Sita Ramam

 #Sita_Ramam |  [         ] 




ಒಂದೊಳ್ಳೆಯ ಕಾಫಿ ಕುಡಿದರೆ ಹೇಗೆ ಅದರ ಸ್ವಾದ ಕೆಲವೊಂದಿಷ್ಟು ಹೊತ್ತು ಬಾಯಿ ತುಂಬಾ ಹರಡಿಕೊಂಡಿರುತ್ತದೋ,ಅದೇ ರೀತಿ ಉಳಿದು ಬಿಡುವಂತಹದ್ದು ಈ ಕತೆಯ ವಿಷಾದ. 


ಇದರಲ್ಲೊಂದು ಬಹಳ ಅಪೂರ್ವವಾದ ಪ್ರೇಮವಿದೆ;ಎಷ್ಟು ಸುಂದರವೋ ಇದು ಅಷ್ಟೇ ಪರಿಶುದ್ಧವೂ ಹೌದು.ಎಲ್ಲೂ ಸಂಯಮ,ಸೌಜನ್ಯತೆಗಳ ಗಡಿಯನ್ನು ಮೀರುವ ಸಾಹಸ ಇಲ್ಲಿಯ ಎರಡೂ ಪಾತ್ರಗಳು ಮಾಡುವುದೇ ಇಲ್ಲ.ಹಾಗಾಗಿಯೇ ಇದರ ಕತೆ ಹಾಗೇ ದಿವ್ಯವೆನಿಸಿಬಿಡುತ್ತದೆ.


ಗಡಿ ಕಾಯುವ ಮಡ್ರಾಸ್ ರೆಜಿಮೆಂಟಿನ ಯೋಧ ರಾಮ್ ತನಗಾಗಿ ಯಾರು ಇಲ್ಲದೆ ಇದ್ದಾಗಲೇ ಬಹಳ ಸುಖವಾಗಿದ್ದ;ಜೊತೆಗೆ ಅವನ ಕತೆಗೆ ತೆರೆದುಕೊಳ್ಳುವ ನಮಗೆ ಕೂಡ ಕತೆಯ ಆರಂಭದಲ್ಲಿ ತುಂಬಾನೇ ನೆಮ್ಮದಿಯಿಂದಿದ್ದೆವು ಎಂದು ಕತೆ ಮುಂದೆ ಮುಂದೆ ಹೋದಂತೆ ಅನ್ನಿಸದೇ ಇರದು.ಈ ಕತೆಯ ನಾಯಕಿ ಸೀತಾ ಮಹಾಲಕ್ಷ್ಮಿ.ಅವಳ ಮೌನ ಅದೆಷ್ಟು ಗಾಢವೋ ಅವಳ ದುಃಖವೂ ಅಷ್ಟೇ ಪ್ರಖರವಾದದ್ದು ಹಾಗೂ ತೀಕ್ಷ್ಣವಾಗಿಯೇ  ಸುಡುವಂತಹದ್ದು.ಕೊನೆಯಲ್ಲಿ ಮಾತ್ರ ನೋಡು ನೋಡುತ್ತಿದ್ದಂತೆಯೇ ನೋಡುಗನ ಎದೆಯಲ್ಲೊಂದು ಬೆಂಕಿ ಹೊತ್ತಿಕೊಂಡು ಹಾಗೇ ಧಗಧಗ ಎಂದು ಉರಿದು ಬಿಡುವಂತಹ ಸಂಕಟ.


ಮೃಣಾಲ್ ಠಾಕೂರ್ ಮತ್ತು ದುಲ್ಕರ್ ಸಲ್ಮಾನ್ ಈ ಇಬ್ಬರ ಜೋಡಿಯದ್ದು ಎಂತಹ ಅಭಿನಯ ಎಂದರೆ ಇವರ ಬದಲಿಗೆ ಬೇರೆ ಯಾರನ್ನೂ ಆ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಾಗದು.ಈ ಎರಡೂ ಪಾತ್ರಗಳಿಗಾಗಿಯೇ ಇವರಿಬ್ಬರು ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡಿದ್ದೋ ಎಂದು ಅನ್ನಿಸುವಷ್ಟು ಇವರಿಬ್ಬರು ಇಲ್ಲಿ ಇಷ್ಟವಾಗಿ ಬಿಡುತ್ತಾರೆ.ಅವನು ದುಲ್ಕರ್ ಇವಳು ಮೃಣಾಲ್ ಎನ್ನುವುದು ಕೂಡ ಮರೆತು ಹೋಗಿ ಅವರಿಬ್ಬರು ಕೇವಲ  ಲೆಫ್ಟಿನೆಂಟ್ ರಾಮ್ ಹಾಗೂ ಸೀತಾ ಮಹಾಲಕ್ಷ್ಮಿಯಾಗಿ ಆವರಿಸಿಕೊಳ್ಳುವ ಪರಿಯೇ ಚಂದ. 



ಸೀತಾ ಮಹಾಲಕ್ಷ್ಮಿಯಾಗಿ ಅಭಿನಯಿಸಿದ ಮೃಣಾಲ್ ಸೀರೆಯಲ್ಲಿ ಮುದ್ದಾಗಿ ಮಾತ್ರವಲ್ಲ ಲಕ್ಷಣವಾಗಿ ಹೆಚ್ಚು ಕಡಿಮೆ ದೇವತೆಯಂತೆಯೇ ಕಾಣುತ್ತಾಳೆ.ಅವಳು ಬಹಳಷ್ಟು ಸಲ ನಗುವುದೇ ಇಲ್ಲ.ಅವಳದ್ದು ಕತೆಯಲ್ಲಿ ತುಂಬಾನೇ ದುಬಾರಿಯಾದ ನಗು.ಆದರೆ ಯಾವಾಗಲಾದರೊಮ್ಮೆ ಸೀರೆಯ ನೆರಿಗೆಗಳನ್ನು ಚಿಮ್ಮಿಸುತ್ತಾ ನಡೆಯುತ್ತಾ ಹುಬ್ಬು ಹಾರಿಸಿ ಕಣ್ಣಂಚು ಹರಿತಗೊಳಿಸಿಯೇ ಬಾಯಿ ತುಂಬಾ ಖುಷಿಯ ನಗು ನಕ್ಕು ಬಿಟ್ಟರೆ,ತೆರೆಯಲ್ಲಿ ಅಲ್ಲಲ್ಲಿ ಬೆಳದಿಂಗಳೇ ಚೆಲ್ಲಿದಂತಹ ಅನುಭವ.ರಾಮ್ ಪಾತ್ರಕ್ಕೊಂದು ಸಂಸ್ಕಾರವಿದೆ,ಉಲ್ಲಾಸವಿದೆ ಆದರೆ ಕೊನೆಯಲ್ಲಿ ಮಾತ್ರ ಅಣೆಕಟ್ಟು ಮುರಿದು ಹರಿವ ಆ ರಾಮನ ರಭಸ ಕಂಡಾಗ ಮನಸ್ಸು ಸಿಕ್ಕಾಪಟ್ಟೆ ಮೂಕವಾಗಿ ಬಿಡುತ್ತದೆ  ಮತ್ತು ನಾವೇ ಆ ಪ್ರವಾಹದಲ್ಲಿ ಎಲ್ಲೋ ಕೊಚ್ಚಿಕೊಂಡು ಹೋಗಿಬಿಡುತ್ತೇವೆ. 


ಸೀತಾ ಮಹಾಲಕ್ಷ್ಮಿ ನನಗಂತು ಇಲ್ಲಿ ಬಹಳಷ್ಟು ದಿಟ್ಟೆಯಾಗಿಯೇ ಕಂಡಳು.ಕೆಲವೊಮ್ಮೆ ಅವಳು ರಾಮ್ ನನ್ನು ಮೀರಿಸಿ ಕಥೆಯಲ್ಲಿ ಬೆಳೆದು ನಿಲ್ಲುತ್ತಾಳೆ.ಹೈದರಾಬಾದಿನ ರಾಣಿ ನೂರ್ ಜಹಾನ್ ಗಿಂತಲೂ ನೂರು ಪಟ್ಟು ಅಧಿಕ ಪ್ರಿಯವಾಗುವುದು ಇಲ್ಲಿ ರಾಮ್ ನ ಆ ಸೀತಾ ಮಹಾಲಕ್ಷ್ಮಿಯೇ.ಈ ಒಂದು ಪಾತ್ರದ ತೂಕ ಹಾಗೂ ಎತ್ತರವೇ ಇದರ ಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಿರುವುದು ಮತ್ತು ಈ ಚಿತ್ರವನ್ನು ಗೆಲ್ಲಿಸಿರುವುದು.ರಾಮ್ ಕೂಡ ಕೊನೆಯ ದೃಶ್ಯದಲ್ಲಿ ಹೃದಯ ಹಿಂಡದೆ ಇದರ ಕತೆ ಮುಗಿಸಲು ಮನಸ್ಸು ಮಾಡುವುದಿಲ್ಲ.ಅಲ್ಲಿಗೆ ಕತೆಯಲ್ಲಿ ಇಬ್ಬರೂ ಸಮಾನರು.ಆ ನಂತರ ಉಳಿಯುವ ಒಂದು ವೇದನೆ,ಆ ಮೌನ ರೋಧನೆ ಇದೆಯಲ್ಲ ಬಹುಶಃ ಅದು ಯಾವುದೇ ಯೋಧನ ಕತೆಯಲ್ಲಿ ಬರುವ ನಿಜ ಜೀವದ ಪಾತ್ರಗಳಿಗಷ್ಟೇ ಅನುಭವಿಸಿ ಗೊತ್ತಿರಲು ಸಾಧ್ಯ.ಅದರೊಂದಿಗೆ ಪ್ರೀತಿಯೂ ಸೇರಿ ಬಿಟ್ಟರೆ ಅಲ್ಲಿಂದ ಬದುಕು ಬಹಳಷ್ಟು ಕ್ರೂರಿ. 


ಇಲ್ಲಿ ಮೃಣಾಲ್ ಆಗಲಿ ದುಲ್ಕರ್ ಆಗಲಿ ಇಬ್ಬರೂ ಅಭಿನಯಿಸಿಲ್ಲ,ಪಾತ್ರದೊಳಗೆ ಹಾಗೇ ಜೀವಿಸಿದ್ದಾರೆ ಎಂದು ಅವರಿಬ್ಬರ ನಡುವಿನ ಕೆಮಿಸ್ಟ್ರಿಯೇ ಸಾರಿ ಹೇಳುತ್ತದೆ.ಕತೆಯ ಪ್ರಮುಖ ಪಾತ್ರಗಳಾದ ರಾಮ್ ಮತ್ತು ಸೀತಾ ಮಹಾಲಕ್ಷ್ಮಿ ಪಾತ್ರಗಳಿಗೆ ಆಯ್ಕೆಯಾದ ಈ ಎರಡೂ ನಟರು ನಿಜಕ್ಕೂ ಆಯಾಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ ಕೂಡ ಹೌದು.ಇನ್ನೊಮ್ಮೆ ಈ ಇಬ್ಬರು ಜೋಡಿಯ ಚಿತ್ರವನ್ನು ಅದರಲ್ಲೂ ಇಂತಹದ್ದೇ ಚಿತ್ರವನ್ನು ತೆರೆಯ ಮೇಲೆ ಕಾಣಲು ಪ್ರೇಕ್ಷಕ ಅಪಾರವಾಗಿ ಬಯಸುತ್ತಾನೆ ಎಂದಾದರೆ ಅದೆಂತಹ ಮೋಡಿ ಈ ಇಬ್ಬರ ಜೋಡಿ ಮಾಡಿರಬೇಡ ಹೇಳಿ. 


ಅರುವತ್ತರ ದಶಕದ ಈ ಕತೆಯಲ್ಲಿ ನಿರ್ದೇಶಕ ನಮ್ಮನ್ನು ಕೂಡ ಆ ಜಗತ್ತಿನಲ್ಲಿ ಎರಡು ಮುಕ್ಕಾಲು ಗಂಟೆ ವಿಹರಿಸುವಂತೆ ಮಾಡುತ್ತಾನೆ.ಹಿಂದೆ ಮುಂದೆ ಯಾರೂ ಇರದೆ  ಏಕಾಂಗಿಯಾಗಿದ್ದ ಲೆಫ್ಟಿನೆಂಟ್ ರಾಮ್ ಗೆ, ಸೀತಾ ಮಹಾಲಕ್ಷ್ಮಿ ಎಂಬ ಹೆಸರಿನಲ್ಲಿ ವಿಳಾಸವೇ ಇಲ್ಲದೆ ಬರಲು ಆರಂಭವಾಗುವ ರಾಶಿ ರಾಶಿ ಪ್ರೇಮ ಪತ್ರಗಳು ಕತೆಯ ದಿಕ್ಕನ್ನು  ಹಾಗೂ ರಾಮ್ ಬದುಕನ್ನೇ  ಬದಲಾಯಿಸುತ್ತದೆ.ಅದರ ಅರಿವು ಸ್ವತಃ ಸೀತಾ ಮಹಾಲಕ್ಷ್ಮಿಗೇ ಇರುವುದಿಲ್ಲ.ಮುಂದೆ ಏನೇನು ಆಗುತ್ತದೆ ಎನ್ನುವುದೇ ಇದರ ಒಟ್ಟಾರೆ ಕತೆ. ಅದನ್ನೆಲ್ಲಾ ನೋಡಿ ನೀವೇ ನೋಡಿ ಹೃದಯ ಭಾರ ಮಾಡಿಕೊಳ್ಳಬೇಕು.




ಹನು ರಾಘವಪುಡಿ ಈ ಮೂವಿಯನ್ನು  ನಿರ್ದೇಶನ ಮಾಡಿ ಸ್ವತಃ ಅವರೇ ಅಂದಾಜು ಮಾಡಲಾಗದಷ್ಟು ಅದಾಗಲೇ ಗೆದ್ದು ಬಿಟ್ಟಿದ್ದಾರೆ.ಇದು ನಿರ್ದೇಶಕನ ಕತೆ ಹಾಗಾಗಿ ಸಾಕಷ್ಟು ಅಭಿನಂದನೆಗೆ ಈ ನಿರ್ದೇಶಕ ಅರ್ಹರು.ಹೆಚ್ಚಿನ ಎಲ್ಲಾ ಪಾತ್ರಗಳು ಅಚ್ಚುಕಟ್ಟಾಗಿಯೇ ತಮ್ಮ ಪಾತ್ರವನ್ನು ನಿರ್ವಹಿಸಿವೆ.ನಾಯಕ ನಾಯಕಿಯರಷ್ಟೇ ಈ ಚಿತ್ರದಲ್ಲಿ ಮನಸೂರೆಗೊಳ್ಳುವುದು ಇದರದ್ದೊಂದು ಮಧುರವಾದ ಸಂಗೀತ ಎಂದರೆ ತಪ್ಪಾಗಲಾರದು.ವಿಶಾಲ್ ಚಂದ್ರಶೇಖರ್ ಅವರ ಸಂಗೀತ ಕಿವಿಗೆ ಅದೆಷ್ಟು ಇಂಪಾಗಿದೆ ಎಂದರೆ ಕೇವಲ ತೆಲುಗು ಮಾತ್ರವಲ್ಲ ಇದರ ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಬಂದಂತಹ ಹಾಡುಗಳು ಕೂಡ ಅಷ್ಟೇ ಇಷ್ಟವಾಗುತ್ತದೆ.ಇಲ್ಲಿ ಕಾಶ್ಮೀರ ಕಣಿವೆಯ ಅಂದವನ್ನು ಸಹ ಬಹಳ ಚೆನ್ನಾಗಿಯೇ ಸೆರೆ ಹಿಡಿಯಲಾಗಿದೆ ಜೊತೆಗೆ ಇದರ ಸಿನಿಮಾಟೋಗ್ರಫಿ ಮೂವಿಯ ಉದ್ದಕ್ಕೂ ಅದ್ಭುತವಾಗಿಯೇ ಮೂಡಿ ಬಂದಿದೆ.ಸಿನಿಮಾಗಳು ಚುಕು ಬುಕು ರೈಲಿನಂತೆ ವೇಗವಾಗಿಯೇ ಓಡಬೇಕು ಎಂದು ಬಯಸುವವರಗೆ ಈ ಚಿತ್ರ ಸ್ವಲ್ಪ ನಿರಾಸೆ ಮಾಡಬಹುದು ಅದು ಬಿಟ್ಟರೆ ಸಮಾಧಾನದಿಂದ ನೋಡುವವರಿಗೆ ಖಂಡಿತವಾಗಿಯೂ ಯಾವುದೇ ಮೋಸವಿಲ್ಲ. 


ಇಲ್ಲಿ ಭಾರತ - ಪಾಕಿಸ್ತಾನ ಸೈನ್ಯ,ಕಾಶ್ಮೀರದ ಮುಗಿಯದ  ಸಮಸ್ಯೆ,ಶಾಂತಿ ಕದಡುವ ಉಗ್ರಗಾಮಿಗಳು,ಎಲ್ಲಕ್ಕಿಂತ ಹೆಚ್ಚಾಗಿ ಈ ಕತೆಯಲ್ಲಿ ಹಿಂದು ಯುವಕ-ಮುಸ್ಲಿಂ ಯುವತಿಯ ಪ್ರೇಮ ಪ್ರಕರಣದಂತಹ ಸಂಗತಿಗಳು ಬಂದರೂ ಇದು ಬೇರೆ ಯಾವುದೇ ಅಪಸ್ವರದ ರಾಗ ಹೊರಡಿಸದೆ ಕೇವಲ ಪರಿಶುದ್ಧ ಪ್ರೇಮವನ್ನು ಅಷ್ಟೇ ನಮ್ಮ ಮುಂದೆ ತೆರೆದಿಡುತ್ತದೆ.ಪ್ರೇಮಕ್ಕೆ ಎಲ್ಲವನ್ನೂ ಗೆಲ್ಲುವ ಶಕ್ತಿ ಇದೆ ಎನ್ನುವುದು ಅದಕ್ಕೇ ಇರಬೇಕು,ಹಾಗಾಗಿ ಅದುವೇ ಇಲ್ಲಿ ಪ್ರಮುಖವಾಗಿ ಗೆದ್ದಿರುವುದು.ಇದರ ನವಿರಾದ ಕತೆ,ಸೊಗಸಾದ ನಿರೂಪಣೆ ಹಾಗೂ ಮೃಣಾಲ್ - ದುಲ್ಕರ್ ಅಭಿನಯಕ್ಕಾಗಿ ಬಹಳಷ್ಟು ದಿನಗಳ ಕಾಲ ಈ ಮೂವಿ ನೆನಪಿನಲ್ಲಿ ಉಳಿಯುವುದರಲ್ಲಿ ಸಂಶಯವೇ ಇಲ್ಲ.ಇತ್ತೀಚಿನ ದಿನಗಳಲ್ಲಿ ನೋಡಿದ ಅದರಲ್ಲೂ ಮನಸ್ಸಿಗೆ ಬಹಳಷ್ಟು ಹಿಡಿಸಿದ  ಅತೀ ಸುಂದರ,ಅತೀ ಅಪರೂಪದ ಚಿತ್ರವಿದೆಂದು ಹೇಳಲು ನಿಜಕ್ಕೂ ಯಾವುದೇ ಅಡ್ಡಿಯಿಲ್ಲ.ಇಷ್ಟವಾಯಿತು.




#Sita_Ramam | Prime 

Telugu Movie

Romantic Drama Film

Release - 05 Aug 2022

Rating - 5/5


Movies

Ab

Comments

Popular posts from this blog

ಗಗನದ ಸೂರ್ಯ

VIKINGS - S06E20

ಬಿಡುಗಡೆ!