ಅವಳು ಸದಾ ನಗುತ್ತಿರಬೇಕು..!

" ಪುಷ್ಯರಾಗ " (ಅವಳು ಸದಾ ನಗುತ್ತಿರಬೇಕು..!) ಇಬ್ಬರೂ ನೆಲದ ಮೇಲೆ ಒಟ್ಟೊಟ್ಟಿಗೆ ಕುಳಿತುಕೊಂಡು ಟಿವಿ ನೋಡುತ್ತಿದ್ದೆವು. ಟಿವಿ ಕಡೆಗೆ ಕೈ ತೋರಿಸಿ "ನನಗೂ ಅವಳ ಹಾಗೆಯೇ ಆಗಬೇಕು..." ಎಂದು ಬಿಟ್ಟಳು ವಸು. ಅವಳು "ಪುನರ್ವಸು"... ಹೌದು ಅವಳು ಮಳೆಯದ್ದೇ ನಕ್ಷತ್ರ ಪುನರ್ವಸು. ವಸು ಸಿರಿವಂತರ ಮನೆಯ ಹುಡುಗಿ. ಅವಳು ಮನಸ್ಸು ಕೂಡ ಅಷ್ಟೇ ಶ್ರೀಮಂತವಾಗಿತ್ತು. ನಾವಿಬ್ಬರೂ ಆಗ ತುಂಬಾ ಸಣ್ಣವರು. ಬಡತನ ನನ್ನನ್ನು ಬಹಳ ಚಿಕ್ಕಂದಿನಲ್ಲಿಯೇ ಅಪ್ಪಿ ಮುದ್ದಾಡಿ ಬಿಟ್ಟಿತ್ತು.ಅಪ್ಪ ಅಮ್ಮನನ್ನು ಸಹ ಬದುಕು ಬಲು ಬೇಗ ನನ್ನಿಂದ ಕಸಿದುಕೊಂಡು ಕೇಕೆ ಹಾಕಿ ನಕ್ಕಿತ್ತು. ಅಜ್ಜಿ ಒಬ್ಬಳೇ ನನ್ನ ಬದುಕಿನ ಆಧಾರಸ್ತಂಭವಾಗಿದ್ದಳು ಮತ್ತು ಅವಳಿಗೆ ನಾನು.. ವಸುವಿನ ತಂದೆ ತಾಯಿ ದೇವರಂತಹ ಮನುಷ್ಯರು. ವಸು ಜೊತೆಗೆ ನನ್ನನ್ನೂ ಕೂಡ ಬೆಳೆಸಿದರು.. ಹೆಚ್ಚು ಕಡಿಮೆ ಮನೆ ಮಗನಂತೆಯೇ. ನಾನು ಹೆಚ್ಚಾಗಿ ಅವರ ಮನೆಯಲ್ಲಿಯೇ ಇರುತ್ತಿದ್ದೆ. ನನಗೆ "ಪುಷ್ಯರಾಗ.." ಎಂದು ಬಹಳ ಸುಂದರವಾದ ಸಂಪದ್ಭರಿತವಾದ ಹೆಸರು ಇಟ್ಟದ್ದು ಕೂಡ ವಸು...