ವಿಲೇಜ್ ವರ್ಲ್ಡು ಮತ್ತು 24 ಕತೆಗಳು | ಗೋಪಾಲಕೃಷ್ಣ ಕುಂಟಿನಿ

 ವಿಲೇಜ್ ವರ್ಲ್ಡು ಮತ್ತು 24 ಕತೆಗಳು | ಗೋಪಾಲಕೃಷ್ಣ ಕುಂಟಿನಿ



ಇಲ್ಲಿರುವುದು ಕರಾವಳಿಯ ಹಿಮಾಲಯವೆನಿಸಿರುವ ಎತ್ತರದ  ಪಶ್ಚಿಮದ ಘಟ್ಟದ ಬೆಟ್ಟದ ತಪ್ಪಲಿನ ಕೆಳಗಿನ ಮೂಡಣದ ಕತೆಗಳು. ಉದ್ದುದ್ದ ಶೀರ್ಷಿಕೆಯ ಪುಟ್ಟ ಪುಟ್ಟ 24 ಹಸಿರ ಉಸಿರಿನ ಕತೆಗಳು ಇದರಲ್ಲಿದೆ. ಒಂದರ್ಥದಲ್ಲಿ ಪರಿಸರದ ಕತೆಗಳು ಎಂದು ಹೇಳಲು ಅಡ್ಡಿ ಇಲ್ಲ. 


' ಪೆಟ್ಟಿಸ್ಟ್ ಸಂತು ಮತ್ತು ರಾಮಣ್ಣನ ಹೋಟೇಲು.. ' ಎಂಬ ಕತೆಯಲ್ಲಿ ಪೋಲಿಸರ ವಿಭಿನ್ನ ರೀತಿಯ ವಸೂಲಿ ತಂತ್ರವನ್ನು ರಾಮಣ್ಣನ ಸೋಗೆ ಮಾಡಿನ ಚಹಾ ಹೋಟೆಲ್ ಪರಿಸರದಲ್ಲಿ ಕಟ್ಟಿಕೊಡಲಾಗಿದೆ. ಇದೊಂತರ ಚೆನ್ನಾಗಿದೆ ಆದರೆ ಪೆಟ್ಟಿಸ್ಟ್ ಸಂತು ಹೇಳಿದ್ದು ನಿಜವೋ ಅಲ್ಲವೋ ಎನ್ನುವುದು ಅವನಿಗಷ್ಟೇ ಗೊತ್ತು; ಅದೇ ರೀತಿ ರಾಮಣ್ಣನ ಪಜೀತಿ ರಾಮಣ್ಣನಿಗೆ. ನನಗೆ ಇದನ್ನು ಓದುವಾಗ ರಾಮಣ್ಣ ಮಾಡಿ ಕೊಡುವ ಕಲ್ತಪ್ಪದ ಘಮ ಹಾಗೇ ಬಂದು ಮೂಗಿಗೆ ಬಡಿಯಿತು. ನನಗೆ ಕರಟಿದ ಕಲ್ತಪ್ಪದ ಆ ಒಗ್ಗರಣೆಯ ಕ್ರಸ್ಟು ಇಷ್ಟ, ಹಾಗಾಗಿ ಈ ವಾರ ರಾಮಣ್ಣನ ನೆನಪಿನಲ್ಲಿ ಕಲ್ತಪ್ಪ ಸವಿಯುವ ಯೋಜನೆಯೊಂದು ಉಂಟು. 


' ಬೂಬಣ್ಣನ ಮಕ್ಕಳು ಮತ್ತು ಬಣ್ಣದ ಕಾಲಿನ ದೊಡ್ಡ ಹಕ್ಕಿ..' ಕತೆ ಎಲ್ಲಾ ಕತೆಗಳಿಗಿಂತ ಹೆಚ್ಚು ಇಷ್ಟವಾಯಿತು. ಈ ಕತೆ ಪೂರ್ಣಚಂದ್ರ ತೇಜಸ್ವಿಯವರ 'ಪರಿಸರದ ಕತೆ' ಸಂಕಲನದ 'ಸುಸ್ಮಿತಾ ಮತ್ತು ಹಕ್ಕಿ ಮರಿ' ಯನ್ನು ನೆನಪಿಸುತ್ತಾದರೂ ಇದು ಸ್ವಲ್ಪ ಬೇರೆಯೇ ಕತೆ. ಬೂಬಣ್ಣನ ಮಕ್ಕಳ ಮುಗ್ಧತೆ ಹಾಗೂ ಮನುಷ್ಯರೊಳಗೆ ಇರುವ ಕ್ರೌರ್ಯ ಎರಡೂ ಇಲ್ಲಿ ಒಟ್ಟೊಟ್ಟಿಗೆ ನಮ್ಮೆದುರು ಪ್ರತ್ಯಕ್ಷ. 


'ಮಾಳಿಗೆ ವೆಂಕಪ್ಪಜ್ಜ ಮತ್ತು ಕಲ್ಲಿನ ಕೋಟೆ.. ' ಕತೆಯ ಕೊನೆಯಲ್ಲಿ " ವೆಂಕಪ್ಪಜ್ಜನ ಮಕ್ಕಳನ್ನು ಒಂದು ಮುಂಜಾನೆ ಭೂ ಮಾಲೀಕರು ಒಳ್ಳೆಯ ಮಾತುಗಳಲ್ಲಿ ಒಕ್ಕಲೆಬ್ಬಿಸಿದರು..." ಎನ್ನುವ ಸಾಲು ಒಂದಿಷ್ಟು ಕಾಡುತ್ತದೆ ಮತ್ತು ಒಬ್ಬನೇ ಬೆಟ್ಟದ ಸೊಂಟದಲ್ಲಿ ಕಲ್ಲಿನಿಂದಲೇ ಕೋಟೆಯಂತಹ ಮನೆ ಕಟ್ಟಿದ್ದ ವೆಂಕಪ್ಪಜ್ಜ ಬಹಳಷ್ಟು ಬೆರಗು ಮೂಡಿಸಿ ಬಿಡುತ್ತಾನೆ. 


' ಕೃಷ್ಣಭಟ್ಟರ ದರ್ಕಾಸ್ತು ಮತ್ತು ಒಂದು ರಾಶಿ ಕೆಂಪು ಮೆಣಸು..' ಎಂಬ ಕತೆಯಲ್ಲಿ ಒಂದಾನೊಂದು ಕಾಲದಲ್ಲಿ ಹಳ್ಳಿಯಲ್ಲಿ ಬೇಕಾದಷ್ಟು ಜಮೀನು ಭೂಮಿಗಳನ್ನು ಹೊಂದುವ ಅವಕಾಶ ಇದ್ದರೂ, ಹಿರಿಯರು ಅದರ ಬಗ್ಗೆ ಆವಾಗ ಅಷ್ಟಾಗಿ ಯೋಚಿಸದೆ ಇದ್ದುದರ ಬಗ್ಗೆ ಈಗೀನ ಕೃಷಿಪ್ರಿಯ ಪೀಳಿಗೆಯವರು ಕೈ ಕೈ ಹಿಸುಕಿಕೊಳ್ಳುವ ಪಜೀತಿಯನ್ನು ಈ ಕತೆ ತುಂಬಾನೇ ನೆನಪಿಸುತ್ತದೆ. ಈಗಲೂ ತುಂಬಾನೇ ಜಮೀನು ಹೊಂದಿರುವವರನ್ನು ನೋಡಿದಾಗ ತಮಗೂ ಅಂತಹ ಅವಕಾಶ ಇದ್ದುದನ್ನು ನಮ್ಮ ಹಿರಿಯರು ಹೇಳುವುದು ಹಳ್ಳಿಗಳಲ್ಲಿ ಬಹಳ ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಅಂತಹದ್ದೊಂದು ಕತೆ ಇದು. 


' ಚಾರ್ಮಾಡಿ ಕಾಡಿನ ಕರಿಯಪ್ಪನೂ ಕಾಣಿಯಾಗಲಿರುವ ಗೋಧಿಯೂ.. ' ಎಂಬ ಕತೆಯಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರ ಪ್ರದೇಶ ಹಾಗೂ ನಿರಂತರವಾಗಿ ಸವೆದು ಹೋಗುತ್ತಿರುವ ಅರಣ್ಯದ ಬಗ್ಗೆ ಕಳವಳ ಹಾಗೂ ಆತಂಕಗಳಿವೆ. ಕರಿಯಪ್ಪ ಹೇಳುವ " ಕಾಡುಗಳು ಪೇಟೆಗಳಾದ ಹಾಗೇ ಪೇಟೆಗಳೂ ಕಾಡುಗಳು ಆಗಲೇ ಬೇಕಲ್ಲವೇ ಸ್ವಾಮೀ, ಆಗದೇ ಇರುತ್ತದಾ? ಬದುಕಿದ್ದರೆ ನೀವೇ ಹೇಳಲಿಕ್ಕುಂಟು ನೋಡಿ.." ಎಂಬ ಮಾತು ಆಶಾವಾದವೋ ಅಥವಾ ಅಸಹಾಯಕತೆಯೋ ಎಂಬ ಗೊಂದಲಕ್ಕೆ ನಮ್ಮನ್ನು ಹಚ್ಚುತ್ತದೆ. 


' ಕುದುರೆಮುಖದ ಬೆಂಕಿಯೂ ಪಂಜಾಬಿನ ಕೊಳೆ ಹೊಗೆಯೂ.. ' ಎಂಬ ಕತೆ ಹೇಗೆ ದೇಶದಲ್ಲಿ, ವಿಶ್ವದಲ್ಲಿ ರೈತರು ಕೃಷಿಯನ್ನು ಪ್ರತೀ ವರ್ಷವೂ ಗಣನೀಯ ಪ್ರಮಾಣದಲ್ಲಿ ಕೈ ಬಿಟ್ಟು ಬೇರೆ ವೃತ್ತಿಗಳತ್ತ ಹೊರಳುತ್ತಿದ್ದಾರೆ ಮತ್ತು ಮುಂದೊಂದು ದಿನ ಕೃಷಿ ಮಾಡುವವರು ಎಷ್ಟಿರಬಹುದು ಎಂಬ ಅಂಕಿ ಅಂಶಗಳು ನಿಜಕ್ಕೂ ಬಹಳಷ್ಟು ಆಘಾತಕಾರಿಯಾದದ್ದು. 


' ಆನಂದಣ್ಣನ ವಾಟರ್ ಸ್ಟೋರಿ ಮತ್ತು ಸರಕಾರದ ಮನೆ ಕಟ್ಟಿಕೊಡುವ ಪಿಲಾನು..' ಈ ಕತೆಯಲ್ಲಿ ಪ್ರವಾಹ ಪರಿಸ್ಥಿತಿಗೆ ಕಾರಣವಾಗಬಹುದಾದ ಅಂಶಗಳು ಹಾಗೂ ನಾವು ಅದನ್ನು ನಿಭಾಯಿಸುವಲ್ಲಿ ಹೇಗೆಲ್ಲಾ ವಿಫಲವಾಗಿದ್ದೇವೆ ಎಂಬ ಗಂಭೀರ ಹಾಗೂ ಯೋಚಿಸಲೇ ಬೇಕಾದ ವಿಚಾರಗಳಿವೆ. 


ಇದರ ಎಲ್ಲಾ ಕತೆಗಳು ಅನುಭವದ ಕತೆಗಳು ಹಾಗೂ ಪರಿಸರದ ಕತೆಗಳಾಗಿವೆ. ಹಲವು ಕತೆಗಳು ಪ್ರಬಂಧಂತೆಯೂ ಕಾಣುತ್ತದೆ. ಒಳ್ಳೆಯ ಆರಂಭ ಪಡೆದ ಹೆಚ್ಚಿನ ಕತೆಗಳ ಅಂತ್ಯ ಅನಿವಾರ್ಯವಾಗಿ ಪೂರ್ಣವಿರಾಮವನ್ನು ಪಡೆದುಕೊಂಡಿರುವುದನ್ನು ಕೂಡ ಸೂಕ್ಷ್ಮವಾಗಿ ಗಮನಿಸಬಹುದು. ಇಲ್ಲಿಯ ಯಾವುದೇ ಕತೆಗಳು ಎಂದಿನಂತೆ ಸಂಪ್ರದಾಯಿಕ ಕತೆಗಳ ಚೌಕಟ್ಟನ್ನು ಹೊಂದಿಲ್ಲದೇ ಇರುವುದರಿಂದ ಅನುಭವದ ಕತೆಗಳನ್ನಾಗಿಯೇ ಇವನ್ನು ಓದಿದರೆ ಪಶ್ಚಿಮ ಘಟ್ಟದ ತಪ್ಪಲಿನ ಕುಂಟಿನಿಯವರ 'ವಿಲೇಜ್ ವರ್ಲ್ಡು' ಸರಾಗವಾಗಿ ನಮ್ಮೊಳಗಿನ ಜಗತ್ತಿಗೂ ಇಳಿದು ಬಿಡುತ್ತದೆ. 


ಗೋಪಾಲಕೃಷ್ಣ ಕುಂಟಿನಿಯವರ ಪರಿಸರದ ಬಗೆಗಿನ ಆಸಕ್ತಿ ಹಾಗೂ ಕಾಳಜಿ ಅವರ ಕತೆಗಳ ತುಂಬೆಲ್ಲಾ ಇದೆ. ಪರಿಸರ ನಾಶದ ಬಗ್ಗೆ ಅವರಲ್ಲಿ ಒಂದಿಷ್ಟು ಕಠೋರವಾದ ಆರೋಪಗಳಿವೆ, ಮುಂದಿನ ಭವಿಷ್ಯದ ಬಗ್ಗೆ ವಿಷಯ ಆಧಾರಿತ ಆತಂಕಗಳೂ ಇವೆ. ಸಂಪದ್ಭರಿತವಾಗಿರುವುದು ಹಳ್ಳಿಯೇ ಹೊರತು ನಗರವಲ್ಲ ಎಂಬ ಅವರದ್ದೊಂದು ತುಂಬು ಅಭಿಮಾನ ಹಾಗೂ ಹಳ್ಳಿ ಬದುಕಿನ ಕಡೆಗಿರುವ ಅಪಾರವಾದ ಪ್ರೀತಿ ಅವರ ಕತೆಗಳಲ್ಲಿ ಎಲ್ಲಾ ಕಡೆಯೂ ನಳನಳಿಸಿವೆ. ಎಲ್ಲಕ್ಕಿಂತ ಹೆಚ್ಚು ಇಷ್ಟ ಆಗಿದ್ದು ಇದೇ, ಇದು ಎಲ್ಲರಲ್ಲೂ ಅನಂತವಾಗಲಿ.. 


ವಿಲೇಜ್ ವರ್ಲ್ಡು ಮತ್ತು 24 ಕತೆಗಳು |  ಕಥಾ ಸಂಕಲನ 

ಲೇಖಕರು - ಗೋಪಾಲಕೃಷ್ಣ ಕುಂಟಿನಿ

ಪ್ರಕಾಶಕರು - ಸಪ್ನ ಬುಕ್ ಹೌಸ್,ಬೆಂಗಳೂರು. 

ಪ್ರಥಮ ಮುದ್ರಣ - 2020

ಪುಟಗಳ ಸಂಖ್ಯೆ- 147

ಬೆಲೆ - 120 Rs. 


ಪುಸ್ತಕಗಳು 

Ab Pacchu

(https://phalgunikadeyavanu.blogspot.com)

Comments

Popular posts from this blog

VIKINGS - S06E20

ಗಗನದ ಸೂರ್ಯ

ಪಯ್ಯನ ಪರಾಕ್ರಮ