ಬೆಟ್ಟದ ಹೆಜ್ಜೆಗಳು | ದಿನೇಶ್ ಹೊಳ್ಳ

 ಬೆಟ್ಟದ ಹೆಜ್ಜೆಗಳು |  ದಿನೇಶ್ ಹೊಳ್ಳ





" ಎಲೆಗಳೆಡೆಯಲವಿತಿದೆ ಹಣ್ಣು 

  ಹಣ್ಣಿನೊಳಗವಿತಿದೆ

  ನಾಳೆಯ ಮರ 

  ನಿನ್ನೆಯ ಚಿಗುರು 

  ನಾಳೆಯ ಬಾಗಿಲು 

  ನಡುವೆ ಒಂದಿಷ್ಟು ಹೆಜ್ಜೆಗಳು...." 


ಎಂದು ಕಾವ್ಯಾತ್ಮಕವಾಗಿಯು ಜೊತೆಗೆಯೇ ಬಹಳಷ್ಟು ಮಾರ್ಮಿಕವಾಗಿಯೂ ಹೇಳುವ ಲೇಖಕರು ಇಲ್ಲಿ ತಾವು ಸದಾ ಹೆಜ್ಜೆ ಹಾಕುವ ಬೆಟ್ಟದ ದಾರಿಯಲ್ಲಿ ನೇರವಾಗಿ ಕಂಡಿದ್ದನ್ನು,  ಒಂದಿಷ್ಟು ಕಲ್ಪಿಸಿಕೊಂಡಿದ್ದನ್ನು, ಸುತ್ತಲಿನ ಜಗತ್ತಿನಲ್ಲಿ ತಮಗೆ ಅನುದಿನವೂ ಕಾಡುವಂತಹದ್ದನ್ನು, ಸತತವಾಗಿ ಸತಾಯಿಸಿದ್ದನ್ನು, ಹೀಗೆ ಎಲ್ಲವನ್ನೂ ಒಟ್ಟು ಸೇರಿಸಿ ಅವುಗಳಿಗೊಂದು ಕತೆಯ ರೂಪ ಕೊಟ್ಟು, 'ಬೆಟ್ಟದ ಹೆಜ್ಜೆಗಳು' ಎಂಬ ಕಥಾ ಸಂಕಲನವನ್ನಾಗಿಸಿದ್ದಾರೆ. 


ಮುನ್ನುಡಿ, ಬೆನ್ನುಡಿ ಎಂಬ ಯಾವುದೇ ಕನ್ನಡಿಯಿಲ್ಲದೆ ಬಹಳಷ್ಟು ವರ್ಷಗಳ ಹಿಂದೆಯೇ ಚಾರ್ಮಾಡಿ ಘಾಟಿಯ ಬೆಟ್ಟವೊಂದರ ಹಸಿರ ತಂಪಲ್ಲಿ ಬಿಡುಗಡೆಗೊಂಡ ಎಂಟು ಪುಟ್ಟ ಪುಟ್ಟ ಕತೆಗಳ ಗೊಂಚಲು ಈ ಬೆಟ್ಟದ ಹೆಜ್ಜೆಗಳು. ಇದರ ಕತೆಗಳು ಕೂಡ ಬಹಳಷ್ಟು ಸಣ್ಣವೇ, ಒಂದು ಪೇಜಿನಲ್ಲಿಯೇ ಮುಗಿದು ಹೋಗುವಂತಹ ಕತೆಗಳು ಕೂಡ ಇದರಲ್ಲಿದೆ. ಹೆಚ್ಚು ಕಡಿಮೆ ಅರ್ಧ ಮುಕ್ಕಾಲು ಗಂಟೆಯೊಳಗೆಯೇ ಇಡೀ ಪುಸ್ತಕವನ್ನು ರಪ್ಪನೆ ಓದಿ ಮುಗಿಸಿ ಬಿಡಬಹುದು. ಸೇರು ಉಪ್ಪಿಟ್ಟು ಜೊತೆಗೆ ಚೊಂಬು ಕಾಫಿ ಇದ್ದರೆ ಚಂದ ಎಂಬಂತೆ ಎಲ್ಲವನ್ನೂ ಪುಷ್ಕಳವಾಗಿಯೇ ಬಾರಿಸುವವರಿಗೆ ಮಾತ್ರ ಇದು ಕ್ಷಣಾರ್ಧದಲ್ಲಿ ಮುಗಿದುಹೋಗುವ ಫಳಾರವೇ ಸರಿ. ಸ್ವಲ್ಪವೇ ಆದರೂ ಶುಚಿಯಾಗಿಯೂ ರುಚಿಯಾಗಿಯೂ ಹಾಗೇ ಅಚ್ಚುಕಟ್ಟಾಗಿಯೂ ಇದ್ದರೆ ಆದೀತು ಎನ್ನುವವರಿಗೆ ಇದು  ಖಂಡಿತವಾಗಿಯೂ ಅಷ್ಟೇನು ರುಚಿ ಭಂಗ ಮಾಡದು.


ಇಲ್ಲಿ ಲೇಖಕರ ಯಾವ ಎಲ್ಲಾ ಕತೆಗಳು ಹಳ್ಳಿಯ ಹಾಗೂ ಬೆಟ್ಟದ ಹಾದಿ ಹಿಡಿದಿದ್ದಾವೋ ಅವೆಲ್ಲವೂ ವೈಯಕ್ತಿಕವಾಗಿ ನನಗೆ ಓದಿನ ಸುಖವನ್ನು ಮೊಗೆ ಮೊಗೆದು ಬಡಿಸಿದೆ. ಮುಖಪುಟ ಮತ್ತು ರೇಖಾಚಿತ್ರಗಳು ಸ್ವತಃ ಕಲಾವಿದರಾಗಿರುವ ಲೇಖಕರ ಕುಂಚದಲ್ಲಿಯೇ ಬಹಳ ಚಂದವಾಗಿ ಮೂಡಿಬಂದಿದೆ; ಗೆರೆಗಳ ಬಗ್ಗೆ ಪ್ರೀತಿ ಇರುವವರಿಗೆ, ಅದರೊಳಗಿನ ಅವ್ಯಕ್ತ ಅರ್ಥವನ್ನು ಇಷ್ಟಪಟ್ಟೇ ಹುಡುಕುವವರಿಗೆ ಇದೂ ಕೂಡ ಒಂದೊಳ್ಳೆಯ ಅನುಭವವೇ ಸರಿ. 




'ಹುಲಿಬಲಿ' ಕತೆ ಮಾರ್ನೆಮಿಯ(ನವರಾತ್ರಿ) ಹುಲಿ ಕುಣಿತ ಹಾಗೂ ತಾಸೆಯ ಸದ್ದಿನೊಂದಿಗೆ ಆರಂಭಗೊಂಡರೂ ಕೊನೆಯಲ್ಲಿ ಬಲಿ ಹಾಕುವ ಹುಲಿಯೇ ಎದುರಿಗೆ ಕಾಣಿಸಿಕೊಂಡಾಗ, ಕತೆಯ ನಿರೂಪಣೆಯಲ್ಲಿ ಅಸ್ಪಷ್ಟವಾಗಿರುವ ಬಿಂದುಗಳನ್ನು ಊಹಿಸಿಕೊಂಡು, ಅವುಗಳನ್ನು ಒಂದೊಂದಾಗಿ ಜೋಡಿಸಿಕೊಂಡು ಆ ಮೂಲಕ ಕತೆಯನ್ನು ಮತ್ತಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಕ್ಕಾಗಿ ನಮ್ಮನ್ನೇ ಲೇಖಕರು ಇಲ್ಲಿ ಹಾಗೇ ಮುಂದೆ ತಳ್ಳಿ ಬಿಡುತ್ತಾರೆ. ಈ ಕತೆ ಚೆನ್ನಾಗಿದೆ. 


'ಬೆಟ್ಟದ ಹೆಜ್ಜೆಗಳು' ಕತೆ ಬೆಟ್ಟದ ತಪ್ಪಲಿನಲ್ಲಿ ನಡೆಯುವಂತಹದ್ದು. ಹಳ್ಳಿಯ ಮುಗ್ಧ ಜನರನ್ನು ಹಾಗೂ ಅವರು ಅರ್ಥ ಮಾಡಿಕೊಳ್ಳಲಾಗದ ಹೊರ ಜಗತ್ತಿನ ವಿದ್ಯಮಾನಗಳನ್ನು ಒಟ್ಟೊಟ್ಟಿಗೆ ನಮ್ಮೆದುರು ಇಟ್ಟು ಲೇಖಕರು ನಮ್ಮನ್ನು ಒಂದಿಷ್ಟು ಕಾಡಿಸುತ್ತಾರೆ. ಈ ಪೀಡನೆಯೂ ಚೆನ್ನಾಗಿದೆ. 


'ತುಕ್ರ' ಎನ್ನುವ ಒಂದು ಕತೆಯಿದೆ. ಹೆಚ್ಚು ಕಡಿಮೆ ಹಳ್ಳಿಯ ತೋಟದ ಪರಿಧಿಯೊಳಗೆ ನಡೆಯುವ ಕತೆ ಇದು. ಯಜಮಾನ ಹಾಗೂ ತೋಟದ ಆಳುಗಳ ನಡುವೆ ನಡೆಯುವ ಭಾವನಾತ್ಮಕ ತೋಳಲಾಟವನ್ನು ಬಹಳ ಚೆನ್ನಾಗಿ ಇಲ್ಲಿ ಕಟ್ಟಿಕೊಡಲಾಗಿದೆ. ನಿಜಕ್ಕೂ ಈ ಕತೆ ಬಹಳನೇ ಹಿಡಿಸಿತು. ಇಲ್ಲಿ ಬರುವ ತುಕ್ರ ಎನ್ನುವ ಒಂದು ಪಾತ್ರ ಕಾರಂತರ 'ಚೋಮನ ದುಡಿ'ಯಲ್ಲಿ ಅಸಹಾಯಕನಾಗಿ ದುಡಿ ಬಾರಿಸುತ್ತಲೇ ಕೊನೆಯಲ್ಲಿ ಪ್ರಾಣ ಬಿಡುವ ಕಾರಂತರ ಆ ಚೋಮನನ್ನೇ ಬಹಳಷ್ಟು ನೆನಪಿಸುತ್ತಾದರೂ, ಇದರ ಕತೆ ಮಾತ್ರ ಬೇರೆಯೇ ಆಗಿದೆ. ಜಾತಿ ಪದ್ಧತಿ, ಮೇಲು ಕೀಳು ಎಂಬುದರ ಕಲ್ಪನೆಗಳೇ ಇಲ್ಲದ ತುಕ್ರ ತಾನು ಮಾಡುವ ಕೆಲಸ ಹಾಗೂ  ಧಣಿಯಲ್ಲಿಯೇ ತನ್ನ ಪಾಲಿನ ದೇವರನ್ನು ಕಂಡವನು. ಅದಕ್ಕೆ ಚ್ಯುತಿ ಬರದಂತೆ ನಡೆಯುವುದೇ ತನ್ನ ಬದುಕಿನ ಧ್ಯೇಯ, ಹಾಗೂ ಅದರಲ್ಲಿಯೇ ತನ್ನ ಜೀವನದ ಪರಮ ಸುಖ ಇರುವುದು ಎಂದು ಬದುಕುವ ತುಕ್ರನಿಗೆ ಒಂದು ದಿನ ಅವನ ಸುತ್ತಲಿನ ಸಮಾಜ ಅದೆಷ್ಟು ವಿಭಿನ್ನವಾಗಿ ಕಾಣುತ್ತದೆ ಎಂದರೆ ಅವನೊಬ್ಬನೇ ಮಾನಸಿಕವಾಗಿ ತೀರಾ ಏಕಾಂಗಿಯಾಗಿ ಬಿಡುತ್ತಾನೆ. ತನಗೆ, ತನ್ನವರಿಗೆ, ತನ್ನ ಕುಟುಂಬಕ್ಕೆ ಒಳ್ಳೆಯದೇ ಆಗುತ್ತಿದ್ದರೂ ಮತ್ತು ಸರ್ವರೂ ಅವನಿಗೆ ಒಳ್ಳೆಯದನ್ನೇ ಬಯಸಿದರೂ, ಈ ಒಳ್ಳೆಯ ಬದಲಾವಣೆಯಲ್ಲಿ ತುಕ್ರನಿಗೆ ಒಂಚೂರು ಸುಖವಿಲ್ಲ. ಬದಲಾಗಿ ಏನೋ ತಪ್ಪಾಗುತ್ತಿದೆ ಎನ್ನುವ ಭಾವವೇ ಅವನಲ್ಲಿ ಅಧಿಕ. ತುಕ್ರ ಅದೆಷ್ಟು ಮುಗ್ಧ ಹಾಗೂ ಅವನ ಅಂತರಂಗದ ಚೀರಾಟಗಳು, ತುಮುಲಗಳು ಎಂತಹದ್ದು ಎಂದು ಗೊತ್ತಾಗಬೇಕಾದರೆ ನಾವು ನಮ್ಮ ನಮ್ಮ ಹಳ್ಳಿಗಳಲ್ಲಿ ಇರಬಹುದಾದ ತುಕ್ರನಂತವರನ್ನು ಬಹಳ ಹತ್ತಿರದಿಂದ ಕಂಡಿರಬೇಕು ಹಾಗೂ ಅಂತಹ ತುಕ್ರರ ಚಿತ್ರವನ್ನು ನಮ್ಮೊಳಗೂ ಒಂದಿಷ್ಟು ಇಳಿಸಿಕೊಂಡಿರಬೇಕು, ಮತ್ತದನ್ನು ಈಗಲೂ ಹಾಗೇ ಜೋಪಾನವಾಗಿ ಉಳಿಸಿಕೊಂಡಿರಬೇಕು. ಹಾಗಿದ್ದರೆ ಖಂಡಿತವಾಗಿಯೂ ಕೊನೆಯಲ್ಲಿ ಇದು ನಮಗೆ 'ವಾಹ್' ಅನುಭವವನ್ನು ಕೊಡುವಂತಹ ಕತೆಯೇ ಹೌದು. ಈ ಕಥಾ ಸಂಕಲನದಲ್ಲಿ ಇದುವೇ ನನಗೆ ಬಹಳವಾಗಿ ಹಿಡಿಸಿದಂತಹ ಕತೆ.



'ದರ್ಪಣ ಸುಂದರಿ', 'ಮುಖವಾಡ' ಸರಳ ಕತೆಗಳಾದರೂ ಚಿಕ್ಕವಾಗಿಯೂ, ಅಷ್ಟೇ ಚೊಕ್ಕವಾಗಿಯೂ ಇವೆ. ಆದರೆ ಈ ಸಂಕಲನದ ನಗರದ ಕತೆಗಳು ಮಾತ್ರ ಇಲ್ಲಿ ಸಾಮಾನ್ಯ ಕತೆಗಳಾಗಿ ಗೋಚರಿಸುತ್ತವೆ. ಸ್ವತಃ ಪರಿಸರ ಪ್ರೇಮಿ ಆದಂತಹ ದಿನೇಶ್ ಹೊಳ್ಳ ಅವರ ಲೇಖನಿಯಿಂದ ಇನ್ನೂ ಒಂದಿಷ್ಟು ಬೆಟ್ಟ ಗುಡ್ಡಗಳ, ಗಿರಿ ಕಂದರಗಳ, ತೋಡು ತೊರೆಗಳ ಜುಳು ಜುಳು ಕತೆಗಳು ಈ ಕಥಾ ಸಂಕಲನದಲ್ಲಿ ಮೂಡಿ ಬರಬೇಕಿತ್ತು ಎನ್ನುವುದು ನನ್ನೊಂದು ಸಹಜವಾದ ಮುಗಿಲು ಮುಟ್ಟುವ ಆಕ್ರಂಧನ. ಏಕೆಂದರೆ ಪಶ್ಚಿಮ ಘಟ್ಟದ ದಟ್ಟ ಕಾಡುಗಳ ಉಚ್ವಾಸ ನಿಶ್ವಾಸಗಳ ಪರಿಚಯ ಅವರಿಗೆ ದೀರ್ಘ ಕಾಲದಿಂದ ಬಹಳ ಚೆನ್ನಾಗಿಯೇ ಗೊತ್ತಿರುವುದರಿಂದ, ಅವುಗಳ ಸಲುವಾಗಿನ ಅವರದ್ದೊಂದು ಹೋರಾಟದ ಹೆಜ್ಜೆಗಳು ಮತ್ತು ಅನುಭವದ ಕತೆಗಳು ಕೂಡ ಅವರ ಬಳಿ ಬಹಳಷ್ಟು ಹೆಚ್ಚೇ ಇರುವುದರಿಂದ, ಅವರ ಅಂತಹ ಇನ್ನೂ ಹೆಚ್ಚಿನ ಸಂಖ್ಯೆಯ ಪರಿಸರದ ಸಂಗತಿಗಳು ಕತೆಯಾಗಿ ಇದರಲ್ಲಿ ಮೂಡಿ ಬಂದಿದ್ದರೆ ಹಸಿದ ಓದುಗರಿಗೆ ಈ ಸಂಕಲನ ಇನ್ನಷ್ಟು ಸುಗ್ರಾಸ ಭೋಜನವಾಗುತ್ತಿತ್ತು ಎಂದು ನನಗನಿಸಿತು, ಆದರೂ ಪರಿಸರದ ಬಗ್ಗೆ ಲೇಖಕರು ಇಲ್ಲಿ ಬರೆದಿದೆಲ್ಲವೂ ಚೊಕ್ಕವಾಗಿಯೇ ಇದೆ. 


ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಲೇಖಕರು ಈ ಕಥಾ ಸಂಕಲನದಲ್ಲಿ ಸೃಷ್ಟಿಸಿದ ಹೆಚ್ಚಿನ ಎಲ್ಲಾ ಪಾತ್ರಗಳು ಒಂದಲ್ಲ ಒಂದು ರೀತಿಯಲ್ಲಿ ನಮಗೆ ತುಂಬಾ ಮುಗ್ಧವಾಗಿ ಗೋಚರಿಸುತ್ತವೆ ಹಾಗೂ ಆ ಮುಗ್ಧತೆಯ ಕಾರಣದಿಂದಾಗಿಯೇ ಅವುಗಳು ಅವಸಾನದಂಚಿಗೆ ತಲುಪುತ್ತವೆ ಇಲ್ಲವೇ ಹೊಸ ಅಧ್ಯಾಯನ ಬರೆಯುವುದಕ್ಕಾಗಿ ಅನಿವಾರ್ಯವಾಗಿ ಮಗ್ಗುಲು ಬದಲಾಯಿಸಬೇಕಾಗುತ್ತದೆ. ಬಹುಶಃ ನಮ್ಮ ಪರಿಸರ ನೇರವಾಗಿ ವ್ಯಕ್ತಪಡಿಸಲಾಗದ್ದನ್ನು ತಮ್ಮ ಪಾತ್ರಗಳ ಮೂಲಕವೇ ಲೇಖಕರು ಇಲ್ಲಿ ವ್ಯಕ್ತಪಡಿಸಿದ್ದಾರೆ ಮತ್ತು ಅದರಲ್ಲಿ ಬಹಳಷ್ಟು ಯಶಸ್ವಿಯೂ ಆಗಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ. 



#ಬೆಟ್ಟದ_ಹೆಜ್ಜೆಗಳು  |  ಕಥಾ ಸಂಕಲನ 

ಲೇಖಕರು - ದಿನೇಶ್ ಹೊಳ್ಳ

ಪ್ರಕಾಶಕರು - ಗಾಯತ್ರಿ ಪ್ರಕಾಶನ,ಕಿನ್ನಿಗೋಳಿ

ಪ್ರಥಮ ಮುದ್ರಣ - 

ಪುಟಗಳ ಸಂಖ್ಯೆ-62

ಬೆಲೆ - 60 Rs. 


ಪುಸ್ತಕಗಳು 

Ab Pacchu

(https://phalgunikadeyavanu.blogspot.com)

Comments

Popular posts from this blog

VIKINGS - S06E20

ಗಗನದ ಸೂರ್ಯ

ಪಯ್ಯನ ಪರಾಕ್ರಮ