ಒಂದು ಹೊಳೆಯ ಸಿಲ್ಕು ಸೀರೆ..!
ನೀರಿಗೆ ಬಣ್ಣ ಹಚ್ಚಲು ಸಾಧ್ಯವಿಲ್ಲ,ಆದರೆ ಬಣ್ಣವನ್ನು ಹಾಸಬಹುದು.ನಾನು ನೋಡಿದ್ದೇನೆ,ನಮ್ಮೂರ ಹೊಳೆ ರಂಗಾಗಿದ್ದನ್ನು,ನಿಧಾನಕ್ಕೆ ಬಣ್ಣ ಬದಲಾಯಿಸಿದ್ದನ್ನು ನಾನು ಬಹಳ ಹತ್ತಿರದಿಂದಲೇ ಗಮನಿಸಿದ್ದೇನೆ.ಅದೂ ಕೂಡ ಒಂದೆರೆಡು ಬಾರಿ ಅಲ್ಲ,ನಾನು ಹೋದ ಪ್ರತೀ ಬಾರಿಯೂ ಹರಿಯುವ ಹೊಳೆಯ ಆ ನೀರಿಗೆ ಹಲವಾರು ಬಣ್ಣ. ಹೊಳೆ ಬದಿ ಹೋಗಲು ಒಬ್ಬೊಬ್ಬರಿಗೆ ಒಂದೊಂದು ಕಾರಣ.ನನ್ನ ತಮ್ಮ ಸತೀಶನೂ ಅಲ್ಲಿಗೆ ಹೋಗುತ್ತಾನೆ.ಅವನಲ್ಲಿ ಗಾಳ ಹಾಕುತ್ತಾನೆ;ಹೊಳೆಯ ರುಚಿಯಾದ ಮೀನುಗಳಿಗೆ.ಗಾಳ ಮೀನಿಗೆ ಮಾತ್ರ ಹಾಕುತ್ತಾರೆ,ಹಾಗಂತ ನಾನು ತಿಳಿದುಕೊಂಡಿದ್ದೆ! ಅವನು ಮಾತ್ರವಲ್ಲ ಊರಿನ ಹಲವು ಹುಡುಗರು ಬಿಡುವಿನ ವೇಳೆಯಲ್ಲಿ ಆ ಹೊಳೆಯ ದಂಡೆಯಲ್ಲಿ ಗಾಳ ಹಿಡಿದು ನಿಂತಿರುತ್ತಾರೆ.ಕೆಲವರಿಗೆ ಸಮಯ ಕಳೆಯಲು ಗಾಳ ಹಾಕುವುದು ಒಂದು ಹವ್ಯಾಸ,ಇನ್ನು ಕೆಲವರಿಗೆ ಹೊಳೆಯೊಳಗಿನ ರುಚಿಕರ ಮೀನು ತಿಂದೇ ಅಭ್ಯಾಸ. ನನಗೆ ಈ ಗಾಳ,ಹೊಳೆಯ ಮೀನು ಎಲ್ಲದಕ್ಕಿಂತಲೂ ಹೆಚ್ಚು ಇಷ್ಟವಾಗುವುದು ಸ್ವತಃ ಹೊಳೆಯೇ. ತೀರಾ ಒಬ್ಬಂಟಿ ಅಂತ ಅನಿಸಿದಾಗ ಹೊಳೆ ಬದಿಗೆ ಬಂದು ಸುಮ್ಮನೆ ಕುಳಿತುಕೊಳ್ಳುತ್ತೇನೆ.ಮನಸ್ಸು ಹೇಳಿದರೆ ಮೈಯ ಬಟ್ಟೆ ಬಿಚ್ಚಿ ನೀರಿಗೆ ಜಿಗಿಯುತ್ತೇನೆ,ಮೀನು ಕೂಡ ಬೆರಗಾಗುವಂತೆ ಸಲೀಸಾಗಿ ಈಜುತ್ತೇನೆ.ಹೊಳೆ ಇನ್ನು ಈಜು ಸಾಕು ಎಂದು ಮನಸ್ಸಿಗೆ ಹೇಳಿ ಬಿಟ್ಟರೆ ಮತ್ತೆ ದಡ ಸೇರುತ್ತೇನೆ.ಒದ್ದೆಯಾದ ನಂತರ ಬಿಸಿಲಿಗೆ ಮೈ ಒಡ್ಡುವುದರಲ್ಲಿ ಕೆಲವರಿಗಷ್ಟೇ ಸುಖ ಸ...