ಗಗನದ ಸೂರ್ಯ

ನಿನಗೆ ಹಣೆಗೆ ಬಿಂದಿ ಹಚ್ಚಿಕೊಳ್ಳಲು ಆ ಆಫೀಸಿನಲ್ಲಿ ಅದೆಷ್ಟೋ ಗಾಜಿನ ಗೋಡೆಗಳಿದ್ದವು. ಆದರೂ ನೀನು ನನ್ನೆದುರು ಇದ್ದ ಗಾಜಿನ ಮುಂದೆಯೇ ಪ್ರತೀ ಸಲವೂ ಬಂದು ನಿಲ್ಲುತ್ತಿದ್ದೆ. ಏಕೆ? ಅದೂ ಕೂಡ ನಾನು ಆ ಒಂದು ಗಾಜಿನ ಮತ್ತೊಂದು ಬದಿಯಲ್ಲಿ ಬಂದು ಎಲ್ಲೆಲ್ಲೋ ನೋಡಿಕೊಂಡು ನನ್ನಷ್ಟಕ್ಕೆ ನಿಂತುಕೊಂಡ ಮರುಘಳಿಗೆಯಲ್ಲೇ! ಸಂಪೂರ್ಣ ಪಾರದರ್ಶಕ ಗಾಜದು. ಆ ಕೋಣೆಯ ನೀನು, ಈ ಕೋಣೆಯ ನಾನು, ನೀನು ಬಂದು ನಿಂತ ಆ ಕ್ಷಣಕ್ಕೆ ನಾವಿಬ್ಬರು ಅಲ್ಲೇ ಪರಸ್ಪರ ಎದುರುಬದುರು. ಸರಿಯಾಗಿ ಬಿಂಬವೇ ಮೂಡದ ಅಂತಹದ್ದೊಂದು ಗಾಜಲ್ಲಿ ಏನನ್ನು ನೋಡಿಕೊಂಡು ಹಣೆಯ ಬಿಂದಿಯನ್ನು ಅಷ್ಟೊಂದು ಸರಿಯಾಗಿ, ಸಲೀಸಾಗಿ ಹಣೆಯ ನಡುವಿಗೆ ಸಿಕ್ಕಿಸಿಕೊಳ್ಳುತ್ತಿದ್ದೆ ನೀನು. ನಿನ್ನ ಈ ವರ್ತನೆಯಿಂದ ವಿಲವಿಲ ಎಂದು ಒದ್ದಾಡಿ ಬಿಟ್ಟ ನನ್ನ ಕಣ್ಣ ಫಳಫಳ ಗಾಜನ್ನು ನೋಡಿಯೇ? ಬರೀ ಅಷ್ಟೇ ಆಗಿದ್ದರೆ ನಾನಂದು ಅಷ್ಟೊಂದು ಸೋಲುತ್ತಿರಲಿಲ್ಲ. ಬಿಂದಿ ಅಂಟಿಸುತ್ತಲೇ ಇದೊಂದು ಹಾಡಿನ ಸಾಲನ್ನು ಕೂಡ ಮೆಲ್ಲಗೆ ಗುನುಗಿ ಬಿಟ್ಟಿದ್ದೆ ನೀನು ... " ಗಗನದ ಸೂರ್ಯ ಮನೆ ಮೇಲೆ, ನೀ ನನ್ನ ಸೂರ್ಯ ಹಣೆ ಮೇಲೆ ಚಿಲಿಪಿಲಿ ಹಾಡು ಎಲೆ ಮೇಲೆ ನಿನ್ನ ಪ್ರೀತಿ ಹಾಡು ಎದೆ ಮೇಲೆ.... " ಅಮೃತವರ್ಷಿಣಿಯ ಹಾಡದು. ಆದರೆ ಏಕೆ? ಯಾರಿಗಾಗಿ! ನೀನದನ್ನು ನನ್ನೆದುರು ಗುನುಗಬಾರದಿತ್ತು ಪುನರ್ವಸು!! ಆಮೇಲೆಯೂ ನಾನು ಗಾಜಿನೆದುರು ಬಂದಾಗಲೆಲ್ಲ ನೀನು ಮತ್ತ...