ಘಾಚರ್ ಘೋಚರ್ | ವಿವೇಕ ಶಾನಭಾಗ

                   ಘಾಚರ್ ಘೋಚರ್ l ವಿವೇಕ ಶಾನಭಾಗ




ಒಂದು ನೀಳ್ಗತೆ ಹಾಗೂ ಐದು ಸಣ್ಣ ಸಣ್ಣ ಕತೆಗಳ ಗೊಂಚಲು ಈ ಘಾಚರ್ ಘೋಚರ್. ಇದರಲ್ಲಿ 'ಘಾಚರ್ ಘೋಚರ್ ' ಎಂಬ ದೊಡ್ಡ ಕತೆಯೇ ಈ ಸಂಕಲನದ ಪ್ರಮುಖ ಆಕರ್ಷಣೆ ಹಾಗೂ ಈ ಪುಸ್ತಕದ್ದೊಂದು ನಿಜವಾದ ಓದಿನ ಸುಖ. 


ಘಾಚರ್ ಘೋಚರ್ ಎಂಬ ಕತೆಯ ಓದು ಅದೆಂತಹ ಮಜಾ ಕೊಡುತ್ತದೆ ಎಂದರೆ ಇದರಲ್ಲಿರುವ ವಿಭಿನ್ನ ವ್ಯಕ್ತಿತ್ವಗಳ ಮುಗಿಯದ ಹತ್ತಾರು ತೊಳಲಾಟಗಳ ನಡುವೆಯೂ, ಒಂದು ಹಾಸ್ಯದ ಹೊನಲು ಮಾತ್ರ ನಿರಂತರವಾಗಿ ಅದರಷ್ಟಕ್ಕೆ ತುಂಬಿ  ಹರಿಯುತ್ತಾ ಓದಿನ ಉದ್ದಕ್ಕೂ ಮನಸ್ಸಿಗೆ ಸಿಕ್ಕಾಪಟ್ಟೆ ಉಲ್ಲಾಸ ತುಂಬಿ ಬಿಡುತ್ತದೆ. ಅದು ಕತೆಯೊಳಗೆ ಸುಪ್ತವಾಗಿದ್ದರೂ ಗುಪ್ತಗಾಮಿನಿಯಾಗಲು ಮನಸ್ಸು ಮಾಡದ ಅದರದ್ದೊಂದು ಹರಿವಿನಿಂದಾಗಿ, ಪಾತ್ರಗಳು ಮಾಡಿಕೊಳ್ಳುವ ಪಜೀತಿಗಳಿಂದಾಗಿ ಓದುಗ ಈ ಕತೆಯ ಅಲ್ಲಲ್ಲಿ ಹಾಗೇ ನಗೆಗಡಲಿನಲ್ಲಿ ತೇಲಿಬಿಡುತ್ತಾನೆ. 


ಸಾಮಾನ್ಯವಾಗಿ ಕುಟುಂಬವೊಂದರ ಒಳಗೆ ನಡೆಯುವ, ಅಲ್ಲಿಯ ಪಾತ್ರಗಳ ನಡುವೆ ಮನೆಯೊಳಗಷ್ಟೇ ತೆರೆದುಕೊಳ್ಳುವ, ಮೌನದೊಳಗೇ ಇದ್ದುಕೊಂಡು ಹರಿತವಾದ ಕತ್ತಿ ಮಸೆಯುವಂತಹ ಒಂದಿಷ್ಟು ಮನಸ್ಥಿತಿಗಳ ಕತೆಯೇ ಈ ಘಾಚರ್ ಘೋಚರ್. ಈ ಕತೆಯ ಹೆಸರೇ ತುಂಬಾ ವಿಭಿನ್ನವಾಗಿದೆ ಹಾಗೂ ಅಷ್ಟೇ ವಿಚಿತ್ರವಾಗಿದೆ. ಈ ಹೆಸರೇ ಇದಕ್ಕೆ  ಏಕೆ ಎನ್ನುವುದಕ್ಕೆ ಈ ಕತೆಯೊಳಗೆಯೇ ಒಂದು ಕತೆಯಿದೆ. 


ಇದು ಸಂಪೂರ್ಣವಾಗಿ ನಗರ ಭಾಗದ ಕೂಡು ಕುಟುಂಬವೊಂದರಲ್ಲಿ ಜರಗುವ ಕತೆ. ಒಂದು ರೀತಿಯಲ್ಲಿ ಎಲ್ಲರ ಮನೆಯ ದೋಸೆಯಂತಹ ಕತೆ. ಲೇಖಕನೂ ಕತೆಯೊಳಗಿನ ಒಂದು ಪಾತ್ರವಾಗಿ ಇಲ್ಲಿ ಪ್ರವೇಶ ಪಡೆಯುತ್ತಾನೆ. ಆದರೆ ಗಮ್ಮತ್ ಏನೆಂದರೆ ಲೇಖಕ ತನ್ನನ್ನು ತಾನು ಒಳ್ಳೆಯವನು ಎಂದು ತೋರಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು  ಒಂಚೂರು ಮಾಡದೇ ಇದ್ದುದಕ್ಕೆಯೇ ಇಲ್ಲಿನ ಓದು ಅತೀವ ಕಚಗುಳಿ ಇಡುತ್ತಾ ಹೋಗುವುದು. ಇತರ ಪಾತ್ರಗಳೊಂದಿಗೆ ಅವನು ಅವನನ್ನೇ ಗೇಲಿ ಮಾಡಲು ಇಳಿಯುತ್ತಾನೆ. ಇಲ್ಲಿಯ ಪ್ರತೀ ಪಾತ್ರವೂ ಅದರದ್ದೊಂದು ದೌರ್ಬಲ್ಯಗಳಿಂದಲೇ ಇಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆಯುತ್ತದೆ. ಯಾವುದೇ ವ್ಯಕ್ತಿಯೊಬ್ಬನ ನಿಜ ರೂಪ ಹೊರಗೆ ಬರುವುದೇ ಹೆಚ್ಚಾಗಿ ಅವನ  ಮನೆಯಲ್ಲಿ ಮತ್ತು ಮನೆಯ ಸದಸ್ಯರ ಮುಂದೆ ಎಂಬುವುದು ಬಹಳಷ್ಟು ನಿಜ. ಅದನ್ನಿಲ್ಲಿ ಬಹಳ ಸೊಗಸಾಗಿ ಚಿತ್ರಿಸಲಾಗಿದೆ. 


ಮಧ್ಯಮ ವರ್ಗದ ಕುಟುಂಬವೊಂದು ತನ್ನ ಮುಂದಿನ ಭವಿಷ್ಯಕ್ಕಾಗಿ ಮಾಡುವ ಉಳಿತಾಯ ಎಂಬ ಆರಂಭದ ಸರ್ಕಸ್, ಒಮ್ಮೆಲೇ ಇದ್ದಕ್ಕಿದ್ದಂತೆ ಬರುವ ಅಪಾರವಾದ ಶ್ರೀಮಂತಿಕೆ, ಚಿಕ್ಕಂದಿನಿಂದಲೂ ಶಿಸ್ತಿನ ಮನುಷ್ಯ ಆಗಿರುವ ಅಪ್ಪ, ಅಮ್ಮನ ಅಡುಗೆಮನೆ ಎಂಬ ಸಾಮ್ರಾಜ್ಯ, ಗಂಡನೊಡನೆ ಪೆಟ್ಟು ಲಡಾಯಿ ಮಾಡಿಕೊಂಡು ತವರು ಮನೆಯಲ್ಲಿಯೇ ಶಾಶ್ವತವಾಗಿ ಜಂಡಾ ಹೂಡಿರುವ ಮನೆಯ ಮಗಳು, ಎಲ್ಲರಿಗಿಂತ ಹೆಚ್ಚು ದುಡಿವ ಆದರೆ ಇನ್ನೂ ಮದುವೆಯಾಗದ ಚಿಕ್ಕಪ್ಪ, ಜವಾಬ್ದಾರಿ ಇಲ್ಲದ ಅವನೊಬ್ಬ ಮಗ ಮತ್ತು ಎಲ್ಲರಿಗಿಂತ ಹೆಚ್ಚು ಸ್ವಾಭಿಮಾನಿಯಾಗಿರುವ ಅವನ ಶ್ರೀಮತಿ... ಇವರುಗಳ ಮಾತಿನ ವಾಗ್ಯುದ್ಧ ಹಾಗೂ ಶೀತಲ ಸಮರವೇ ಇದರದ್ದೊಂದು ಒಟ್ಟಾರೆ ಕತೆ. ಮನೆಯಲ್ಲಿ ಆಗುವ ನಿರಂತರ ಇರುವೆಗಳ ದಾಳಿಯಿಂದ ಹಿಡಿದು ಅತೀ ಸಣ್ಣ ಸಣ್ಣ ವಿವರಗಳನ್ನು ಕೂಡ ಸವಿವರವಾಗಿ ಇಲ್ಲಿ ಮೂಡಿಸಲಾಗಿದೆ. ಈ ಕತೆ ಇಂಗ್ಲಿಷಿನಲ್ಲಿ ಕಾದಂಬರಿಯಾಗಿ ಮೂಡಿ ಬಂದು ಅಪಾರವಾದ ಜನಮನ್ನಣೆ ಕೂಡ ಗಳಿಸಿದೆಯಂತೆ. ಬಹಳ ಇಷ್ಟವಾಯಿತು. 


ಉಳಿದ ಐದು ಸಣ್ಣ ಕತೆಗಳಲ್ಲಿ 'ಸುಧೀರನ ತಾಯಿ' ಕತೆಯ ಸರೋಜಿನಿ ಒಂದಿಷ್ಟು ಕಾಡುತ್ತಾಳೆ. ಆ ಕತೆ ಚೆನ್ನಾಗಿದೆ. 'ವಿಚಿತ್ರ ಕತೆ' ಎಂಬ ಕತೆಯಲ್ಲಿ ಆಗುವ ಅವಾಂತರಕ್ಕೆ ಅದರಲ್ಲೂ ಅದರ ಪಾತ್ರವೊಂದು ಮಾಡಿಕೊಳ್ಳುವ ಕಿತಾಪತಿಗಳಿಗೆ, ಹತಾಶೆಗಳಿಗೆ ನಗು ಬರದೇ ಇರದು. 'ನಿರ್ವಾಣ ', 'ಕೋಳಿ ಕೇಳಿ ಮಸಾಲೆ', 'ರಿಸ್ಕ್ ತಗೊಂಡು' ಕತೆಗಳು ಸಾಧಾರಣವಾಗಿದ್ದು ಅಷ್ಟೇನು ಓದಿನ ಸುಖವನ್ನು ಓದಗಿಸದಿದ್ದರೂ ಘಾಚರ್ ಘೋಚರ್ ಎಂಬ ಕತೆ ಒಂದೇ, ಅದೆಲ್ಲವನ್ನೂ ನೆನಪಿನಲ್ಲಿ ಇರದಂತೆ ಮಾಡಿ ಬಿಡುತ್ತದೆ. ವಿವೇಕ ಶಾನಭಾಗರ ಈ ಕೃತಿ, ಇದರೊಳಗಿನ 'ಘಾಚರ್ ಘೋಚರ್'  ಯಾರಿಗೆ ಆಗಲಿ ಇಷ್ಟ ಆಗಿಯೇ ಆಗುತ್ತದೆ. 



ಘಾಚರ್ ಘೋಚರ್ |  ಕಥಾ ಸಂಕಲನ 

ಲೇಖಕರು - ವಿವೇಕ ಶಾನಭಾಗ

ಪ್ರಕಾಶಕರು - ಅಕ್ಷರ ಪ್ರಕಾಶನ ಹೆಗ್ಗೋಡು,ಸಾಗರ.

ಪ್ರಥಮ ಮುದ್ರಣ - 2013

ಪುಟಗಳ ಸಂಖ್ಯೆ- 144

ಬೆಲೆ - 155 Rs. 


ಪುಸ್ತಕಗಳು 

ಪಚ್ಚು ಕುಟ್ಟಿದಪಲ್ಕೆ

(https://phalgunikadeyavanu.blogspot.com)

Comments

Popular posts from this blog

VIKINGS - S06E20

ಗಗನದ ಸೂರ್ಯ

ಪಯ್ಯನ ಪರಾಕ್ರಮ