ಕೂರ್ಗ್ ರೆಜಿಮೆಂಟ್

 ಕೂರ್ಗ್ ರೆಜಿಮೆಂಟ್ (ಬಂದೂಕು ಹಿಡಿದವರ ನಾಡಿಮಿಡಿತ)

 - ಮೇಜರ್ l ಡಾ l ಕುಶ್ವಂತ್ ಕೋಳಿಬೈಲು (ನಿ) 






" ಮನೆಯಲ್ಲಿ ಹುಟ್ಟಿದ ಗಂಡು ಮಕ್ಕಳನ್ನೆಲ್ಲ ಆ ತಾಯಂದಿರು ಕೂರ್ಗ್ ರೆಜಿಮೆಂಟಿಗೆ ಬರೆದು ಕೊಟ್ಟಂತಿತ್ತು. ಮನೆಯ ಹೆಣ್ಣು ಮಕ್ಕಳು ಗಂಡನಿಲ್ಲದೆ ಬದುಕಲು ಮಾಡಬೇಕಾಗಿದ್ದ ಸಂಘರ್ಷಕ್ಕಾಗಿ ಮೆಡಲುಗಳನ್ನು ಕೊಡುವುದಿದ್ದರೆ, ರವಿಕೆಯ ಮೇಲೆ ಅಂಟಿಸಲು ಜಾಗವೇ ಸಾಲುತ್ತಿರಲಿಲ್ಲವೇನೋ? " 


ಯೋಧನ ತಾಯಿಯ, ಅವನ ಕೈ ಹಿಡಿದ  ಮಡದಿಯ ಹೆಚ್ಚಾಗಿ ಎಲ್ಲೂ  ಸುದ್ದಿಯಾಗದ, ಸುಲಭಕ್ಕೆ ಈ ಸಮಾಜಕ್ಕೆ ಅರಿವಾಗದ ಅವರದ್ದೊಂದು ತ್ಯಾಗದ ಬಗೆಗಿನ ಲೇಖಕರ ಈ ಸಾಲುಗಳು, ಓದುಗನ ಹೃದಯವನ್ನು ಒಂದಿಷ್ಟು ಬೆಚ್ಚಗೆ ಮಾಡದೇ ಇರದು.


ಕೇವಲ ಇದೊಂದೇ ಸಾಲಲ್ಲ, ಈ ಸಂಕಲನದಲ್ಲಿ ಬರುವ ಪ್ರತಿಯೊಂದು ಕಥೆಯಲ್ಲೂ ಒಂದಲ್ಲ ಒಂದು ಮುತ್ತಿನಂತಹ ಸಾಲುಗಳು ಅಲ್ಲಲ್ಲಿ ಹೊಳೆದು ಬಿಡುತ್ತವೆ. ಸುಂದರ ಸಾಲುಗಳು ಎಲ್ಲಾದರೂ ಕಂಡರೆ ಅದನ್ನು ಡೈರಿಯಲ್ಲಿ ಬಹಳ ಆಸ್ಥೆಯಿಂದ ಬರೆದಿಟ್ಟುಕೊಳ್ಳುವವರು  ನೀವಾಗಿದ್ದರೆ, ಖಂಡಿತವಾಗಿಯೂ ಇಲ್ಲಿ ನಿಮಗುಂಟು ಬಹಳಷ್ಟು ಮುತ್ತು ಹೆಕ್ಕುವ  ಅಪೂರ್ವ ಅವಕಾಶ.


ಇದರ ಬಹುತೇಕ ಕಥೆಗಳು ಬಂದೂಕು ಹಿಡಿವ ಯೋಧರ ಕಥೆಗಳೇ ಆಗಿದೆ. ಆದರೂ ಇಲ್ಲಿರುವುದು ಯುದ್ಧ ಭೂಮಿಯಲ್ಲಿ ಬಂದೂಕು ಹಾಗೂ ಗುಂಡು ಹೇಳುವ ರಕ್ತಸಿಕ್ತ ಸಂಗ್ರಾಮದ ಕಥನಗಳಲ್ಲ. ಲೇಖಕರೇ ಹೇಳಿದಂತೆ ಇದು 'ಬಂದೂಕು ಹಿಡಿದವರ ನಾಡಿಮಿಡಿತ'ದ ಸಂಗತಿಗಳು. ಇಲ್ಲಿ ಒಟ್ಟು  ಹನ್ನೆರಡು ಅಂತಹ ಯೋಧರ ಅಂತರಂಗದ ಕಥೆಗಳಿವೆ. 



'ಕೂರ್ಗ್ ರೆಜಿಮೆಂಟ್' ಎನ್ನುವ ಒಂದು ಕಥೆಯಿದೆ. ಈ ಸಂಕಲನದ ಮೊದಲ ಕಥೆಯೇ ಇದು. ಬಹಳ ಇಷ್ಟವಾಯಿತು."  ಬಹುಶಃ ಊರಿನವರಿಗೆ ಒಬ್ಬ ಹೀರೋ ಬೇಕಾಗಿತ್ತು, ಭಾಷಣದಲ್ಲಿ ಪ್ರಸ್ತಾಪಿಸಲು, ರಸ್ತೆಗೆ ಹೆಸರಿಡಲು! ಮುಡಿಗೇರಿಸಿದ್ದ ಹೂವಿನಲ್ಲಿಯೇ ಸಂತೃಪ್ತಿ ಪಟ್ಟುಕೊಳ್ಳುವ ಹೆಣ್ಣಿಗೆ ಆ ರೀತಿಯ ಆಸೆಗಳಿರಲಿಲ್ಲ.! ". ಯೋಧನ ಬಲಿದಾನದಷ್ಟೇ ತೀವ್ರವಾಗಿ ತಾಯಿಯೊಬ್ಬಳ ಮೌನ ಇಲ್ಲಿ ಓದುಗನನ್ನು ಬಹುವಾಗಿ ಕಾಡುತ್ತದೆ. ಇನ್ನೂ ಒಂದು ನೇರವಾಗಿ ತಿವಿಯುವಂತಹ ಸಾಲು ಇದೇ ಕಥೆಯಲ್ಲಿ ಇದೆ, ಅದೇನೆಂದರೆ " ಜನರೆಲ್ಲರೂ ಸಾವನ್ನು ಆಧಾರವಿಲ್ಲದೆ ದೂಷಿಸುತ್ತಾರೆ, ಆದರೆ ಜೀವನ ಕೊಡುವಷ್ಟು ಹಿಂಸೆ ಸಾವು ಕೊಡುವುದಿಲ್ಲ..! ". ಯೋಧನ ಮನೆಯ ಹೆಣ್ಣು ಮಕ್ಕಳಿಗಿಂತ ಬೇರೆ ಯಾರಿಗೆ ತಾನೇ ಈ ಸಾಲಿನ ಅರ್ಥ ಹೆಚ್ಚು ಸ್ಪಷ್ಟವಾಗಿ ಗೊತ್ತಿರಲು ಸಾಧ್ಯ. 


' ಗಣಿ ಬೋಪಣ್ಣ' ಕಥೆಯ ಕೊನೆಯಲ್ಲಿ ಬೋಪಣ್ಣನ ದೇಹ ತಣ್ಣಗಾದ ನಂತರ, ಒಂದು ಸಾವಿರ ಜನರಷ್ಟು ಸೇರಿದ್ದ ಆ ಸಾವಿನ ಮನೆಯಲ್ಲಿ ಹಲವಾರು ಬಿಳಿ ಸೀರೆಗಳ ನಡುವೆ ಗುಲಾಬಿ ಟೀಚರನ್ನೂ ಎಲ್ಲೋ ದೂರದಲ್ಲಿ ಕಂಡಂತಾಯಿತು ಎನ್ನುವ ಒಂದು ಸಾಲು ಓದುವಾಗ ಇಡೀ ಕಥೆಯನ್ನು ಸಂಪೂರ್ಣವಾಗಿ ಆವರಿಸಿರುವ ಬೋಪಣ್ಣನಿಗಿಂತಲೂ ಹೆಚ್ಚು ಮಾತಾಡದ, ಜಾಸ್ತಿ ಕಾಣಿಸದ ಈ ಗುಲಾಬಿ ಟೀಚರೇ ಇಲ್ಲಿ ಹೆಚ್ಚು ಕಾಡಲು ಶುರು ಮಾಡುತ್ತಾರೆ. 


' ಒಂದು ಬೊಗಸೆ ಮಣ್ಣು' ಕಥೆಯಲ್ಲಿ ಪಾಕಿಸ್ತಾನದ ಹಳ್ಳಿಯೊಂದನ್ನು ವಶಪಡಿಸಿಕೊಂಡು ಅಲ್ಲಿಯ ಗದ್ದೆ ಏರಿಯ ಮೇಲೆ ಕುಳಿತುಕೊಂಡು " After 24 years,Finally I am Home.." ಎಂದು ಬಿಕ್ಕಳಿಸುವ ಭಾರತೀಯ ಸೇನೆಯ ಕರ್ನಲ್ ಸೋಧಿಯ ಚಿತ್ರ ಕಣ್ಣಿಗೆ ಕಟ್ಟುವಂತಿದೆ. ತನ್ನ ಬಾಲ್ಯವನ್ನು ತನ್ನ ಹೆತ್ತವರನ್ನು ನೆನೆದು ಆ ಮಣ್ಣಿನಲ್ಲಿ ಭಾವುಕನಾಗುವ ಸೋಧಿಗೆ, ಕ್ಯಾಪ್ಟನ್ ದೇವಯ್ಯ " ಸಾರ್..ನಿಮಗೆ ಈ ಮಲ್ಹಾನದ ಮಣ್ಣಿನ ಮೇಲೆ ಇಷ್ಟೊಂದು ಮೋಹ ಯಾಕೆ? ಕೊನೆಗೊಮ್ಮೆ  ಹೋಗುವಾಗ ನಾವು ಎಲ್ಲವನ್ನೂ ಇಲ್ಲಿಯೇ ಬಿಟ್ಟು ಹೋಗಬೇಕಲ್ಲವೇ.." ಎಂದು ಸಮಾಧಾನ ಹೇಳುತ್ತಾನೆ. ಆ ಮಾತಿಗೆ ಕರ್ನಲ್ ಸೋಧಿ ಹೇಳುವ ಮಾತುಗಳು ಇನ್ನಷ್ಟು ಮಾರ್ಮಿಕವಾಗಿದೆ, ಸೋಧಿ ಹೇಳುತ್ತಾನೆ "  ಮಣ್ಣನ್ನು ಯಾರು ಹೋಗುವಾಗ ತೆಗೆದುಕೊಂಡು ಹೋಗುವುದಿಲ್ಲ ದೇವಯ್ಯ, ಆದರೆ ನನ್ನ ಹಿಂದಿನ ಹತ್ತು ತಲೆಮಾರು ಇದೇ ಮಣ್ಣಲ್ಲಿ ಮಣ್ಣಾದಂತೆ ಬೂದಿಯಾಗಿ ಐಕ್ಯವಾಗುವ ಭಾಗ್ಯ ನನಗಿಲ್ಲವಲ್ಲ ಎಂಬ ದುಃಖವಷ್ಟೇ ನನ್ನದು .. ". ಸೈನಿಕನಿಗೆ ತನ್ನ ಮಣ್ಣಿನಲ್ಲಿ ಮಣ್ಣಾಗುವ ಭಾಗ್ಯಕ್ಕಿಂತಲೂ ದೊಡ್ಡ ಭಾಗ್ಯ ಇನ್ನಾವುದಿದೆ ಅಲ್ಲವೇ. 


'ಮುತ್ತಿನಹಾರ' ಕಥೆಯ ಸಪ್ನಾ ಮತ್ತು ಉತ್ತಪ್ಪನ ಒಂದು ನವಿರಾದ ಪ್ರೇಮ ಕೊರಳ ಮುತ್ತಿನಹಾರದಷ್ಟೇ ಸುಂದರ. ನೇರ ಮಾತಿನಲ್ಲಿರುವ ಬಹಳಷ್ಟು ಪ್ರೀತಿ ಇಲ್ಲಿ ಇಷ್ಟವಾಗುತ್ತದೆ. ಶಿಕಾರಿಯ ಕಥೆಗಳು ನಿಮ್ಮನ್ನು ಖುಷಿ ಪಡಿಸುತ್ತದೆ ಎಂದಾದರೆ ಇಲ್ಲಿ ಅದಕ್ಕೆಂದೇ ಒಂದು ಪ್ರತ್ಯೇಕವಾದ ಕಥೆ ಇದೆ. 'ಬೊಳ್ಳು' ಎನ್ನುವ ಕಥೆಯನ್ನು ಇಲ್ಲಿ ಎರಡು ಪುಟ್ಟ ಭಾಗಗಳಲ್ಲಿ ಲೇಖಕರು ನೀಡಿದ್ದಾರೆ. ಬೆಳ್ಳಿಯಪ್ಪ ಹಾಗೂ ಅವನ ಬಿಳಿಯ ನಾಯಿ ಬೊಳ್ಳುವಿನ ಕಥೆ ಇದು. ಬೆಳ್ಳಿಯಪ್ಪನ ತೋಟ ಹಾಳು ಮಾಡುವ ಚತುರ ಕಾಡು ಹಂದಿಯೊಂದು ಇಲ್ಲಿದೆ. ಅದರ ಬೇಟೆಗೆ ಬೆಳ್ಳಿಯಪ್ಪ ಶತಪ್ರಯತ್ನ ಮಾಡುವುದೇ ಇದರ ಕಥೆ. ಇಲ್ಲಿರುವ ಶಿಕಾರಿಗಿಂತಲೂ ಹಂದಿ ಎಂಬ ಕಾಡು ಪ್ರಾಣಿ ಎಷ್ಟು ಸೂಕ್ಷ್ಮ ಹಾಗೂ ಅವುಗಳು ಹೇಗೆ ಸುಲಭವಾಗಿ ಮನುಷ್ಯನಿಂದ ತಪ್ಪಿಸಿಕೊಳ್ಳುವ ಕಲೆಯನ್ನು ಸಿದ್ಧಿಸಿಕೊಂಡಿವೆ ಎಂಬುದನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ. ಈ ಕಥೆಯಲ್ಲಿರುವ ' ತಾಳ್ಮೆಗಿಂತ ಹರಿತವಾದ ಆಯುಧ ಮತ್ತೊಂದಿಲ್ಲ' ಎನ್ನುವ ಸಾಲು ಹೊಂಚಿನ ಶಿಕಾರಿಗೆ ಮಾತ್ರವಲ್ಲ ನಮ್ಮ ನಿಮ್ಮೆಲ್ಲರ ಬದುಕಿಗೂ ಬಹಳಷ್ಟು ಬೇಕಾದದ್ದೇ. 


ಇಲ್ಲಿರುವ ಎಲ್ಲಾ ಕಥೆಗಳು ಹಾಗೇ ಓದಿಸಿಕೊಂಡು ಹೋಗುತ್ತವೆ, ಹೌದು  ಮಕ್ಕಳ ಚಡ್ಡಿ ಜೇಬಿನಲ್ಲಿರುವ ಮಿಠಾಯಿಯಂತೆ ಒಂದೊಂದಾಗಿ ಬಹಳ ಬೇಗನೆ ಎಲ್ಲವೂ ಖಾಲಿಯಾಗಿ ಬಿಡುತ್ತದೆ. ಈ ಕೂರ್ಗ್ ರೆಜಿಮೆಂಟ್ ನಲ್ಲಿ ಸಿಖ್ ರೆಜಿಮೆಂಟ್, ಮಡ್ರಾಸ್ ರೆಜಿಮೆಂಟ್ ಕಥೆಗಳೂ ಒಂದೊಂದು ಚಿಕ್ಕದಾಗಿ ಸೇರಿಕೊಂಡಿದೆ. ಕರಿ ಕಾಫಿ ಕಾಸುವ ಅಮ್ಮ, ಅದರದ್ದೊಂದು ಕೂರ್ಗಿನ ನೆಲದ್ದೇ ಘಮ, ಆಕಾಶ ಚುಂಬಿಸುವುದಕ್ಕಾಗಿ ಹಠಕ್ಕೆ ಬಿದ್ದು  ಬೆಳೆದು ನಿಂತ ಉದ್ದನೆಯ ಮರಗಳು, ಅದನ್ನು ಪ್ರೇಯಸಿಯಂತೆ ಬಿಗಿದಪ್ಪಿಕೊಂಡು ಹಾಗೇ ಹರಡಿಕೊಂಡು ಬೆಳೆದ ಕರಿಮೆಣಸಿನ ಬಳ್ಳಿಗಳು, ಬೆಳೆದು ನಿಂತ ಕಾಫಿ ಗಿಡಗಳ ರೆಕ್ಕೆಗಳ ನಡುವೆ ನೆನಪಾಗುವ ಸವೆದು ಹೋಗಿರುವ ಬಾಲ್ಯದ ದಾರಿಗಳು, ತಮ್ಮಿಷ್ಟದ ಹಾಡು ಹಾಡುತ್ತಾ ಅರ್ಧಂಬರ್ಧ ಹಣ್ಣು ಕಚ್ಚಿ ತಿನ್ನುವ ಪೇರಳೆ ಮರದ ಹಸಿರು ಗಿಣಿಗಳು, ಕಾಡುಹಂದಿ ಬೆಚ್ಚಗೆ ಅಡಗಿಕೊಳ್ಳುವ ಸೀಗೆ ಬಲ್ಲೆಗಳು, ಗದ್ದೆ ಏರುವ ವರ್ಷ ಋತುವಿನ ಮೀನುಗಳು, ಬಾಯಲ್ಲಿ ನೀರೂರಿಸುವ ಕಾಡುಕೋಳಿಗಳ ಹಿಂಡು, ಚಪ್ಪರಿಸಿಕೊಂಡು ತಿನ್ನುವ ಆ ಹಂದಿ ಮಾಂಸ ಮತ್ತು ಕಡುಬು, ಜೊತೆಗೆ  ಯಥೇಚ್ಛವಾದ ಭತ್ತದ ಸರಾಯಿ, ಹೊಗೆಯಾಡುವ ಕೇಪಿನ ಕೋವಿ, ನಶೆ ಏರಿಸುವ ಮಿಲಿಟ್ರಿಯ ಮಾರ್ಫಿಯಸ್ ಬ್ರಾಂಡಿ, ಕೈಯಲ್ಲಿ ತಟ್ಟಿ ಕೆಂಡದಲ್ಲಿ ಉಬ್ಬಿಸುವ ರೊಟ್ಟಿ, ಅದಕ್ಕೆ ಕಾಡು ಕುರಿಯದ್ದೇ ರುಚಿಯಾದ ಸಾರು, ಪ್ರತಿಷ್ಠೆಯ ಹುಲಿ ಬೇಟೆ, ಉಪಟಳ ಹೆಚ್ಚಾದಾಗ ಹಂದಿಯ ಶಿಕಾರಿ, ಮಳೆಗಾಲಕ್ಕೆಂದು ಕೊಪ್ಪರಿಗೆ ಪೂರ್ತಿ ಒಣಮಾಂಸದ ಶೇಖರಣೆ, ಸಂಭ್ರಮದ ಹುತ್ತರಿ, ಔಷಧಿಯ ಗುಣದ ಸೊಪ್ಪಿನ ಕಷಾಯ, ಆವಾಗವಾಗ ಬೈನೆ ಮರದ ಶೇಂದಿ, ತೋಟಗಳಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುವ ಗಂಡ ಹೆಂಡಿರ 'ಕುಡಿ' ಸಂಸಾರ, ನದಿಗಿಂತಲೂ ಹೆಚ್ಚಾಗಿ ತಾಯಿಯಾಗಿಯೂ ದೇವರಾಗಿಯೂ ಗೋಚರಿಸುವ ಮತ್ತು ಆರಾಧಿಸಲ್ಪಡುವ ಜೀವನದಿ ಕಾವೇರಮ್ಮ, ಕಥೆಗಳಲ್ಲಿ ಬಂದು ಹೋಗುವ ಪೊನ್ನಂಪೇಟೆ, ಸುಂಟಿಕೊಪ್ಪ,  ಕೋಳಿಬೈಲು, ಮೂರ್ನಾಡು, ಮಡಿಕೇರಿ ಮತ್ತು ಭಾಗಮಂಡಲಗಳು, ಗಡಿಯಲ್ಲಿದ್ದರೂ  ಸೈನಿಕನದ್ದೊಂದು ತನ್ನ ಊರಿನದ್ದೇ  ಧ್ಯಾನ, ಮನೆಯ ಹೆಣ್ಣು ಮಕ್ಕಳದ್ದೊಂದು ಅನುದಿನವೂ ತಪಸ್ಸಿನಂತಹ ಮೌನ, ಭಾವನೆಗಳಿಂದಲ್ಲೇ ಭಾರವಾಗೊಳ್ಳುವ ನೀಲಿ ಬಣ್ಣದ ಆ ಅಂಚೆಯ ಕಾಗದಗಳು, ಊರೂರು ಅಲೆಯುವ ಸೈನಿಕರ ಕಪ್ಪು ಬಣ್ಣದ ಟ್ರಂಕು, ಊರಿನ ರಸ್ತೆಯಲ್ಲಿ ಸಾಗುವ ಹೆಮ್ಮೆಯ ಹಸಿರು ಬಣ್ಣದ್ದೇ ಜೀಪು.. ಒಟ್ಟಿನಲ್ಲಿ ಪ್ರತಿಯೊಂದು ಕಥೆಯಲ್ಲೂ ಸಮೃದ್ಧವಾಗುತ್ತಾ ಹೋಗುವ ಕೊಡಗು ಓದುಗನಿಗೆ ಕೊಡಗಿನ ತಂಪು, ಮತ್ತು ರಸಭರಿತ ಕಿತ್ತಳೆಯಷ್ಟೇ ಇಷ್ಟವಾಗುತ್ತದೆ ಇಲ್ಲಿ.

 

ಅಬ್ದುಲ್ ರಶೀದರ ಕೊಡಗಿನದ್ದೇ ಫ್ಲೇವರಿನ 'ಹೊತ್ತು ಗೊತ್ತಿಲ್ಲದ ಕಥೆಗಳು' ಓದಿದ ನಂತರ ಕೋಳಿಬೈಲು ಕುಶ್ವಂತರ ಈ ಕೃತಿ ಮತ್ತೊಮ್ಮೆ ಕೊಡಗಿನ ಇನ್ನೊಂದು ಆಯಾಮದ ಹೂರಣವನ್ನು ಪುಷ್ಕಳವಾಗಿಯೇ ಉಣಬಡಿಸಿದೆ ನನಗೆ. ಮಡಿಕೇರಿ ಮಂಜಿನಂತೆ ಬರೀ ತಂಪಿನ ಕಥೆಗಳೇ ಇರದಿದ್ದರೂ ಇಲ್ಲಿಯ ಹೂ ಬಿಸಿಲಿನ ಕೋಲು ಬಹಳಷ್ಟು ಹಿತವಾಗುತ್ತದೆ. ಇಲ್ಲಿ ಲೇಖಕರು ಕಥೆಯ ಎಲ್ಲಾ ಸಾಲುಗಳನ್ನು ಬಹಳ ಚಂದವಾಗಿ ಪೋಣಿಸಿದ್ದಾರೆ. ಅವರ ಬರಹದ ಶೈಲಿ ಹಾಗೂ ಆ ಧಾಟಿಯೇ ಅವರ ಅನುಭವದ ಹಾಗೂ ಕಲ್ಪನೆಯ ಕಥೆಗಳನ್ನು ಇಲ್ಲಿ ಇನ್ನಷ್ಟು ಅಂದಗೊಳಿಸಿದ್ದು ಎಂದು ನನಗೆ ಅನಿಸುತ್ತದೆ.


ಕಥೆಯಂತೆಯೇ ಅವರ ಕಥೆಯ ಎಲ್ಲಾ ಪಾತ್ರಗಳು ಒಂದಕ್ಕೊಂದು ಬಹಳ ವಿಭಿನ್ನವಾಗಿದೆ, ಹಾಗಾಗಿ ಪಾತ್ರ ಪೋಷಣೆಯಲ್ಲಿ ಬಹಳಷ್ಟು ವೈವಿಧ್ಯತೆ ಎದ್ದು ಕಾಣುತ್ತದೆ. ಯೋಧನ ಮನೆಯ ಹೆಣ್ಣು ಮಕ್ಕಳೊಳಗಿನ ಹೇಳಲಾಗದ ನೋವುಗಳನ್ನು,ದೇಶಕ್ಕಾಗಿ ತನ್ನ ಇಡೀ ಯೌವನವನ್ನು ಅಷ್ಟುದ್ದದ ಗಡಿಯಲ್ಲಿ ಕಳೆವ ಸೈನಿಕನಿಗೆ ತನ್ನದೇ ಊರಿನಲ್ಲಿ ತನ್ನ ಜಾಗದ ಪಾಲಿನಲ್ಲಿ ಸ್ವತಃ ಮನೆಯವರಿಂದಲೇ, ಕುಟುಂಬದವರಿಂದಲೇ ತುಂಡು ಭೂಮಿಗಾಗಿ ನಿಜ ಜೀವನದಲ್ಲಿ ಆಗುವಂತಹ ಕೆಲವೊಂದಿಷ್ಟು ಬಯಲಾಗದ  ಅನ್ಯಾಯಗಳನ್ನು, ಸರಿಯಾದ ಕೃಷಿ ಭೂಮಿಯೇ ಸಿಗದ ಅಸಹಾಯಕ ಪರಿಸ್ಥಿತಿಗಳನ್ನು ಹಾಗೇ ಓದುಗನೆದುರು ಲೇಖಕರು ಇಲ್ಲಿ ತೆರೆದಿಟ್ಟಿದ್ದಾರೆ. ಮೌನ ಅತಿಯಾದಷ್ಟು ಕಾಡುವಿಕೆ ಕೂಡ ಹೆಚ್ಚೇ. ಎಷ್ಟಾದರೂ ಯೋಧರ ಕಥೆಗಳಲ್ಲವೇ. ಅವರುಗಳದ್ದೇ ಕಥೆ ಹೇಳಲ್ಪಡುವ ಯಾವುದೇ ತುಂಬಿದ ಸಭೆಯಲ್ಲಿ ಮೌನಕ್ಕೆ ಮತ್ತು ಕಂಬನಿಗೆ ಎಂದಿಗೂ ಅಗ್ರಸಾನವೇ ಮತ್ತು ಸಹಜವಾಗಿ ಇರುತ್ತದೆ ಕೂಡ. ಅವೆಲ್ಲವನ್ನೂ ಇಷ್ಟಿಷ್ಟೇ ಹೊಂದಿ ಇನ್ನಿತರ ಸ್ವಾರಸ್ಯಕರ  ಸಂಗತಿಗಳೊಂದಿಗೆ ಓದಿನ ಸುಖವಾಗುವ  ಇದು ಕೊಡಗಿನ ಯೋಧರದ್ದೊಂದು ನಾಡಿಮಿಡಿತದ ಕಥೆ. ಸ್ವಾದದ ಫಿಲ್ಟರ್ ಕಾಫಿಯಂತೆಯೇ ಇಷ್ಟವಾಗುತ್ತದೆ Kushvanth Kolibailu  ಕುಶ್ವಂತ್ ಕೋಳಿಬೈಲು ಅವರ ಈ 'ಕೂರ್ಗ್ ರೆಜಿಮೆಂಟ್'. 



#ಕೂರ್ಗ್_ರೆಜಿಮೆಂಟ್  |  ಕಥಾ ಸಂಕಲನ 

ಲೇಖಕರು - ಮೇಜರ್ l ಡಾ l ಕುಶ್ವಂತ್ ಕೋಳಿಬೈಲು (ನಿ) 

ಪ್ರಕಾಶಕರು - ಮೈತ್ರಿ ಪ್ರಕಾಶನ,ಬೆಂಗಳೂರು. 

ಪ್ರಥಮ ಮುದ್ರಣ - 

ಪುಟಗಳ ಸಂಖ್ಯೆ- 88

ಬೆಲೆ - 130 Rs. 


ಪುಸ್ತಕಗಳು 

Ab Pacchu

(https://phalgunikadeyavanu.blogspot.com)

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..