ಮೊಬೈಲ್ ಗೇಮು ಮತ್ತು ಗ್ರೌಂಡಿನ ಆಟ..

ಪ್ರತೀ ಗ್ರೌಂಡಿನಲ್ಲಿ ಒಬ್ಬ ಕೊಡುಗೈ ದಾನಿ ಇದ್ದೇ ಇರುತ್ತಾನೆ ಮತ್ತು ಪ್ರತೀ ಸಲ ಬಾಲ್ ಒಡೆದು ಹೋದಾಗ ಇಲ್ಲವೇ ಬಾಲ್ ಬಿಸಾಡಿ ಹೋದಾಗ ದೇವರಂತೆ ಅವನು ಎಲ್ಲರಿಗೂ ಅತೀ ಹೆಚ್ಚು ನೆನಪಾಗಿ ಬಿಡುತ್ತಾನೆ. ಈಗ ಆಟವಾಡಲು ಎಲ್ಲರಿಗೂ ಬಾಲ್,ಬ್ಯಾಟ್ ಅಂತಹ ದೊಡ್ಡ ಸಮಸ್ಯೆಯೇ ಅಲ್ಲ.ಆದರೆ ಚಿಕ್ಕಂದಿನಲ್ಲಿ ಇಂತವರು ಇರದಿದ್ದರೆ ಗ್ರೌಂಡಿನಲ್ಲಿ ಆಟವೇ ಮುಂದುವರಿಯುತ್ತಿರಲಿಲ್ಲ.ಪ್ರತೀ ಹೊಸ ಬಾಲ್ ಕೂಡ ಆವಾಗ ನಮಗೆ ಗಗನ ಕುಸುಮವೇ ಆಗಿತ್ತು. ಆಗ ಆಡಲು ಬೇಕಾದಷ್ಟು ಜನ ಇದ್ದರು,ಆದರೆ ಬಾಲ್ ತೆಗೆಸಿಕೊಡುವವರು ಕಮ್ಮಿ ಇದ್ದರು.ಈಗ ಬಾಲ್ ಬ್ಯಾಟ್ ಏನೋ ರಾಶಿ ರಾಶಿಯೇ ಇದೆ,ಆದರೆ ಆಟವಾಡುವುದಕ್ಕಾಗಿ ಗ್ರೌಂಡಿನಲ್ಲಿ ಒಂದತ್ತು ಜನ ಒಟ್ಟು ಮಾಡುವುದೇ ಭಯಂಕರ ಕಷ್ಟವಾಗಿ ಬಿಟ್ಟಿದೆ.ಗ್ರೌಂಡಿಗೆ ಬನ್ನಿ ಎಂದು ಕೈ ಕಾಲು ಹಿಡಿಯಬೇಕಾದ ಪರಿಸ್ಥಿತಿಯೇ ನಿರ್ಮಾಣವಾಗಿ ಬಿಟ್ಟಿದೆ. ಇಂದು ಮೊಬೈಲ್ ಇನ್ನಿಲ್ಲದಂತೆ ಎಲ್ಲಾ ಕಡೆ ವಿಜೃಂಭಿಸಿದೆ,ಅದು ಮಕ್ಕಳ ಮೈದಾನದ ಆಟವನ್ನು ಹಾಗೇ ನಿಧಾನಕ್ಕೆ ಕಸಿದುಕೊಳ್ಳುತ್ತಿದೆ,ಗ್ರೌಂಡಿಗೆ ಹೋಗಿ ಆಟವಾಡುವ ಉಮೇದು ಈಗೀನ ಕಾಲದ ಪುಟ್ಟ ಮಕ್ಕಳಲ್ಲಿ ಕಂಡು ಬರುತ್ತಲೇ ಇಲ್ಲ. ಸಂಜೆಯ ವೇಳೆ ಎಲ್ಲಾದರೂ ಖಾಲಿ ಖಾಲಿಯಾಗಿ ಬಣಗುಡುವ ಮೈದಾನ ಕಣ್ಣಿಗೆ ಬಿದ್ದರೆ ಅದಕ್ಕಿಂತ ಬೇಜಾರಿನ ಸಂಗತಿ ನಿಜವಾಗಿಯೂ ಬೇರಾವುದೂ ಇಲ್ಲ.ಚಿಕ್ಕಂದಿನಲ್ಲಿ ಆದರೆ ನಾವೆಲ್ಲರೂ ಮನೆಯ ಸುತ್ತ ಮುತ್ತ,ಗುಡ್ಡ,ಗದ್ದೆ ಎಲ್ಲೇ ...