ನೇತ್ರಾವತಿಯ ಹುಡುಗಿ
.
#ಪುಷ್ಯರಾಗ
( ನೇತ್ರಾವತಿಯ ಹುಡುಗಿ )
" ಮನಸೂರೆಗೊಂಡ ದಿನ ನೀನು ಕೊಳ್ಳೆ ಹೊಡೆದದ್ದಾದರೂ ಏನನ್ನು? ನಿಜ ಹೇಳಲೇ,ನನ್ನ ಮೊದಲ ಏಕಾಂತದ ದಿನಗಳೇ ಬಹಳಷ್ಟು ತಂಪಾಗಿದ್ದವು.
ನನಗೆ ಸೋಲಲು ಇಷ್ಟವಿರಲಿಲ್ಲ,ಒಲಿದು ಮೊದಲೇ ಗೊತ್ತಿರಲಿಲ್ಲ.ಒಲಿಸಿಕೊಳ್ಳುವವರಾದರೂ ಒಂದಿಷ್ಟು ಜನ ಅಲ್ಲಲ್ಲಿ ಅವಶ್ಯವಾಗಿಯೇ ಇದ್ದರು;ಆದರೆ ಅಲ್ಲೆಲ್ಲೂ ನೀನಿರಲಿಲ್ಲ,ನಿನ್ನಂತೆ ಅವರಿರಲಿಲ್ಲ.ಬದುಕು ಸುಖವಾಗಿತ್ತು,ನನ್ನೆದೆಯ ಹಾಡು ಕೇವಲ ನನಗಾಗಿಯೇ ಮಿಡಿಯುತ್ತಿತ್ತು,ಗುನುಗಿದ ಮೇಘ ಮಲ್ಹಾರ ರಾಗದಲ್ಲಿ ಬರೀ ಮಳೆಯಿತ್ತು.
ನಾನು ನನ್ನಷ್ಟಕ್ಕೆ ಇದ್ದೆ ಮತ್ತೆ ನೀನು ನಿನ್ನಷ್ಟಕ್ಕೆ;ಮೇಲಿನ ಆ ಬಾನು,ಕೆಳಗಿನ ಈ ಭೂಮಿ ಸದಾ ಎದುರೆದುರೇ ಇದ್ದರೂ ಒಂದಾಗಲು ಎಂದಿಗೂ ಮನಸ್ಸೇ ಮಾಡದಂತೆ.ಹಾಗಾದರೆ ಕೈ ಚಾಚಿದ್ದು ಯಾರು?
ನೀನು ನನಗೆ ಕೈಕೊಟ್ಟು ಎಲ್ಲಿಗಾದರೂ ಹೇಳದೆ ಕೇಳದೆ ತುಂಬಾ ದೂರ ಓಡಿ ಹೋಗಿದ್ದರೂ,ನಾನಿಂದು ಹಿಡಿಶಾಪ ಹಾಕುತ್ತಲೇ ಒಂದಿಷ್ಟು ನೆಮ್ಮದಿಯಿಂದಿರುತ್ತಿದ್ದೆ.ಆದರೆ ಅದಕ್ಕಾದರೂ ಮೊದಲೊಮ್ಮೆ ಕೈ ಹಿಡಿಯಬೇಕಲ್ಲವೇ.
'' ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ...' ಕತೆಗೆ ನಾನೇ ಮುಂದೆ ನಿಂತು ಮುನ್ನುಡಿ ಬರೆಯಬಾರದಿತ್ತು.
ಆದರೂ ನಾನು ಗಗನ ಕುಸುಮವಲ್ಲ,ನಿನಗೆ ಕೈಗೆಟುಕುವಷ್ಟು ಎತ್ತರದಲ್ಲಿಯೇ ಹತ್ತಿರದಲ್ಲಿಯೇ ಇರಬೇಕು ಎಂದು ಸದಾ ಹಂಬಲಿಸಿದ ನಿನಗಾಗಿ ಅರಳಿದ ಮಂಗಳೂರಿನ ಮಲ್ಲಿಗೆ ನಾನು.ನಿನಗೆ ಬಾಯಿ ಬಿಟ್ಟು ಏನಾದರೊಂದು ಹೇಳಬಹುದಿತ್ತು,ಕಿವಿಗೊಟ್ಟು ಕೇಳಲು ನಾನಂತು ಸದಾ ತುದಿಗಾಲಿನಲ್ಲಿಯೇ ನಿಂತಿದ್ದೆ.ಅದೊಂದು ನಿಜಕ್ಕೂ ಸಂಭವಿಸಬೇಕಿತ್ತು;ಅದರಲ್ಲೂ ಬಹಳಷ್ಟು ನನಗೆ.
ನೀನೂ ಹೇಳಲಿಲ್ಲ,ನಾನೂ ಕೇಳಲಿಲ್ಲ,ಗಗನದ ತಾರೆ ಸದ್ದಿಲ್ಲದೇ ಉದುರಿ ಹೋದದ್ದು ಯಾರಿಗೂ ಗೊತ್ತಾಗಲಿಲ್ಲ;ನನ್ನ ಹೊರತು.
ನನ್ನ ಅಪ್ಪ ಅಮ್ಮನಿಗೆ ತಾರೆಗಳೆಂದರೆ ಅದೆನೋ ಪ್ರೀತಿ.ಅದಕ್ಕಾಗಿ ನನ್ನ ಹೆಸರು ' ಪುನರ್ವಸು'.ಮಳೆಯದ್ದೇ ನಕ್ಷತ್ರ.
ನನಗೆ ತುಂಬಾ ಸಲ ಆ ಹೆಸರು ನನಗೆ ಮಾತ್ರವಲ್ಲ ಯಾರಿಗೂ ಇಡಬಾರದು ಎಂದೇ ಅನಿಸುತ್ತದೆ.ಮಳೆಯನ್ನು ಬೆಳಕನ್ನು ಭೂಮಿಗೆ ನಿಸ್ವಾರ್ಥವಾಗಿ ಹರಿಬಿಡುವಂತೆ ಅದರೆಡೆಗೆ ಹಿಡಿ ಪ್ರೀತಿಯನ್ನು ಕೆಳಗಿನಿಂದ ಮೇಲಕ್ಕೆ ರವಾನಿಸುವವರು ಯಾರಾದರೂ ಈ ಭೂಮಿಯಲ್ಲಿ ಇದ್ದಾರೆಯೇ? ನೀನೊಬ್ಬನಾದರೂ ಆ ಮನಸ್ಸು ಮಾಡಬೇಕಿತ್ತು.
ನಾನಂತು ನಿನಗೆಂದೇ ಸುರಿದಿದ್ದೆ;ಮಳೆಗಷ್ಟೇ ಬಾನು ಭೂಮಿ ಒಂದಾಗುವಂತೆ ನಾನು ನೀನು ಒಂದಾಗಬೇಕೆಂಬ ಆಸೆಯಿಂದ,ಆ ಒಂದು ಆಸ್ಥೆಯಿಂದ.ನೀನು ಮನಸ್ಸು ಮಾಡಲಿಲ್ಲ,ನನ್ನ ಮಳೆ ಮನಸ್ಸನ್ನೂ ಅರಿಯಲಿಲ್ಲ.
ಎಂದಿಗೂ ಒದ್ದೆಯಾಗಲಾರೆ ಎಂದು ಭೀಷ್ಮ ಪ್ರತಿಜ್ಞೆ ಮಾಡಿಕೊಂಡವನಂತೆ ನಾನು ಪ್ರಿತಿಯಿಂದ ಸುರಿದಾಗಲೆಲ್ಲ ಕೊಡೆ ಹಿಡಿದುಕೊಂಡೇ ನಡೆದು ಬಿಡುತ್ತಿದ್ದೆ ನೀನು.ಶಂತನುವಿಗಾದರೂ ಗಂಗೆ ಕೊನೆಯಲ್ಲಿ ಒಂದಿಷ್ಟು ಕರುಣೆ ತೋರಿದ್ದಳು,ನೀನು ಅವಳನ್ನೇ ಮೀರಿಸಿದ ಭಾವನೆಗಳಿಲ್ಲದ ಅವಳ ಪುತ್ರನಂತೆ ಕಂಡೆ ನನಗೆ.ಒಂಚೂರೇ ಚೂರು ನನ್ನ ಪ್ರೇಮದ ಮಳೆಯಲ್ಲಿ ನೆನೆದಿದ್ದರೂ ನಾನು ಹಾಗೂ ನನ್ನ ಸೂಚನೆಗಳು ಅದೆಷ್ಟು ಸುಲಭವಾಗಿ ನಿನಗೆ ಅರ್ಥವಾಗಿ ಬಿಡುತ್ತಿದ್ದವಲ್ಲವೇ ಪುರು..?
ತಪ್ಪು ನನ್ನದಿತ್ತು,ನಾನು ಹೋಗಿ ಹೋಗಿ ಬಂಡೆಯ ಮೇಲೆಯೇ ಸುರಿದಿದ್ದೆ.'ಪುಷ್ಯರಾಗ' ಅಂದರೂ ಒಂದು ರೀತಿಯಲ್ಲಿ ಅದೇ ಅಲ್ಲವೇ,ಹೊಳೆದರೂ ಮಿಡಿಯದ ನವರತ್ನದ ಕಲ್ಲು.ಗಗನದ ತಾರೆಗೆ ಭೂಮಿಯ ಈ ಹಳದಿ ಕಲ್ಲು,ಮಳೆ ಸುರಿವ ವೇಳೆಯಲ್ಲಾದರೂ ತನ್ನ ಪರಿಚಯ ಹೇಳಬಹುದೆನೋ ಎಂಬ ಸಣ್ಣ ಆಸೆ ಅಷ್ಟೇ ನನ್ನದಿತ್ತು.
ನನ್ನ ರಾತ್ರಿಗಳು ಈಗ ಎಂದಿನಂತಿಲ್ಲ.ಅಂಗಳದ ತುಳಸಿ ಕಟ್ಟೆಯಲ್ಲಿ ದೀಪವಿಟ್ಟು,ಭಕ್ತಿಯಿಂದ ಕೈ ಮುಗಿದು ಮೆಲ್ಲ ಮೆಲ್ಲಗೆ ಸುತ್ತು ಬರುವಾಗ,ನನ್ನ ದೇವರನಾಮದ ನಡುವಲ್ಲಿ ನೀನು ಪದೇ ಪದೇ ನುಸುಳಿ ಬರುತ್ತಿದ್ದರೆ ನಾನು ನಿಜಕ್ಕೂ ಅಸಹಾಯಕಿ.
ಹೇಳು ನನ್ನ ಪಾಲಿಗೆ ನೀನು ದೇವರೋ,ಅಥವಾ ಪರಮ ಪಾಪಿಯೋ..?ಏಕೆಂದರೆ ನಿನ್ನ ನೆನಪಿಸಿನಲ್ಲಿಯೇ ನಾನು ದಿನಾ ಬದುಕುತ್ತಿದ್ದೇನೆ,ಅಷ್ಟೇ ಕಡು ವಿರಹಿಯಾಗಿ ಸಾಯುತ್ತಲೂ ಇದ್ದೇನೆ.ಬಿಡುಗಡೆಯ ಭಾಗ್ಯ ಹೇಗೆ? ನೀನಂತು ಹೇಳುವುದಿಲ್ಲ ಬಿಡು.
ಊರ ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆಯಾಗುತ್ತಿದೆ,ನನ್ನದೂ ಆಗಬೇಕು ಎಂದು ಅಪ್ಪ ಅಮ್ಮನದ್ದೊಂದು ಸಹಜವಾದ ಆಸೆ.ನನ್ನದೂ ಒಂದು ಕತೆಯಿದೆ ಎಂದು ಅವರಿಗೆ ಹೇಳಲು ನನಗೂ ಮನಸ್ಸಿದೆ.ಬರೀ ಒಬ್ಬರೇ ಇರುವ ಪ್ರೇಮಕತೆಗಳನ್ನು ಹೇಳಿದರೆ ಎಲ್ಲರೂ ನಗುವುದಿಲ್ಲವೇ ನೀನೇ ಹೇಳು,ಅದೆಂತಹ ಪೆದ್ದಿ ನಾನು.
ನನಗೆ ಚಂದವಾಗಿ ಸೀರೆ ಉಡಲು ಬರುತ್ತದೆ.ಆದರೂ ಪ್ರತೀ ಸಲ ಉಡುವಾಗ ಬಳಿಯಲ್ಲಿ ನೀನಿರಬೇಕು,ಹೀಗೇ ನೆರಿಗೆ ಹಿಡಿಯಬೇಕು ಎಂದು ನನಗೆ ನೀನು ಅಚ್ಚುಕಟ್ಟಾಗಿ ಕಲಿಸಿಕೊಡುವುದನ್ನು ನಾನು ಕಣ್ಣರಳಿಸಿಕೊಂಡು ನೋಡಬೇಕು, ಆ ನನ್ನ ಅರಳಿದ ಕಣ್ಣ ತುದಿಯ ಕಾಡಿಗೆಯನ್ನು ನಿನ್ನ ಬೆರಳ ತುದಿಯಲ್ಲಿ ಇಷ್ಟೇ ಎತ್ತಿಕೊಂಡು ನನ್ನ ಕೆನ್ನೆಯ ಮೇಲೆ ಹಾಗೇ ದೃಷ್ಟಿ ಬೊಟ್ಟಂತೆ ಇಡುತ್ತಾ ನನ್ನನ್ನೇ ನೋಡು ನೋಡುತ್ತಾ ನೀನೊಮ್ಮೆ ಮೈಮರೆಯಬೇಕು..... ಎನ್ನುವ ವಾಂಛೆಗಳು ಈಗೀಗ ನನ್ನಲ್ಲಿ ಅತಿಯಾಗಿದೆ ಎಂದು ಅನ್ನಿಸುವುದಿದೆ.
ವಿರಹದ ಧಗೆ ತಣಿಸಲು ತಣ್ಣೀರ ಸ್ನಾನದ ನಂತರ ಕನ್ನಡಿಯ ಮುಂದೆ ನಿಂತು ನಿಧಾನಕ್ಕೆ ಕೂದಲ ಸಿಕ್ಕು ತೆಗೆಯುವಾಗ ಬೆನ್ನ ತುಂಬಾ ಸರಿದಾಡಲು ನಿನ್ನದೇ ಒಂದಿಷ್ಟು ತುಂಟ ಬೆರಳುಗಳಿರಬೇಕು ಎಂದು ಬಯಸುವಷ್ಟು ನಾನು ನಿನ್ನನ್ನು ನನ್ನೊಳಗೆ ಬಿಟ್ಟುಕೊಂಡೆನೇ...ಎಂದು ನನಗೇ ನನ್ನ ಮೇಲೆ ಸಿಟ್ಟಿದೆ.ಮೊದಲು ಎಂದೂ ಈ ರೀತಿ ಆಗಿರಲಿಲ್ಲ.ಆದರೂ ಈ ದಿಗಿಲು ಚೆನ್ನಾಗಿದೆ,ವಿರಹದಲ್ಲೂ ಹಿತವಿದೆ.ಈ ರೀತಿಯಾಗಿಯೇ ಪ್ರೇಮಕವಿಗಳು ಕೂಡ ಹುಟ್ಟಿಕೊಂಡರೋ ಏನೋ.
ಹೊಸ ಬಿಂದಿ ಇಡುವಾಗಲೂ,ಕನ್ನಡಿಗೆ ಮತ್ತೆ ಹಳೆಯ ಬಿಂದಿ ಅಂಟಿಸುವಾಗಲೂ ನನಗೇ ನೀನೇ ನೆನಪಾಗುತ್ತೀಯಾ.ಮಂದೊಂದು ದಿನ ನನ್ನ ಹಣೆಯ ಸಿಂಧೂರದಲ್ಲಿಯೂ ನೀನಿರಬೇಕು ಎಂದು ನಾನು ಪ್ರತೀ ದಿನ ಪ್ರತೀ ಕ್ಷಣ ಅಂದುಕೊಂಡರೆ,ದೇವರೆದುರು ಪ್ರಾರ್ಥಿಸಿ ಬಿಟ್ಟರೆ..... ಹೇಳು ಅದರಲ್ಲಿ ಈ ಹೆಣ್ಣು ಜೀವದ್ದು ಏನು ತಪ್ಪಿದೆ?
ನಾನು ನೇತ್ರಾವತಿ ತೀರದ ಹುಡುಗಿ,ಗೊತ್ತು ನೀನು ಫಲ್ಗುಣಿ ಕಡೆಯವನು.ಎರಡರ ಬದುವಲ್ಲೂ ಸಾಕಷ್ಟು ಮರಳಿದೆ.ಕನಿಷ್ಠ ಪಕ್ಷ ಅದರಲ್ಲಾದರೂ ಇಬ್ಬರೂ ಸೇರಿ ಒಂದು ದಿನ ಮನೆ ಕಟ್ಟುವ ಮನಸ್ಸು ಮಾಡಬಹುದಿತ್ತು,ಆಮೇಲೆ ಅದನ್ನೊದ್ದು ಹಾಗೇ ಹಗುರವಾಗಿ ಎದ್ದು ಮನಸ್ಸು ಹೇಳಿದ ಕಡೆಗೆ ನಮ್ಮಷ್ಟಕ್ಕೆ ನಡೆದು ಬಿಡಬಹುದಿತ್ತು.
ಕಾಲೇಜಿನ ಆಡಿಟೋರಿಯಂನಲ್ಲಿ ನೀನು ಪ್ರತೀಕ್ ಕುಹಾದ್ ನ ಆ ಶಹರದ ಹಾಡುಗಳನ್ನು ಹಾಡಿ ಎಲ್ಲರಿಗೂ ಅವನನ್ನು ಪರಿಚಯಿಸುವಾಗ ನಾನು ಅಂದು ಅಲ್ಲಿರಬಾರದಿತ್ತು.ಅವನು ಹೇಗೆ ಹಾಡಿದರೂ ಒಂದೇ ರೀತಿ ಹಾಡುತ್ತಾನೆ.ಅದೇ ನೋವು,ಅದೇ ವಿರಹ.ಹಾಡುಗಳಷ್ಟೇ ಬೇರೆ ಬೇರೆ.ಇಷ್ಟವಾದರೂ ಅವನನ್ನು ಕೇಳಬಾರದು ಎಂದು ಅಂದುಕೊಳ್ಳುತ್ತೇನೆ,ನೀನು ನೆನಪಾದಾಗಲೆಲ್ಲಾ ಅವನೇ ನನ್ನ ಕಿವಿ ತುಂಬುತ್ತಾ ಹೋಗುತ್ತಾನೆ.ಅವನ ಪ್ರೇಮದ ಹಾಡುಗಳನ್ನು ಹಾಡುವ ನಿನಗೇಕೆ ಪ್ರೇಮದ ಬಗ್ಗೆ ಒಂಚೂರು ಗೊತ್ತಿಲ್ಲ?
ಸುಮ್ಮನೆ ಹಾಡಬೇಡ,ಪ್ರತೀ ಸಾಲಿನೊಳಗೊಮ್ಮೆ ಇಳಿದು ನೋಡು,ಆಮೇಲೆಯೇ ಹಾಡು,ಪ್ರೀತಿ ನಿನ್ನಲ್ಲಿಯೂ ಹುಟ್ಟಬಹುದು..
" ಲಬೋಂ ಪೇ ಜೋ ಬಿ ಹೋ,ಕೆಹ್ನೆ ದೋ ಟೆಹ್ರಾ ಹೂ ಮೇ,
ಯೆ ದಿಲ್ ಕಿ ಬಾತೊಂಕೋ,ರೋಕೋ ನ ಟೆಹ್ರಾ ಹೂ ಮೇ,
ನಶೀಲಿ ರಾಥ್ ಹೇ,ತಾರೇ ಬಿ ಸಾಥ್ ಹೇ
ಗುನ್ಕುನಾತೇ ಹಮ್ ಚಲೇ,ಶೆಹೆರೊಂಕಿ ಗಲಿಯೋಂಸೆ,
ಜಾನೇ ಕ್ಯೋಂ ಯೆ ಪಲ್,ಪಿಗಲ್ ಗಯಾ ಫಿಸಲ್ ಗಯಾ
ಜಾನೇ ಕ್ಯೋಂ ಯೆ ಪಲ್,ಪಿಗಲ್ ಗಯಾ ಪಿಗಲ್ ಗಯಾ ....."
ನಾನು ಹೆಚ್ಚಾಗಿ ಒಳಗೊಳಗೆ ಅರಳಿಕೊಳ್ಳುವುದೇ ನಕ್ಷತ್ರ ಮೂಡುವ ರಾತ್ರಿಯ ಕತ್ತಲುಗಳಲ್ಲಿಯೇ.ಈಗೀಗ ನಿನ್ನಿಂದಾಗಿ ಅದೂ ಕೂಡ ಸಾಧ್ಯವಾಗುತ್ತಿಲ್ಲ.ಏಕೆಂದರೆ ನಾನೀಗ ನಾನಾಗಿಯೇ ಉಳಿದಿಲ್ಲ.
ಇವತ್ತಿನಿಂದ ನಾಡಿನ ತುಂಬಾ ದಸರಾ,ಮಂಗಳೂರಿನಲ್ಲಿ ಎಂದಿನಂತೆ ನವರಾತ್ರಿಯದ್ದೇ ಸಡಗರ.ನನ್ನದ್ದೊಂದು ದೇವಿ ಧ್ಯಾನದ ಸಮಯದಲ್ಲಿ ದಯವಿಟ್ಟು ಬರಬೇಡ ಎಂದು ನಾನು ಮನವಿ ಆದರೂ ಯಾರಲ್ಲಿ ಮಾಡಲಿ,ಹೇಗೆ ಮಾಡಲಿ.ಏಕೆಂದರೆ ನಿನಗಂತು ಇವೆಲ್ಲದರ ಒಂಚೂರು ಅರಿವೆಯೇ ಇಲ್ಲ.ನಿನ್ನ ಲೋಕ ನಿನ್ನದು.ಕೊನೆಯ ಪಕ್ಷ ನೀನಾದರೂ ನಿನ್ನೊಳಗೆ ಖುಷಿಯಲ್ಲಿ ಇರುವೆಯಾ? ನಿನ್ನನ್ನು ನೋಡಿದರೆ ನನಗೆ ಹಾಗೆ ಅನ್ನಿಸುವುದೇ ಇಲ್ಲ ಪುರು.ಆಗ ನನ್ನ ವಿರಹದ ಧಗೆ ಮತ್ತಷ್ಟು ಧಗಧಗ.
ರಥಬೀದಿಯ ಆಚಾರ್ಯ ಮಠದ ಶಾರದೆಗೆ ಈ ಬಾರಿ ನೂರರ ಸಂಭ್ರಮ.ಅವಳಿಗೆ ಚಿನ್ನದ ಜರಿಯುಳ್ಳ ಸೀರೆ,ಚಿನ್ನದ ನವಿಲು,ಚಿನ್ನದ ಆರತಿ,ಚಿನ್ನದ ವೀಣೆಗಳನ್ನು ಒಪ್ಪಿಸಿ ಭಕ್ತರು ಸಂಭ್ರಮ ಪಡುತ್ತಿದ್ದಾರೆ.ನನಗೆ ಮೊದಲಿನಿಂದಲೂ ಅವಳ ಮುಡಿಯ ಆ ಮಲ್ಲಿಗೆ ದಂಡೆಯ ಅಲಂಕಾರದಲ್ಲಿಯೇ ಅದೆನೋ ಮುಗಿಯದ ಸೆಳೆತ.ಎಷ್ಟಾದರೂ ಹೆಣ್ಣು,ಹಾಗಾಗಿ ಮಲ್ಲಿಗೆ ಅಲಂಕಾರವೇ ನನ್ನ ಗಮನ ಮೊದಲು ಸೆಳೆದು ಬಿಡುತ್ತದೆ.ಅದನ್ನು ನೋಡಲೆಂದೇ ಪ್ರತೀ ಬಾರಿಯೂ ಅಲ್ಲಿಗೆ ಹಾಗೇ ಓಡಿ ಬಿಡುತ್ತೇನೆ.ಈ ಬಾರಿ ಆದರೂ ಅದನ್ನೆಲ್ಲಾ ಕಣ್ತುಂಬಿಸಿಕೊಳ್ಳಲು ನೀನೂ ನನ್ನ ಜೊತೆ ಇರಬೇಕಿತ್ತು,ನನಗೂ ಒಂದು ಚೆಂಡು ಮಲ್ಲಿಗೆ ನೀನೇ ನಿನ್ನ ಕೈಯಾರೆ ಮುಡಿಸಬೇಕಿತ್ತು.. ಎಂಬ ಬಯಕೆ ನನ್ನಲ್ಲಿ ನನ್ನಷ್ಟಕ್ಕೆಯೇ ಹುಟ್ಟಿಕೊಂಡು ಬಿಟ್ಟರೆ,ಅದನ್ನು ಕೊನೆಯ ಪಕ್ಷ ನನ್ನಲ್ಲಿ ಆದರೂ ಹೇಳಿಕೊಳ್ಳದೆ ನಾನೇಗೆ ಸಹಿಸಿಕೊಳ್ಳಲಿ.
ಇನ್ನು ನವರಾತ್ರಿ ಬಂದರೆ ನೀನೆಲ್ಲಿ ಸಿಗುತ್ತೀಯಾ.ಈ ಒಂಬತ್ತು ದಿನಗಳು ನೀನು ಮಂಗಳೂರಿನ ತುಂಬೆಲ್ಲಾ ಕುಣಿಯುವ ಮಾರ್ನೆಮಿಯ ಹುಲಿ.ನೀನು ಈ ಬಾರಿಯೂ ವೇಷ ಹಾಕುತ್ತೀಯಾ,ಹುಲಿ ಕುಣಿಯುತ್ತೀಯಾ ಎನ್ನುವುದು ಊರೆಲ್ಲಾ ಸುದ್ದಿಯಾಗಿದೆ ಮತ್ತದು ನನಗೂ ತಲುಪಿದೆ.ಗಟ್ಟಿ ಮನಸ್ಸಿನ ನಿನಗೆ ನಿಜವಾಗಿಯೂ ಹುಲಿಯೇ ಬಹಳಷ್ಟು ಹೆಚ್ಚು ಸರಿ ಹೊಂದುವುದು ಬಿಡು.ಆದರೆ ನಿನ್ನದೊಂದು ಹುಲಿ ಕತೆಯಲ್ಲಿ ಪುಣ್ಯಕೋಟಿ ಗೋವಿಗೊಂದು ಎಂದಿಗೂ ಸ್ಥಾನ ಸಿಗಲಾರದೇ... ಎನ್ನುವುದು ನನ್ನ ತಣಿಯದ ಕುತೂಹಲ.
ಕೊನೆಯ ದಿನದ ಕುದ್ರೋಳಿ ಶಾರದೆಯ ಮೆರವಣಿಗೆಯಲ್ಲಿ ನಿನ್ನದೊಂದು ಹುಲಿ ಕುಣಿತವನ್ನು ಈ ಬಾರಿ ನಾನೂ ನೋಡಬೇಕು.ರಾತ್ರಿಯ ನವದುರ್ಗೆಯರ ಆ ಒಂದು ಭವ್ಯ ಮೆರವಣಿಗೆಯಲ್ಲಿ ಈ ಬಾರಿ ನನ್ನ ಕಣ್ಣುಗಳು ನಿನಗಾಗಿಯೇ ತಡಕಾಡಲಿದೆ.ನಿನಗೆ ದಿಗಿಲು ಹುಟ್ಟಿಸಲು ನನಗೂ ಆಸೆಯಿದೆ ಮತ್ತು ನಾನು ಲಾಲ್ ಬಾಗ್ ನಲ್ಲಿ ನಿಂತಿರುತ್ತೇನೆ.
ಕಣ್ಣಿಗೆ ಬೀಳಬೀಡ,ಬಿದ್ದರೆ ಖಂಡಿತವಾಗಿಯೂ ಈ ಬಾರಿ ಮಾತ್ರ 'ಪುರು...' ಎಂದು ಜೋರಾಗಿ ಮೂರು ಬಾರಿ ನಿನಗೆ ಕೇಳುವಂತೆಯೇ ಕರೆಯುತ್ತೇನೆ ಮತ್ತು ನಿನ್ನ ಹುಲಿಯನ್ನು ಈ ಬಾರಿಯ ಮೆರವಣಿಗೆಯಲ್ಲಿ ಒಂದು ಕ್ಷಣ ಅಧೀರನನ್ನಾಗಿ ಮಾಡಿಯೇ ತೀರುತ್ತೇನೆ.ಹುಲಿಗೆ ಪ್ರೇಮ ಜ್ವರ ಏಕೆ ಬರುವುದಿಲ್ಲ ಎಂದು ನನಗೂ ನೋಡಬೇಕು..... "
- ನಿನ್ನದೇ ಮಳೆ ನಕ್ಷತ್ರ,
" ಪುನರ್ವಸು "
.....................................................................................
#ಪುಷ್ಯರಾಗ
ಎ.ಬಿ ಪಚ್ಚು
ಕುಟ್ಟಿದಪಲ್ಕೆ
(ಪೋಟೋ - ಅಂತರ್ಜಾಲ ಕೃಪೆ)
https://phalgunikadeyavanu.blogspot.com
Comments
Post a Comment