." ಎಂದು ಉರಿಯುವ ನೋವಿನ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದ ಪೊಲ್ಲ. 


ನನಗೆ ಪೊಲ್ಲನ ಆ ಮಾತು ಕೇಳಿ ಇನ್ನೂ ಜೋರಾಗಿ ನಗು ಬಂತು. ಆದರೂ ನಗದೇ ಪಯ್ಯನಿಗೆ ಸಮಾಧಾನ ಮಾಡಿ.ಅವನ ಬಳಿಯಿದ್ದ ಗೋಣಿಯಲ್ಲಿ ಕೂರನ ದೇಹವನ್ನು ಹಾಕಿಕೊಂಡು ನಾನು ಮತ್ತು ಪೊಲ್ಲ ಮತ್ತೆ ಹಿಂದಕ್ಕೆ ಮನೆಯ ಕಡೆಗೆಯೇ ನಡೆದವು.ಪಯ್ಯ ಕೋವಿ ಹಿಡಿದುಕೊಂಡು ಭಯದಿಂದಲೇ ನಡುಗುತ್ತಾ ಬರುತ್ತಿದ್ದ. 



ಮನೆಯಲ್ಲಿ ಬಹುಶಃ ಅದಾಗಲೇ ಮಸಾಲೆ ಕಡೆದು,ಪೂಜಿರೊಟ್ಟಿ ಸಹ ಮಾಡಿ ದೊಡ್ಡ ಅಟ್ಟಿಯೇ ಹಾಕ್ಕಿದ್ದರು ಎಂದು ಕಾಣುತ್ತದೆ. ನಾವು ಅಂಗಳಕ್ಕೆ ಬರುತ್ತಿದ್ದಂತೆ ಮನೆಯ ಒಳಗಿನಿಂದ ಎಲ್ಲರೂ ಬಂದು.. ಎಂತ ಕುರಿಯಾ... ಹಂದಿಯಾ... ಎಂದು  ಒಕ್ಕೊರಲಿನಿಂದ ಕೇಳಲು ಶುರು ಮಾಡಿದರು.


ರುಕ್ಕು ಅಂತು ಈಗಲೇ ಪದಾರ್ಥ ಮಾಡಿ ಬಿಡುವ ಎಂಬ ಅವಸರದಲ್ಲಿ.. " ಮಸಾಲೆ ಕಡೆದು ಆಗಿದೆ.ಪೂಜಿರೊಟ್ಟಿಯೂ ಮಾಡಿಯಾಗಿದೆ,ಏನು ಹೊಡೆದು ತಂ.. ದಿ.. ದ್ದೀ.. ರಾ.." ಎಂದು ರಾಗವಾಗಿ ಹೇಳುತ್ತಾ ನಮ್ಮತ್ತಾ ಬಂದಳು


ನಾನು ಮತ್ತು ಪೊಲ್ಲ ಕೂರನ ಡೆಡ್ ಬಾಡಿಯನ್ನು ಅಂಗಳದಲ್ಲಿ ಮಲಗಿಸಿದೆವು.ಮನೆಯವರಿಗೆ ಇವನೇ ನಾಯಿ ಕೊಂದದ್ದು,ಇವನು ಕಲಿ ಕುಡಿದು ಬೇಟೆಯಾಡುತ್ತಾನೆ ಎಂಬ ಸತ್ಯ ಸಂಗತಿಯನ್ನು ನಾನೇ ಪ್ರಾಮಾಣಿಕವಾಗಿ ಎಲ್ಲರಿಗೂ ತಿಳಿಸಿದೆ.


ಆ ಕೂಡಲೇ ಶಂಖ ಜಾಗಟೆ ಯಾವುದರ ಅಗತ್ಯವೂ ಇಲ್ಲದೆ ಪಯ್ಯನ ಅಪ್ಪ ರಾಘಣ್ಣನ ಮಂಗಳಾರತಿ ಆ ಅಂಗಳದಲ್ಲಿ ಜೋರು ಅಬ್ಬರದಲ್ಲಿಯೇ ಶುರುವಾಗಿ ಬಿಟ್ಟಿತ್ತು. 


" ನಾಯಿ... ಅಷ್ಟು ಒಳ್ಳೆಯ ಬೇಟೆ ನಾಯಿಯನ್ನೇ ಕೊಂದು ಹಾಕಿ ಬಿಟ್ಟೆಯಲ್ಲೋ..ಊರಿನಲ್ಲಿ ನಮ್ಮನೆಯ,ನಮ್ಮ ವಂಶದ ಮಾರ್ಯಾದೆಯನ್ನೇ ತೆಗೆದು ಬಿಟ್ಟೆ ನೀನು.ಬೇಟೆನಾಯಿಯನ್ನೇ ಯಾರಾದರೂ ಬೇಟೆಯಾಡುತ್ತಾರಾ...?! ಎಷ್ಟು ಸಲ ನಿನಗೆ ಹೇಳಿದೆ.. ಅಮಲಿನಲ್ಲಿ ಕುಡಿದು ಶಿಕಾರಿಗೆ ಹೋಗಬೇಡ ಎಂದು..ಮನೆ ಮಗನಂತಿದ್ದ ಕೂರನನ್ನೇ ಕೊಂದುಹಾಕಿ ಬಿಟ್ಟೆಯಲ್ಲೋ ಪಾಪಿ.. ಇನ್ನು ಮುಂದೆ ಈ ಮನೆಯಲ್ಲಿ ಶಿಕಾರಿಯೂ ಬೇಡ ಏನೂ ಬೇಡ....!! "ಅವರ ಬೈಗುಳಗಳು ಮುಗಿಯುವ ಯಾವ ಲಕ್ಷಣಗಳು ಕೂಡ ನನಗೆ ಕಾಣುತ್ತಿರಲಿಲ್ಲ. 


ಅವರ ಒಂದು ರೌಂಡಿನ ಮಂಗಳಾರತಿ ಮುಗಿದ ಕೂಡಲೇ ಪಯ್ಯನ ಅಣ್ಣ ವಿಠ್ಠಲನ ಮಹಾಪೂಜೆ ಶುರುವಾಯಿತು.ಆ ನಂತರ ಮನೆಯವರೆಲ್ಲರೂ ಸಾಲಾಗಿ ಒಬ್ಬೊಬ್ಬರಾಗಿ ಬಂದು ಮನೆಮಗನಂತಿದ್ದ ನಾಯಿಯನ್ನು ಕೊಂದಿದ್ದಕ್ಕೆ ಚೆನ್ನಾಗಿ ಉಗಿದು ಪಯ್ಯನಿಗೆ ಉಪ್ಪಿನಕಾಯಿ ಹಾಕುತ್ತಲೇ ಇದ್ದರು.


ರುಕ್ಕು ಸ್ವಗತದಲ್ಲಿ ಹೇಳಿದ " ಕಡೆದಿಟ್ಟ ಮಸಾಲೆ ಎಲ್ಲಾ ವೇಸ್ಟ್ ಆಯಿತಲ್ಲಾ ಈಗ,ಎಂತ ಸಾವ..." ಎನ್ನುವುದು ನನ್ನ ಕಿವಿಗಳಿಗೆ ಸ್ಪಷ್ಟವಾಗಿಯೇ ಕೇಳಿಸಿತು.ಅಂಗಳದಲ್ಲಿ ನಡೆಯುತ್ತಿದ್ದ ಪರಿಸ್ಥಿತಿ ನೋಡಿ,ಪಯ್ಯನಿಗೆ ಕೊನೆಯಲ್ಲಿ ಅವನ ಅಣ್ಣ ವಿಠ್ಠಲನಿಂದ  ಪಂಚ್ ಕಜ್ಜಾಯ ಸೇವೆ ಕೂಡ ಆದರೂ ಆಗಬಹುದು ಎಂದು   ನನಗೆ ಬಲವಾಗಿ ಅನಿಸಿತು. 


ಕಲಿಪುರುಷ ಪಯ್ಯ ತೀವ್ರವಾದ ಅವಮಾನದಿಂದ ತತ್ತರಿಸಿ ತಲೆ ತಗ್ಗಿಸಿಕೊಂಡು ಅಂಗಳದಲ್ಲಿಯೇ ನಿಂತಿದ್ದ.


ನನಗೆ ಮಾತ್ರ ಅವನ ಮನೆಯ ತೋಟದಲ್ಲಿ ಹಂದಿಗಳು ರಾಶಿ ರಾಶಿ ಗೆಣಸನ್ನು ಅಗೆಯುವ,ನವಿಲುಗಳು ಕಟ್ಟು ಕಟ್ಟು ಅಲಸಂಡೆಗಳನ್ನು ಹೊತ್ತುಕೊಂಡು ಓಡುವ,ಮೊಲಗಳು ಅವರ ತೋಟದಲ್ಲಿರದ ಕಾಲ್ಪನಿಕ ಕ್ಯಾರೆಟ್ ಗಳನ್ನು ತಮ್ಮ ದವಡೆಗೆ ಹಾಕಿಕೊಂಡು ನಗು ನಗುತ್ತಾ ಮೆಲ್ಲುವ ದೃಶ್ಯಗಳೇ ಒಮ್ಮೆ ಕಣ್ಣ ಮುಂದೆ ಹಾಗೇ ಪಾಸಾಗಿ ಬಿಟ್ಟಿತು. 


ಮನೆಯ ಎಲ್ಲರೂ ಅವನನ್ನು ಬೈಯುತ್ತಿದ್ದರೂ ಕಲಿಪುರುಷ ಅಭಿಮಾನಿ ಸಂಘದ ಅಧ್ಯಕ್ಷ ಹಾಗೂ ಅದರ ಏಕೈಕ ಸದಸ್ಯನಾದ ಈ ಪೊಲ್ಲ ಮಾತ್ರ ಪಯ್ಯನಿಗೆ ಅಂಗಳದಲ್ಲಿಯೇ  ಕುಳಿತುಕೊಂಡು ಸಿಕ್ಕಾಪಟ್ಟೆ ಸಮಾಧಾನ ಮಾಡುತ್ತಿದ್ದ.


ಆದರೆ ಅವನ ಆ ಸಮಾಧಾನದ  ಮಾತುಗಳಲ್ಲಿ ನೊಂದವನು ಇನ್ನಷ್ಟು ಭಯ ಪಡುವ ಅಂಶಗಳೇ ಅಧಿಕವಾಗಿದ್ದವೇ ಹೊರತು ಸಮಧಾನವಾಗುವಂತಹದ್ದು ಏನೂ ಇರಲಿಲ್ಲ.ದೇವರೇ ಇವನಿನ್ನು ನೊಂದು ಬೆಂದು ಎಲ್ಲಾದರೂ ಹೋಗಿ ಆತ್ಮಹತ್ಯೆ ಮಾಡಿಕೊಳ್ಳದಿರಲಿ ಎಂದು ನಾನು ದೇವರಲ್ಲಿ ಸ್ಟ್ರಾಂಗ್ ಆಗಿಯೇ ಪ್ರಾರ್ಥಿಸಿದೆ.




.....................................................................................



#ನೀಲಮೇಘ


ab pacchu

(photo-internet)

https://phalgunikadeyavanu.blogspot.com

Comments

Popular posts from this blog

VIKINGS - S06E20

ಗಗನದ ಸೂರ್ಯ