ನಾವು ಶಾಲೆಗೆ ಹೋಗುವೆವು

 .


                     " ನಾವು ಶಾಲೆಗೆ ಹೋಗುವೆವು... "





     ಅಂಗನವಾಡಿ ಎಂದರೆ ಮೊದಲು ನೆನಪಾಗುವುದೇ ಸಜ್ಜಿಗೆ.ಅದಕ್ಕೆ ಬೇರೆ ಹೆಸರಿದ್ದರೂ,ಇಲ್ಲದಿದ್ದರೂ ಅಂಗನವಾಡಿ ಸಜ್ಜಿಗೆ ಎಂದೇ ಊರ ತುಂಬಾ ಅದರದ್ದೊಂದು ಖ್ಯಾತಿ,ವಿಖ್ಯಾತಿ.ಉಪ್ಪಿಟ್ಟಿನ ರವಾ ಇಲ್ಲದಿದ್ದರೂ ಅಂದಕಾಲತ್ತಿಲ್ ಮನೆ ಮನೆಯಲ್ಲಿ ಈ ಅಂಗನವಾಡಿ ಸಜ್ಜಿಗೆಯದ್ದೊಂದೇ ಒಟ್ರಾಶಿ ಹವಾ.


ಎರಡು,ಮೂರು ಮಕ್ಕಳಿದ್ದು ಬಿಟ್ಟರೆ ಮನೆಯಲ್ಲಿ ಈ ಅಂಗನವಾಡಿ ಸಜ್ಜಿಗೆ ಪ್ಯಾಕೇಟುಗಳು ಹಾಗೇ ಬಂದು ಅಟ್ಟಿ ಬೀಳುತ್ತಿದ್ದವು;ಈಗ ಕುಚಲಕ್ಕಿ ಪ್ರಿಯರ ಮನೆಯಲ್ಲಿ,ರೇಷನಿನ್ನ  ಬಿಳಿಕುಚಲಕ್ಕಿ ಗೋಣಿಗಳು ರಾಶಿ ಬೀಳುವಂತೆ.ಆ ಸಮಯದಲ್ಲಿ ಅಮ್ಮ ಈ ಸಜ್ಜಿಗೆ ಹಿಟ್ಟಿನಲ್ಲಿ ತನ್ನದೊಂದು ಪಾಕ ಪ್ರಾವೀಣ್ಯತೆಯನ್ನು ತೋರಿಸಲು ಒಂದಿಷ್ಟು ಮಂಡೆ ಓಡಿಸುತ್ತಿದ್ದಳು.ಅದರಿಂದ ಸಜ್ಜಿಗೆ ದೋಸೆಯಂತೆ,ಸಜ್ಜಿಗೆ ರೊಟ್ಟಿಯಂತೆ ಇನ್ನೂ ಏನೇನೋ ಪ್ರಯೋಗಗಳು ಅವಳದ್ದು.ಈಗಿನ ಪಾಕ ಪ್ರವೀಣೆಯರು ಹೊಸ ರುಚಿ,ನಳಿನಿ ಪಾಕ ಎಂದೆಲ್ಲಾ ಮಾಡುತ್ತಾರಲ್ಲಾ ಹಾಗೆಯೇ.ಆವಾಗ ಎಲ್ಲಾ ತಾಯಂದಿರಿಗೆ ಅಡುಗೆ ಮನೆಯಲ್ಲಿ ಪ್ರಯೋಗಕ್ಕೊಂದು ಅವಕಾಶ ಕಲ್ಪಿಸಿದ್ದೇ ಈ ಅಂಗನವಾಡಿ ಸಜ್ಜಿಗೆ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲವೆನೋ. 


ನಮ್ಮಲ್ಲಿನ ನೀರ್ದೋಸೆ, ಕಪರೊಟ್ಟಿ,ಕೊರ್ರೊಟ್ಟಿ ಎಲ್ಲಾ ತಿಂದುಂಡ ನಾಲಿಗೆಗೆ ಈ ಸಜ್ಜಿಗೆಯ ದೋಸೆ,ರೊಟ್ಟಿಗಳು ಹೇಗೆ ಪ್ರಿಯವಾಗಬೇಕು ಹೇಳಿ.ಶೀರಾದ ಸಹವರ್ತಿ ಈ ಉಪ್ಪಿಟ್ಟೆಂಬ ಸಜ್ಜಿಗೆಯಾದರೂ ಒಂದು ರೇಂಜಿಗೆ ಓಕೆ ಎನ್ನಬಹುದು.ಏನೂ ಇರದಿದ್ದಾಗ ಸೌಟಿನಲ್ಲಿ ಬಾಣಲೆ ಕೆರೆದು ಕೆರೆದು ತಳದಲ್ಲಿ ಒಂಚೂರೇ ಕರಟಿ ಹೋಗಿ ಕೆಂಪಗಾಗಿರುವ ಆ ಸಜ್ಜಿಗೆ ತಿನ್ನಲು ಒಂಥರಾ ಚೆನ್ನಾಗಿಯೇ ಇರುತ್ತಿತ್ತು.ಮನೆಯಲ್ಲಿ ಈಗಲೂ  ನಾನಂತು ಬಾಣಲೆ ತಳದ ಉಪ್ಪಿಟ್ಟಿಗೆ,ಕಲ್ತಪ್ಪದ ಆ ಬೇವುರೆ-ಈರುಳ್ಳಿ ಒಗ್ಗರಣೆಯ ಕ್ರಸ್ಟಿಗೆ ಮೋಕ್ಷ ಕರುಣಿಸುವವನು ಎಂಬ ಅಭಿಧಾನಕ್ಕೆ ಸದಾ ಪಾತ್ರನಾಗಿದ್ದೇನೆ,ಅದೊಂದೇ ಅಲ್ಲ ಮನೆಯಲ್ಲಿ ಯಾವುದೇ ಪಾತ್ರೆ,ಚೊಂಬು,ಬಕೇಟು,ಟ್ಯಾಪುಗಳು ಒಡೆದು ಹೋದರೂ ಅದರಲ್ಲಿ ನನ್ನ ಕೈವಾಡವೇ ಇಲ್ಲದಿದ್ದರೂ ಅಂತಹ ಘನಂದಾರಿ ಕೆಲಸ ಮಾಡಿದವನು ನಾನೇ ಎಂದು ಮನೆಯವರೆಲ್ಲರೂ ಎದೆ ತಟ್ಟಿಕೊಂಡು ಹೇಳುವಷ್ಟು ವಿಶ್ವಾಸವನ್ನು ನಾನು ಈಗಲೂ ಉಳಿಸಿಕೊಂಡಿದ್ದೇನೆ ಎಂದು ಹೇಳಲು ನನಗೆ ಬಹಳ ಹೆಮ್ಮೆ ಆಗುತ್ತದೆ. 


ಈ ಅಂಗನವಾಡಿ ಸಜ್ಜಿಗೆಯಿಂದ ದೋಸೆ,ರೊಟ್ಟಿಗಳು ಬೇಡ ಎಂದು ಅಮ್ಮನಿಗೆ ದೂರು ಸಲ್ಲಿಸುತ್ತಿದ್ದ ನಮಗೆ ಇದಕ್ಕೊಂದು ಪರ್ಯಾಯ ಉಪಾಯ ಕೂಡ ನಮ್ಮ ಬಳಿಯೇ ಇತ್ತು ಹಾಗಾಗಿ ಅಂಗನವಾಡಿ ಸಜ್ಜಿಗೆ ನಮ್ಮಿಂದ ದೂರ ಇನ್ನು ದೂರ ಆಗುವ  ಮಾತೇ ಇರಲಿಲ್ಲ.ಸಜ್ಜಿಗೆಗೆ ನಿಧಾನಕ್ಕೆ ನೀರು ಬೆರೆಸುತ್ತಾ ಒಂದೊಂದೇ ಪುಟ್ಟ ಪುಟ್ಟ ಉಂಡೆಗಳನ್ನಾಗಿ ಕಟ್ಟಿ,ಲಡ್ಡು ಶೇಪಿಗೆ ತಂದರೆ ಅದೇ ನಮ್ಮೆಲ್ಲರ ಬಾಲ್ಯದ ರವೆ ಲಾಡು ಆಗಿ ಕಣ್ಣು ಕುಕ್ಕುತ್ತಿತ್ತು.ಮನೆಯಲ್ಲಿ ಆದರೆ ಅದಕ್ಕೊಂದಿಷ್ಟು ತೆಂಗಿನ ಹೂ ಸೇರಿಸಿಕೊಂಡು ಸಕ್ಕರೆ ಹರಳಲ್ಲಿ ಹೊರಳಾಡಿಸಿ ಬಿಟ್ಟರೆ ಆಗ ಅದಕ್ಕೊಂದು ಬೇರೆಯೇ ರುಚಿ.ಒಟ್ಟಿನಲ್ಲಿ ಅಂಗನವಾಡಿ ಸಜ್ಜಿಗೆ ಯಾವುದೋ ಒಂದು ರೂಪದಲ್ಲಿ ನಮ್ಮಲ್ಲೆರನ್ನು ಪೊರೆದದ್ದಂತು ಸತ್ಯವೇ;ರವೆಯ ಪುಡಿಯಾಗಿಯೋ,ರುಚಿಯ ಲಡ್ಡಾಗಿಯೋ... 


ಇಂದು ಮತ್ತೆ ನಮ್ಮೂರಿನ ಅಂಗನವಾಡಿಗೆ ಹೋಗಲಿಕ್ಕೆ ಇತ್ತು.ಗುಡ್ಡದ ಇಳಿಜಾರಿನ ಸೊಂಟದಲ್ಲಿರುವ ಅದರ ಅಂಗಳಕ್ಕೆ ಹೋಗಲು ಒಂದಿಷ್ಟು ಮೆಟ್ಟಿಲುಗಳನ್ನು ನಿಧಾನಕ್ಕೆ ಹತ್ತಬೇಕು.ಹಾಗೇ ಹತ್ತುವಾಗ ನಾನು ಮೆಲ್ಲ ಮೆಲ್ಲಗೆ ನನ್ನ ಚಿನ್ನದಂತಹ ಬಾಲ್ಯಕ್ಕೆ ಇಳಿಯುತ್ತಿದ್ದೆ ಮತ್ತು ಅಂಗನವಾಡಿ ಸಜ್ಜಿಗೆಯ ಆ ಹಮಾರ ಅಮರ ಮಧುರ ಘಮವನ್ನೊಮ್ಮೆ,ಹಾಗೇ ನೆನಪುಮಾಡಿಕೊಳ್ಳುತ್ತಾ ದೀರ್ಘವಾಗಿ ಒಳಗೆಳೆದುಕೊಂಡು ಬಿಟ್ಟಿದ್ದೆ. 


ಅಂಗನವಾಡಿಯ ಆ ಮೆಟ್ಟಿಲುಗಳ ಪಕ್ಕದಲ್ಲಿ ಹಿಂದೆ ಅಲ್ಲೊಂದು ಪೇರಳೆ ಮರವಿತ್ತು.ನಾವೆಲ್ಲಾ ಅಲ್ಲಿ ಸುಳಿದಾಡುತ್ತಿದ್ದಾಗ(ಶಾಲೆಗೆ ಹೋಗುವಾಗ)ಮಂಗಗಳಿಗೆ ಕೂಡ ಅದರಿಂದ ಒಂದೂ ಹಣ್ಣು ಕೀಳಲು ಸಾಧ್ಯವಾಗುತ್ತಿರಲಿಲ್ಲ,ಅಳಿಲು ಗಿಳಿಗಳಿಗೂ ಕೂಡ ನಮ್ಮಿಂದ ನಿರಾಶೆ ಆಗಿದ್ದೇ ಹೆಚ್ಚು.ಆಗ ನಮಗೆಲ್ಲಾ ಕರೆದು ಕರೆದು ಹಣ್ಣುಗಳನ್ನು ನೀಡಿಯೂ ಆ ಮರ ಬಹಳಷ್ಟು ಸುಖಿಯಾಗಿತ್ತು.ಆ ಮರ ಈಗಲೂ ಇದೆ.ಹಣ್ಣುಗಳು ಅಂತು ಮರದ ತುಂಬೆಲ್ಲಾ ಜೊಂಪೆ ಜೊಂಪೆಯೇ,ಆದರೆ ಅದನ್ನು ಕೊಯ್ದು ತಿನ್ನುವವರಿಲ್ಲದೇ ನನಗೇಕೋ ಆ ಮರ ಇತ್ತೀಚೆಗೆ ತೀರಾ ಬಡವಾದಂತೆ ಕಂಡಿತು.


ಅಂಗನವಾಡಿಯ ಒಳಗೆ ಹೋದರೆ ಗೋಡೆಯ ತುಂಬಾ ಬಣ್ಣ ಬಣ್ಣದ ಅಕ್ಷರಗಳು,ಚಂಪಕವನದ್ದೋ ಸುಂದರವನದ್ದೋ ಪ್ರಾಣಿ ಪಕ್ಷಿಗಳು,ನಗುವ ಹೆಬ್ಬಾವು,ಕ್ಯಾರೆಟ್ ಜಗಿಯುವ ಎರಡು ಹಲ್ಲಿನ ಮೊಲ,ಕಾಡಿನ ರಾಜನ ತಲೆಗೊಂದು ಹೊಳೆಯುವ ಕಿರೀಟ, ದ್ರಾಕ್ಷಿಗಾಗಿ ಹಾರುವ ಜಾಣ ನರಿ... ಹೀಗೆ ಎಲ್ಲಾ ಬಗೆಯ ಮಕ್ಕಳ ಪುಳಕದ ಚಿತ್ರಗಳು ಅಲ್ಲಿದ್ದವು.ಒಂದಿಷ್ಟು ಪುಟ್ಟ ಮಕ್ಕಳೂ ಇದ್ದರು.ಸ್ಲೇಟಿನಲ್ಲಿ ತಮಗೆ ಟೀಚರ್ ಹೇಳಿ ಕೊಟ್ಟಿದ್ದನ್ನು ಶ್ರದ್ಧೆಯಿಂದ ಕಡ್ಡಿಯಲ್ಲಿ ಗೀಚುತ್ತಿದ್ದರು ತಮ್ಮ ಭವಿಷ್ಯವನ್ನು ತಾವೇ ಬರೆಯುವಂತೆ,ಜೊತೆಗೆ ತಮ್ಮ ಬಳಿಯಿದ್ದ ಚಕ್ಕುಲಿಯ ಒಂದೊಂದೇ ಹೊರ ಸುತ್ತುಗಳನ್ನು ಕಚ್ಚಿ ತಿಂದು ಮುಗಿಸುತ್ತಿದ್ದರು ಅವರು. 


ಅಲ್ಲೇ ಇದ್ದ ಮಕ್ಕಳಿಬ್ಬರ ಬಳಿ ಕುಳಿತುಕೊಂಡೆ.ನಿಮ್ಮ ಹೆಸರೇನು ಎಂದು ಅವರಲ್ಲಿಯೇ ಕೇಳಿದೆ.ಪುಟ್ಟಿಯೊಬ್ಬಳು ತಾನು ' ಅವನಿ' ಎಂದು ಹೇಳಿಕೊಂಡರೆ,ಆ ಪೋರ " ನಾನು ಹರ್ಷಿತ್' ಎಂದು ಹೇಳಿ ಸ್ಲೇಟಿನಲ್ಲಿ ಮತ್ತೆ ಬರೆಯುವುದರಲ್ಲಿ ಮಗ್ನನಾದ. 


" ನಿಮಗೆ ಈ ಅಕ್ಷರ, ಸಂಖ್ಯೆಗಳನ್ನು ಬಿಟ್ಟರೆ ಬೇರೆನು ಬರೆಯಲು ಬರುತ್ತದೆ.. " ಎಂದು ಅವರ ಸ್ಲೇಟ್ ನೋಡುತ್ತಲೇ ಕೇಳಿದೆ." ನನಗೆ ಚಿಟ್ಟೆ ಬಿಡಿಸಲು ಬರುತ್ತದೆ.. " ಎಂದು ಮುದ್ದು ಚಿಟ್ಟೆಯಂತೆಯೇ ಹೇಳಿ ಬಿಟ್ಟಳು ಅವನಿ." ಬಿಡಿಸು ಹಾಗಾದರೆ ನೋಡುವಾ.." ಅಂದೆ. ಅವಳು ಚಿಟ್ಟೆಯ ರೆಕ್ಕೆ ಬಿಡಿಸಲು ಶುರು ಮಾಡಿದಳು.ಬಣ್ಣದ ಕಡ್ಡಿ ಇದ್ದರೆ ರೆಕ್ಕೆಗೆ ನೀಲಿಯನ್ನೇ ತುಂಬಿಸಲು ಹೇಳುತ್ತಿದ್ದೆ ನಾನು.


ಆಯುಷ್ಮಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಊರಿನವರು ಒಂದಷ್ಟು ಜನ ಬಂದು ಸೇರಿದರು.ಒಂದು ರೀತಿಯಲ್ಲಿ ಪುಟ್ಟ ಸಭೆಯೇ ಇಂದು ಕೋಳಿಗೂಡಿನಂತಹ ಆ ಮಕ್ಕಳ ಗೂಡಿನಲ್ಲಿ ನೆರೆದಿತ್ತು.ನಮ್ಮ ಅಂಗನವಾಡಿ ಟೀಚರ್ಗೆ ಸೇರಿದ್ದ ಜನರನ್ನು ಕಂಡು ಅದೆನೋ ಉಲ್ಲಾಸ ಬಂತು  ' ಈಗ ನಾವೆಲ್ಲರೂ ಸೇರಿ ಸ್ವಚ್ಛತಾ ದಿನದ ಅಂಗವಾಗಿ ಒಂದು ಪ್ರಮಾಣ ಮಾಡೋಣ..' ಎಂದು ಎಲ್ಲರನ್ನೂ ಇನ್ನಿಲ್ಲದಂತೆ ಹುರಿದುಂಬಿಸಿದರು.


ಎಲ್ಲಾ ತಾಯಂದಿರು,ಹಿರಿಯರು ಪುಟ್ಟ ಮಕ್ಕಳೊಂದಿಗೆ ತಾವೂ ತಮ್ಮ ಕೈಯನ್ನು ಮುಂದೆ ಚಾಚುತ್ತಾ ನಿಂತುಕೊಂಡು ಬಿಟ್ಟರು.ಟೀಚರ್ ಪ್ರಮಾಣ ವಚನ ಬೋಧಿಸಲು ಶುರು ಮಾಡಿದರು," ನಾನು ನಮ್ಮ ಗ್ರಾಮವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತೇನೆ.. ನಾನು ಇನ್ನು ಮುಂದೆ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸುತ್ತೇನೆ...ನಾನು ಊರಿನ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುತ್ತೇನೆ..ನಾನು ಇನ್ನು ಮುಂದೆ ಎಲ್ಲಿಯೂ ಕಸವನ್ನು ಬಿಸಾಡುವುದಿಲ್ಲ.. ".ಟೀಚರ್ ಹೇಳಿದಂತೆಯೇ ಎಲ್ಲರೂ ಅದನ್ನೇ ರಾಗವಾಗಿಯೇ ಹೇಳಿದರು.ಊರಿನ ಕೆಲವು ಹರೆಯದ ಕಿರಿಯರು,ಹೆಂಗಸರು,ಗಂಡಸರು ಒಳಗೊಳಗೆಯೇ ನಕ್ಕರು.ಆದರೆ ಮಕ್ಕಳು ಮತ್ತು ಹಿರಿಯರು ಇನ್ನು ಮುಂದೆ ಊರಿನಲ್ಲಿ ಯಾರಾದರೂ ಕಸ ಬಿಸಾಡಿದರೆ ನಾವೇ ಅವರ ಸೊಂಟ ಮುರಿದು ಬಿಡುವೆವು ಎಂಬಂತೆ ನನ್ನ ಕಣ್ಣಿಗೆ ಗೋಚರಿಸಿ ಬಿಟ್ಟರು.ಒಟ್ಟಿನಲ್ಲಿ ಹಿರಿಯರು ಮತ್ತು ಆ ಪುಟ್ಟ ಮಕ್ಕಳಲ್ಲಿ  ವಯಸ್ಸಿನ ಅಜಗಜಾಂತರ ವ್ಯತ್ಯಾಸ ಇರುವುದೊಂದನ್ನು  ಬಿಟ್ಟರೆ,ಮುಗ್ಧತೆಯನ್ನು ಮಾತ್ರ ಸಮವಾಗಿಯೇ ಹಂಚಿಕೊಂಡಿದ್ದವು ಆ ಜೀವಗಳು.ನಾನು ಪೋಟೋ ಕ್ಲಿಕ್ಕಿಸಿದೆ. 





ಆಮೇಲೆ ಅಂಗನವಾಡಿ ಸಹಾಯಕಿಯರು ಬಂದವರಿಗೆಲ್ಲಾ ಕಾಫಿ ಮಾಡಿ ಕೊಟ್ಟರು,ತಿನ್ನಲು ಚಕ್ಕುಲಿ ಖಾರಕಡ್ಡಿಗಳನ್ನು ಹಂಚಿದರು.ಇದು ನನಗೆ ಬಹಳ ಹಿಡಿಸಿತು.ಚಕ್ಕುಲಿ ತಿನ್ನುತ್ತಲೇ ಸ್ಲೇಟಿನಲ್ಲಿ ಚಿಟ್ಟೆ ಚಿತ್ರವನ್ನು ಮುಂದುವರಿಸುತ್ತಿದ್ದ ಅವನಿ ಬಳಿ ಮತ್ತೆ  ಕುಳಿತುಕೊಂಡೆ. "ನಿಮಗೆ ಇಲ್ಲಿ ತಿನ್ನಲು ಏನೇನು ಕೊಡುತ್ತಾರೆ..." ಎಂದು ಮೆಲ್ಲಗೆ ನೆರೆಮನೆಯ ಆಂಟಿ ಮಕ್ಕಳಿಂದ ಗುಟ್ಟು ತಿಳಿದುಕೊಳ್ಳುವಂತೆಯೇ ಕೇಳಿದೆ. " ಬುಧವಾರ ಮತ್ತು ನಾಳೆ(ಶನಿವಾರ) ಮೊಟ್ಟೆ ಇದೆ.." ಅಂದಳು ಆ ಪುಟ್ಟಿ.ಶೇ.. ನಾನು ಇವತ್ತು ಬರಲೇ ಬಾರದಿತ್ತು ಎಂದು ನನ್ನ ಮನಸ್ಸು ಬಾರಿ ಬಾರಿ ಕೂಗಿ ಹೇಳಿತು. 


ಅಂಗನವಾಡಿ ಸಹಾಯಕಿ ಹೇಳಿದರು " ಮಕ್ಕಳಿಗೆ ದಿನಾ ಹತ್ತು ಗಂಟೆಗೆ ಬಿಸಿ ಹಾಲು,ಮೊಳಕೆ ಬರಿಸಿದ ಹೆಸರುಕಾಳು,ಮಧ್ಯಾಹ್ನದ ಸಮಯಕ್ಕೆ ಅನ್ನ ಸಾಂಬಾರಿನ  ಊಟ,ಆಮೇಲೆ ಒಂದು ಗಡದ್ದಾದ ನಿದ್ದೆ,ಸಿಹಿ ನಿದ್ದೆಯ ನಂತರ ಒಂದಿಷ್ಟು ಮಕ್ಕಳಾಟ,ಆಟದ ನಂತರ ಮೆಲ್ಲಲು ನೆಲಗಡಲೆ ಚುಕ್ಕಿ (ಚಿಕ್ಕಿ) ಎಲ್ಲಾ ಕೊಡುತ್ತೇವೆ.. " ಎಂದು ವಿವರಿಸಿದರು.ಆಮೇಲೆ ನನಗೂ ಒಂದಿಷ್ಟು ಚುಕ್ಕಿ ನಾನು ಎಷ್ಟೇ ಬೇಡ ಬೇಡ ಅಂದರು ಕೈಗೆ ತಂದು ಸುರಿದರು.ಆಮೇಲೆ ಅವರಿಗೆ ಯಾಕೆ ಬೇಜಾರು ಮಾಡುವುದೆಂದು ಇನ್ನೆರಡು ಚುಕ್ಕಿ ಕೇಳಿಯೇ ಪಡೆದುಕೊಂಡು ಅವರನ್ನು ಇನ್ನಷ್ಟು ಖುಷಿ ಪಡಿಸಿದೆ.ಬಂದಿದ್ದ ಕೆಲವು ಹೆಂಗಸರು ಮಾತ್ರ ನನ್ನನ್ನು ಮಕ್ಕಳ ಪಾಲಿನ ಚುಕ್ಕಿ ಕಳ್ಳನಂತೆ ನೋಡುತ್ತಿದ್ದರು. 



ಅಂಗನವಾಡಿ ಲೈಫು ನಿಜಕ್ಕೂ ಬ್ಯೂಟಿಫುಲ್ ಆಗಿದೆ.ಆ ಮಕ್ಕಳೊಳಗೆ ಯಾವುದೇ ರಾಗದ್ವೇಷಗಳಿಲ್ಲ.ಆ ಪುಟ್ಟ ಮಕ್ಕಳನ್ನು ನೋಡುವಾಗ ಬಾನುಲಿಯಲ್ಲಿ ಬರುತ್ತಿದ್ದ 'ನಾವು ಶಾಲೆಗೆ ಹೋಗುವೆವು..' ಹಾಡು ಮತ್ತೆ ಅದೇ ರಾಗದಲ್ಲಿ ಅದೇ ಧಾಟಿಯಲ್ಲಿ ನೆನಪಾಯಿತು.ಮತ್ತೊಮ್ಮೆ ನಾನೂ ಶಾಲೆಗೆ ಹೋಗಬೇಕು,ಸ್ಲೇಟಿನಲ್ಲಿ ದಾಸವಾಳ,ಚಿಟ್ಟೆ,ನವಿಲು,ಟಾಮಿ ನಾಯಿ,ಮಂಗು ಬೆಕ್ಕು ಎಲ್ಲವನ್ನೂ ನನಗೆ ಇಷ್ಟ ಬಂದಂತೆ ಬಿಡಿಸಬೇಕು.ಗುಡ್ಡದ ದಿಬ್ಬಗಳ ನಡುವಲ್ಲಿ ಮೆಲ್ಲಗೆ ಅರಳುವ ಸೂರ್ಯನನ್ನು ಅರ್ಧಚಂದ್ರಾಕೃತಿಯ ರೇಖೆಯಲ್ಲಿಯೇ ಮೂಡಿಸಬೇಕು,ಅವನ ಪಕ್ಕದಲ್ಲಿ ಅದೆಷ್ಟೋ ಎರಡು ಗೆರೆಗಳ ಹಕ್ಕಿಗಳನ್ನು ನನಗೆ ಮನಸ್ಸು ಬಂದತ್ತ ಹಾರಿಸಬೇಕು ಮತ್ತು ನಾನು ಚುಕ್ಕಿ ತಿಂದು ಹಕ್ಕಿಯಂತೆ ರೈಮ್ಸ್ ಹಾಡಬೇಕು ಎಂದು ನನಗೆ ಈಗಲೂ ಅನ್ನಿಸಿ ಬಿಟ್ಟರೆ.. ಹೇಳಿ ಅದರಲ್ಲಿ ನನ್ನದೆನ್ನುವ ತಪ್ಪು ಏನಿದೆ.



ದೊಡ್ಡವರಾಗುವುದು ತುಂಬಾ ಸುಲಭ,ದೊಡ್ಡವರಾದರೂ ಮನಸ್ಸಿನೊಳಗೊಂದು ಆ ಬಾಲ್ಯದ ಮಗುವನ್ನು ಜತನದಿಂದ  ಉಳಿಸಿಕೊಳ್ಳುವುದು,ಮತ್ತದನ್ನು ಹಾಗೇ ಕಾಪಿಡುವುದು.. ಕಷ್ಟ,ತುಂಬಾನೇ ಕಷ್ಟ.ಉಳಿಸಿಕೊಂಡರೆ ಈ ಜಗತ್ತು ಪ್ರತೀ ದಿನವೂ ಹೊಸ ಬೆರಗು...


.....................................................................................


#ಏನೋ_ಒಂದು


ಎ.ಬಿ ಪಚ್ಚು

ಕುಟ್ಟಿದಪಲ್ಕೆ

https://phalgunikadeyavanu.blogspot.com

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..